ADVERTISEMENT

ಸಿರುಗುಪ್ಪ: ಮೂರು ದಿನಕ್ಕೊಮ್ಮೆ ಕುಡಿವ ನೀರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2012, 5:20 IST
Last Updated 4 ಜುಲೈ 2012, 5:20 IST
ಸಿರುಗುಪ್ಪ: ಮೂರು ದಿನಕ್ಕೊಮ್ಮೆ ಕುಡಿವ ನೀರು
ಸಿರುಗುಪ್ಪ: ಮೂರು ದಿನಕ್ಕೊಮ್ಮೆ ಕುಡಿವ ನೀರು   

ಸಿರುಗುಪ್ಪ: ಪಟ್ಟಣದ ಜನತೆಗೆ ಪ್ರತಿ ಮೂರು ದಿನಕ್ಕೊಮ್ಮೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ಪುರಸಭೆ ಅಧ್ಯಕ್ಷ ಬಿ.ಈರಣ್ಣ ತಿಳಿಸಿದ್ದಾರೆ.ಇಲ್ಲಿಗೆ ಸಮೀಪದ ದೇಶನೂರು ಗ್ರಾಮದ ಬಳಿ ತುಂಗಭದ್ರಾ ನದಿಯ ಹರಗೋಲುಘಾಟ್‌ನಿಂದ ಕುಡಿಯುವ ನೀರನ್ನು ಪೂರೈಕೆ ಮಾಡುವ ಸ್ಥಳಕ್ಕೆ ಸೋಮವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಪತ್ರಕರ್ತರಿಗೆ ಮಾಹಿತಿ ನೀಡಿದರು.

ನದಿಯಲ್ಲಿ ಜಲಸಂಪನ್ಮೂಲ ಸಂಪೂರ್ಣಬತ್ತಿ ಹೋಗಿದ್ದು, ನದಿಯ ಮಧ್ಯಭಾಗದಲ್ಲಿ ಪ್ರಕೃತಿದತ್ತವಾಗಿ ದೊಡ್ಡ ಪ್ರಮಾಣದ ನೀರು ಸಂಗ್ರಹವಿರುವ ಹರಗೋಲುಘಾಟ್‌ನಿಂದ ಎರಡು ವಿದ್ಯುತ್ ಪಂಪ್ ಅಳವಡಿಸಿ ಸುಮಾರು ನಾಲ್ಕು ಕಿ.ಮೀ ದೂರದಲ್ಲಿರುವ ಹಳೇ ಜಾಕ್‌ವೆಲ್‌ಗೆ ನೀರು ಪೂರೈಸಿ ಪಟ್ಟಣದ ಜನತೆಗೆ ಮೂರು ದಿನಕ್ಕೊಮ್ಮೆ ನೀರು ಸರಬರಾಜು ಮಾಡುವ ವ್ಯವಸ್ಥೆಗೆ ಮುಂದಾಗಿದ್ದೇವೆ ಎಂದರು.

ಈ ಹರಗೋಲುಘಾಟ್‌ನಲ್ಲಿ ಒಂದು ತಿಂಗಳಿಗೆ ಆಗುವಷ್ಟು ನೀರಿನ ಸಂಗ್ರಹವಿದೆ.  ಪ್ರತಿನಿತ್ಯ  10 ಟ್ಯಾಂಕರ್‌ಗಳ ಮೂಲಕ ವಿವಿಧ ಬಡಾವಣೆಗಳಿಗೆ ನೀರು ಪೂರೈಸುವ ಕಾರ್ಯವನ್ನು ಸೋಮವಾರದಿಂದ ಆರಂಭಿಸಲಾಗಿದೆ ಎಂದು ತಿಳಿಸಿದರು.

ಪಟ್ಟಣದಲ್ಲಿ 88 ಕೊಳವೆ ಬಾವಿಗಳಿದ್ದು ಅದರಲ್ಲಿ 79 ಮಾತ್ರ ಕಾರ್ಯನಿರ್ವಹಿಸುತ್ತಿವೆ, ಇನ್ನೂ 20 ಕೊಳವೆ ಬಾವಿಗಳನ್ನು ಕೊರೆಸಲು ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗುವುದು ಎಂದರು. ಮುಖ್ಯಾಧಿಕಾರಿ ಎಫ್.ಟಿ.ಶಂಕ್ರಪ್ಪ, ಎಂಜಿನಿಯರ್ ಮಹಾದೇವ, ಉಸ್ಮಾನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.