ಬಳ್ಳಾರಿ: ನಗರದಲ್ಲಿ ಸೋಮವಾರ ಮಧ್ಯಾಹ್ನ ಮಳೆ ಸುರಿಯುತ್ತಿದ್ದ ಸಂದರ್ಭ ಭಾರಿ ಗುಡುಗು- ಸಿಡಿಲಿನ ಸದ್ದಿಗೆ ಬೆಚ್ಚಿದ ಸೈಕಲ್ ರಿಕ್ಷಾ ಚಾಲಕನೊಬ್ಬ ತೀವ್ರ ಹೃದಯಾಘಾತಕ್ಕೀಡಾಗಿ ಮೃತಪಟ್ಟ ಘಟನೆ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಸಂಭವಿಸಿದೆ.
ನಗರದ ಕೋಟೆ ಪ್ರದೇಶದ, ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿಯ ನಿವಾಸಿ ರಾಜೇಸಾಬ್ (52) ಎಂಬ ವ್ಯಕ್ತಿಯೇ ಗುಡುಗಿನ ಸಪ್ಪಳಕ್ಕೆ ಬೆಚ್ಚಿ ಹೃದಯಾಘಾತ ಸಂಭವಿಸಿ ಮೃತಪಟ್ಟ. ಕೆಲವು ವಸ್ತುಗಳನ್ನು ತನ್ನ ಸೈಕಲ್ ರಿಕ್ಷಾದ ಮೂಲಕ ಸಾಗಿಸುತ್ತಿದ್ದ ಸಂದರ್ಭ ಮಳೆ ಸುರಿಯಲಾರಭಿಸಿದ್ದರಿಂದ ಜಿಲ್ಲಾಧಿಕಾರಿ ಕಚೇರಿ ಆವರಣ ಪ್ರವೇಶಿಸಿ ರಕ್ಷಣೆಗೆ ನಿಂತಿದ್ದ ಈ ಘಟನೆ ಸಂಭವಿಸಿದೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ಮುಂದುವರಿದಿದೆ.
ವಿದ್ಯುತ್ ಸ್ಪರ್ಶ; ಎತ್ತುಗಳ ಸಾವು: ಮಳೆ ಸುರಿಯುವ ಸಂದರ್ಭ ಬೀಸಿದ ಭಾರಿ ಗಾಳಿಗೆ ವಿದ್ಯುತ್ ತಂತಿ ಕತ್ತರಿಸಿ ನೆಲಕ್ಕೆ ಬಿದ್ದಾಗ ಅದೇ ಜಾಗೆಯ ಮೂಲಕ ಸಾಗುತ್ತಿದ್ದ ಎರಡು ಎತ್ತುಗಳು ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿರುವ ಘಟನೆ ತಾಲ್ಲೂಕಿನ ಲಕ್ಷ್ಮಿನಗರ ಕ್ಯಾಂಪ್‌ನಲ್ಲಿ ಸೋಮವಾರ ಸಂಜೆ ಸಂಭವಿಸಿದೆ. ಈ ಎತ್ತುಗಳ ಮೌಲ್ಯ ರೂ 60 ಸಾವಿರ ಎಂದು ತಿಳಿದುಬಂದಿದೆ. ತಹಶೀಲ್ದಾರ್ ಶಶಿಧರ ಬಗಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.