ADVERTISEMENT

ಸ್ವಾಮಿನಾಥನ್ ವರದಿ ಜಾರಿಗೆ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 6:25 IST
Last Updated 11 ಜನವರಿ 2012, 6:25 IST
ಸ್ವಾಮಿನಾಥನ್ ವರದಿ ಜಾರಿಗೆ ಪ್ರತಿಭಟನೆ
ಸ್ವಾಮಿನಾಥನ್ ವರದಿ ಜಾರಿಗೆ ಪ್ರತಿಭಟನೆ   

ಬಳ್ಳಾರಿ: ರೈತರು ಬೆಳೆಗಳಿಗೆ ಬೆಂಬಲಬೆಲೆ ಘೋಷಿಸಬೇಕು. ತುಂಗಭದ್ರಾ ಬಲದಂಡೆಯ ಕೆಳಮಟ್ಟದ ಕಾಲುವೆಗೆ ಮಾರ್ಚ್ ಅಂತ್ಯದವರೆಗೂ ನೀರು ಹರಿಸಿ ಭತ್ತ ಬೆಳೆಗಾರರಿಗೆ ಅನುಕೂಲ ಕಲ್ಪಿಸಬೇಕು. ಡಾ.ಸ್ವಾಮಿನಾಥನ್ ವರದಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮಂಗಳವಾರ ಬಿತ್ತನೆಬೀಜ, ರಸಗೊಬ್ಬರ ಮತ್ತು ಕೀಟನಾಶಕ ಮಾರಾಟಗಾರರ ಸಂಘದ ನೇತೃತ್ವದಲ್ಲಿ ರೈತರು ಪ್ರತಿಭಟನೆ ನಡೆಸಿದರು.

ನಗರದ ಕನಕ ದುರ್ಗಮ್ಮ ದೇವಸ್ಥಾನದಿಂದ ಪ್ರತಿಭಟನಾ ಮೆರವಣಿಗೆ ಆರಂಭಿಸಿದ ನೂರಾರು ರೈತರು ಜಿಲ್ಲಾಧಿಕಾರಿ ಕಚೇರಿ ಎದುರು ಕೆಲಕಾಲ ಧರಣ ನಡೆಸಿದರು.

ಪ್ರತಿ ವರ್ಷವೂ ರಸಗೊಬ್ಬರ, ಕ್ರಿಮಿನಾಶಕ, ಕೃಷಿಕೂಲಿ ದರ ಹೆಚ್ಚುತ್ತಿದೆ. ಆದರೆ, ಕೃಷಿ ಉತ್ಪನ್ನಗಳ ಬೆಲೆ ಮಾತ್ರ ಹೆಚ್ಚುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರ ಅಭ್ಯುದಯವ್ನ ಒಳಗೊಂಡಿರುವ ಡಾ. ಸ್ವಾಮಿನಾಥನ್ ಆಯೋಗದ ವರದಿಯನ್ನು ಸರ್ಕಾರ ಕೂಡಲೇ ಜಾರಿಗೊಳಿಸಬೇಕು ಎಂದು ಅವರು ಕೋರಿದರು.

ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭತ್ತ ಬೆಳೆಯಲು ಈ ಮೊದಲೇ ಪ್ರಕಟಿಸಿದಂತೆ ತುಂಗಭದ್ರಾ ಬಲದಂಡೆಯ ಕೆಳ ಮಟ್ಟದ ಕಾಲುವೆಗೆ ಮಾರ್ಚ್ 30ರವರೆಗೆ ನೀರು ಸರಬರಾಜು ಮಾಡಬೇಕು. ರಸಗೊಬ್ಬರದ ಮೇಲಿನ ಮೌಲ್ಯಾಧಾರಿತ ತೆರಿಗೆ (ವ್ಯಾಟ್) ಕಡಿತಗೊಳಿಸಬೇಕು ಎಂದು ಆಗ್ರಹಿಸಲಾಯಿತು.

ರೈತರ ಪರ ಎಂದು ಹೇಳುವ ಸರ್ಕಾರಗಳು ರೈತರ ಉತ್ಪನ್ನಗಳ ಬೆಲೆ ನಿರ್ಧರಿಸುವಲ್ಲಿ ಮಾತ್ರ ಕಣ್ಣು ಮುಚ್ಚಿ ಕುಳಿತಿವೆ ಎಂದು ರೈತ ಮುಖಂಡರಾದ ಐನಾಥರೆಡ್ಡಿ, ರಂಗಾರೆಡ್ಡಿ ಆರೋಪಿಸಿದರು. ರಾಜಕೀಯ ಪಕ್ಷಗಳ ಮುಖಂಡರು ಕೇವಲ ಆಶ್ವಾಸನೆ ನೀಡುತ್ತ ಕೃಷಿಕರನ್ನು ವಂಚಿಸುತ್ತ ಕೃಷಿಕರ ಸಮಸ್ಯೆಗಳ ಪರಿಹಾರಕ್ಕೆ  ಆಸಕ್ತಿ ತೋರುತ್ತಿಲ್ಲ ಎಂದು ಅವರು ದೂರಿದರು.

ಪ್ರತ್ಯೇಕ ಬಜೆಟ್ ಮಂಡಿಸುವ ಮೂಲಕ ಸರ್ಕಾರ ಕೃಷಿ ಕ್ಷೇತ್ರಕ್ಕೆ ಸಾಕಷ್ಟು ವೆಚ್ಚ ಮಾಡುತ್ತಿದ್ದರೂ ಕೃಷಿಕರಿಗೆ ಪ್ರಯೋಜನವಾಗುತ್ತಿಲ್ಲ. ಕೃಷಿಕರಿಗೆ ಪೂರಕವಾಗಿರುವ ಹಾಗೂ ಕೃಷಿ ಬೆಳವಣಿಗೆ ಆಧರಿಸಿದ ಡಾ.ಸ್ವಾಮಿನಾಥನ್ ಆಯೋಗದ ವರದಿಯ ಅನುಷ್ಠಾನಕ್ಕೆ ಸರ್ಕಾರ ಮೀನ-ಮೇಷ ಎಣಿಸುತ್ತಿದೆ. ವರದಿ ಸಲ್ಲಿಕೆಯಾದರೂ ಅನುಷ್ಠಾನ ಆಗಿಲ್ಲ. ವರ್ಷದಿಂದ ವರ್ಷಕ್ಕೆ ಕೃಷಿ ಆಸಕ್ತರು ಪರ್ಯಾಯ ಉದ್ಯೋಗ ಕಂಡುಕೊಳ್ಳುತ್ತಿದ್ದು, ಭವಿಷ್ಯದಲ್ಲಿ ತೀವ್ರ ಆತಂಕ ಎದುರಾಗಲಿದೆ ಎಂದು ಅವರು ಹೇಳಿದರು.

ತುಂಗಭದ್ರಾ ಕಾಲುವೆಗೆ ನೀರು ಹರಿಸುವಲ್ಲಿ ತುಂಗಭದ್ರಾ ಆಡಳಿತ ಮಂಡಳಿ ಗೊಂದಲಮಯ ಹೇಳಿಕೆ ನೀಡುತ್ತಿರುವುದರಿಂದ ರೈತರು ಬೇಸಿಗೆ ಬೆಳೆ ಬೆಳೆಯಲು ಆಲೋಚನೆ ಮಾಡುವಂತಾಗಿದೆ ಎಂದು ಹೇಳಿದರು.

ಕೃಷಿ ಉತ್ಪನ್ನಗಳಿಗೆ ಸ್ವಾಮಿನಾಥನ್ ವರದಿ ಪ್ರಕಾರ ಕೃಷಿ ವೆಚ್ಚದ ಮೇಲೆ ಶೇ 50ರಷ್ಟು ಅಧಿಕ ಬೆಂಬಲಬೆಲೆ ಘೋಷಿಸಬೇಕು. ನಿಗದಿತ ವೇಳೆಗೆ ಖರೀದಿ ಕೇಂದ್ರ ಆರಂಭಿಸಬೇಕು. ಕಠಿಣ ನಿಬಂಧನೆಗಳಿಲ್ಲದೆ ರೈತರ ಬೆಳೆ ಖರೀದಿಸುವ ಸೌಲಭ್ಯ ಕಲ್ಪಿಸಬೇಕು. ಖರೀದಿ ಕೇಂದ್ರಗಳ ಕುರಿತು ಸಂಪೂರ್ಣ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿ ಮನವಿ ಸಲ್ಲಿಸಲಾಯಿತು.

ಮುದೇಗೌಡ, ರಘುರಾಮಕೃಷ್ಣ, ವೀರಭದ್ರಪ್ಪ, ರಮಣರೆಡ್ಡಿ, ಗೋಪಾಲರೆಡ್ಡಿ, ಪಿ.ರಾಮಕೃಷ್ಣರೆಡ್ಡಿ, ಶೇಷರೆಡ್ಡಿ, ಗೋವರ್ಧನರೆಡ್ಡಿ, ಚಾಗನೂರು ಮಲ್ಲಿಕಾರ್ಜುನರೆಡ್ಡಿ, ಚೆನ್ನನಗೌಡ, ಜ್ಞಾನಮೂರ್ತಿ, ಈಶ್ವರ್ ರಾವ್, ಚಂದ್ರಶೇಖರ್ ಮತ್ತಿತರರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.