ADVERTISEMENT

ಸಿರುಗುಪ್ಪ ಸುತ್ತ ಬೆಳೆದ ಪೈರಿಗೆ ಜಿಂಕೆಗಳ ಕಾಟ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2011, 6:05 IST
Last Updated 16 ಸೆಪ್ಟೆಂಬರ್ 2011, 6:05 IST

ಸಿರುಗುಪ್ಪ: ತಾಲ್ಲೂಕಿನ ಗಡಿಭಾಗದ ಹತ್ತಾರು ಹಳ್ಳಿಗಳಲ್ಲಿ ರೈತರು ತಮ್ಮ ಜಮೀನಿನಲ್ಲಿ ಬಿತ್ತನೆ ಮಾಡಿದ ಸಜ್ಜೆ, ನವಣೆ, ಶೇಂಗಾ, ಸೂರ್ಯಕಾಂತಿ, ಮೆಣಸಿನಕಾಯಿ, ತೊಗರಿ, ಹತ್ತಿ ಬೆಳೆಗಳು ಭೂಮಿಯಿಂದ ಚಿಗುರು ಒಡೆಯುತ್ತಿದ್ದಂತಯೇ ಜಿಂಕೆಗಳು ಹಿಂಡು ಹಿಂಡಾಗಿ ಬಂದು ಇಡೀ ಬೆಳೆಯನ್ನೇ ತಿಂದು ಫಸಲು ಬೆಳೆಯ ದಂತೆ ಹಾನಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ತಾಲ್ಲೂಕಿನ ರಾವಿಹಾಳು, ವೆಂಕಟಾ ಪುರ, ಅಲನಬೂರು, ನಾಗರಹಾಳು, ಬಿ.ಎಂ.ಸೂಗೂರು, ಇಟಿಗಿಹಾಳು, ನಾಡಂಗ, ಅಗಸನೂರು, ಬೀರಳ್ಳಿ, ಬಸರಳ್ಳಿ, ಅಕ್ಕತಂಗಿಯರಹಾಳು, ಕಲ್ಲು ಕುಟಕನಹಾಳು ಮತ್ತಿತರ ಗ್ರಾಮಗಳ ರೈತರ ಹೊಲಗಳಲ್ಲಿ ಪ್ರತಿನಿತ್ಯ ಜಿಂಕೆಗಳ ಹಿಂಡು ಬಂದು ಬೆಳೆದ ಫಸಲಿಗೆ ಲಗ್ಗೆ ಇಟ್ಟು ಚಿಗುರನ್ನು ತಿಂದು ತೇಗುತ್ತಿವೆ,
 

ಇವು ಒಂದಲ್ಲ ಎರಡಲ್ಲ ಸುಮಾರು 150ರಿಂದ 200 ರವರೆಗೆ ಒಂದು ಗುಂಪಿನಲ್ಲಿರುತ್ತವೆ ಎಂದು ಬೆಳೆ ಹಾನಿಗೊಳಗಾದ ಬಿ.ಎಂ.ಸೂಗೂರು ಗ್ರಾಮದ ರೈತರಾದ ಜಿ.ರಾಮಲಿಂಗಪ್ಪ ಮತ್ತು ವಾಸುದೇವರೆಡ್ಡಿ ಬುಧವಾರ ಜಿಂಕೆಗಳ ರಾದ್ಧಾಂತವನ್ನು ಪ್ರಜಾವಾಣಿ ಮುಂದೆ ತೋಡಿಕೊಂಡರು.

ಬೀಜ ಮೊಳಕೆ ಒಡೆಯುವುದರಿಂದ ಹಿಡಿದು ಪೈರು ಮೇಲೆ ಬರುವವರೆಗೂ ಈ ಜಿಂಕೆಗಳ ಕಾಟ ನಮಗೆ ನಿತ್ಯ ನರಕವಾಗಿದೆ. ಬೆಳೆಯ ಚಿಗುರು ತಿಂದ ಮೇಲೆ ಪುನಃ ಚಿಗುರು ಬೆಳೆಯಲು ದಿನಗಳೇ ಕಾಯಬೇಕು ಮತ್ತೊಮ್ಮೆ ಲಗ್ಗೆ ಇಟ್ಟು ಹೊಲದಲ್ಲಿ ಫಸಲೇ ಇಲ್ಲದಂತೆ ಮಾಡಿಬಿಡುವವು. ಈ ಜಿಂಕೆಗಳ ಕಾಟ ಸಾಕಾಗಿದೆ.

ಸರ್ಕಾರದವರು ಈ ಭಾಗದಲ್ಲಿ ಜಿಂಕೆಗಳ ವನವನ್ನು ಸ್ಥಾಪಿಸಿ ಇಲ್ಲಿ ಹೇರಳವಾಗಿ ಸಂಚರಿಸುವ ಜಿಂಕೆಗಳನ್ನು ಹಿಡಿದು ರೈತರ ಬೆಳೆಯನ್ನು ಉಳಿಸ ಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT