ADVERTISEMENT

ಸೆಪ್ಟೆಂಬರ್‌ನಲ್ಲಿ ಚುನಾವಣೆ ನಿಗದಿ

ಕುಡತಿನಿ, ಕೊಟ್ಟೂರು ಪಟ್ಟಣ ಪಂಚಾಯಿತಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2018, 10:18 IST
Last Updated 12 ಜೂನ್ 2018, 10:18 IST

ಬಳ್ಳಾರಿ: ಜಿಲ್ಲೆಯಲ್ಲಿ ಅವಧಿ ಪೂರ್ಣಗೊಳಿಸಲಿರುವ ಕೊಟ್ಟೂರು ಪಟ್ಟಣ ಪಂಚಾಯಿತಿ ಮತ್ತು ಮೇಲ್ದರ್ಜೆಗೇರಿದ ಕುಡತಿನಿ ಪಂಚಾಯಿತಿಗೆ ಚುನಾವಣೆಯು ಬರಲಿರುವ ಸೆಪ್ಟೆಂಬರ್‌ನಲ್ಲಿ ನಡೆಯಲಿದೆ. ಈ ಸಂಬಂಧ ಸಿದ್ಧತೆಯನ್ನು ಆರಂಭಿಸುವಂತೆ ಜಿಲ್ಲಾಡಳಿತಕ್ಕೆ ಚುನಾವಣಾ ಆಯೋಗ ಸೂಚನೆ ನೀಡಿದೆ.

ಮತದಾರರ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸಬೇಕು. ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸುವುದು, ಕರಡು ಮತದಾರರ ಪಟ್ಟಿ ಪ್ರಕಟಿಸುವ ಮುನ್ನವೇ ಮತಗಟ್ಟೆಗಳ ಪಟ್ಟಿಯನ್ನು ಹಾಗೂ ಮತದಾನ ಯಂತ್ರಗಳನ್ನು ಸಿದ್ಧಪಡಿಸಿಟ್ಟುಕೊಳ್ಳಬೇಕು. ಸಿಬ್ಬಂದಿ
ಯನ್ನು ನೇಮಿಸಿ ತರಬೇತಿಯನ್ನು ನೀಡಬೇಕು ಎಂದು ಆಯೋಗ ಸೂಚಿಸಿದೆ.

ಚುನಾವಣಾಧಿಕಾರಿ: ಪಟ್ಟಣ ಪಂಚಾಯಿತಿಯ ಪ್ರತಿ ಹತ್ತು ವಾರ್ಡ್‌ಗೆ ಒಬ್ಬರಂತೆ ಚುನಾವಣಾಧಿಕಾರಿಯನ್ನು ನೇಮಿಸಬೇಕು. ಅವರು ತಹಶೀಲ್ದಾರ್ ಅಥವಾ ಅವರಿಗೆಸಮಾನ ಹುದ್ದೆಯವರಾಗಿರಬೇಕು. ಶಿರಸ್ತೇದಾರ್‌ ಅಥವಾ ಅವರಿಗೆ ಸಮಾನ ಹುದ್ದೆಯಲ್ಲಿರುವವರನ್ನು ಸಹಾಯಕ ಚುನಾವಣಾಧಿಕಾರಿಯನ್ನಾಗಿ ನೇಮಿಸಬೇಕು. ಚುನಾವಣಾ ವೆಚ್ಚ ಪರಿಶೀಲನೆಗೂ ಅಧಿಕಾರಿಗಳನ್ನು ನೇಮಿಸಬೇಕು’ ಎಂದು ಆಯೋಗ ಜೂ.4ರಂದು ಎಲ್ಲ ಜಿಲ್ಲಾಧಿಕಾರಿಗಳಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದೆ.

ADVERTISEMENT

ಮೊದಲ ಚುನಾವಣೆ: ತಾಲ್ಲೂಕಿನ ಕುಡತಿನಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿ ಬಳಿಕ ಮೊದಲ ಚುನಾವಣೆಯನ್ನು ಎದುರಿಸುತ್ತಿದೆ. ಗ್ರಾಮ ಪಂಚಾಯಿತಿಯಾಗಿದ್ದ ಅದನ್ನು ಹಿಂದಿನ ವರ್ಷ ಮೇಲ್ದರ್ಜೆಗೇರಿಸಲಾಗಿತ್ತು.

ಮೊದಲ ಚುನಾವಣೆಯಾದರೂ, ಎರಡನೇ ಬಾರಿ ಅಧಿಸೂಚನೆ ಹೊರಡಿಸಿರುವುದು ವಿಶೇಷ. ಹಿಂದಿನ ವರ್ಷ ಇಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ಜಿಂದಾಲ್‌ ಸಂಸ್ಥೆಯ ಡಾಂಬರು ಕಾರ್ಖಾನೆ ಸ್ಥಾಪನೆಯನ್ನು ತಡೆಯುವವರೆಗೂ ಚುನಾವಣೆಗೆ ಬಹಿಷ್ಕಾರ ಹಾಕುತ್ತೇವೆ ಎಂದು ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿದ್ದರಿಂದ ಚುನಾವಣೆಯನ್ನು ಮುಂದೂಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.