ADVERTISEMENT

ಹತ್ತಿ ಬಂಪರ್‌ ಬೆಳೆ: ಧಾರಣಿ ನಿರೀಕ್ಷೆಯಲ್ಲಿ ರೈತರು...

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2013, 8:22 IST
Last Updated 12 ಡಿಸೆಂಬರ್ 2013, 8:22 IST

ಕುರುಗೋಡು: ಸತತ ನಷ್ಟದಲ್ಲಿಯೇ ಕಾಲದೂಡಿದ್ದ ರೈತರಿಗೆ ಈ ಬಾರಿಯಾದರೂ ಒಳ್ಳೆಯ ದಿನಗಳು ಬಂದಾವೇ?ಇದು ಕುರುಗೋಡು ಭಾಗದ ಹತ್ತಿ ಬೆಳೆಗಾರರ ಆತಂಕ ಮತ್ತು ನಿರೀಕ್ಷೆ. ಕುರುಗೋಡು ಮತ್ತು ಕೋಳೂರು ರೈತಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಈ ಬಾರಿ ರೈತರು 9,500 ಎಕರೆ ಭೂಪ್ರದೇಶದಲ್ಲಿ ವಿವಿಧ ತಳಿ ಹತ್ತಿ ಬೆಳೆಯುವ ಪ್ರಯತ್ನ ಮಾಡಿದ್ದು, ಅಧಿಕ ಇಳುವರಿ ಪಡೆಯುವ ಸಂಭ್ರಮದಲ್ಲಿ ಇದ್ದಾರೆ.

ಆದರೆ ಕಳೆದ ಎರಡು ವರ್ಷಗಳಿಂದ ವಿವಿಧ ಕಾರಣಗಳಿಂದ ಹತ್ತಿ ಬಂಪರ್ ಬೆಳೆ ಬಂದರೂ, ಉತ್ತಮ ಬೆಲೆ ದೊರೆಯದೆ ಕಿಸೆ ಖಾಲಿ ಎನ್ನುವುದು ಈ ಭಾಗದ ಹತ್ತಿ ಬೆಳೆಗಾರರ ಮಾತಾಗಿತ್ತು. ಸಕಾಲಕ್ಕೆ ಮಳೆಯಾಗದೆ ಅನಿಯಮಿತ ವಿದ್ಯುತ್ ಕಡಿತ ಮೊದಲಾದ ಕಾರಣಗಳಿಂದ ಕಳೆದ ಮೂರು ವರ್ಷಗಳಿಂದ ಈ ಭಾಗದ ರೈತರು ವಾಣಿಜ್ಯ ಬೆಳೆ ಹತ್ತಿ ಬೆಳೆಯುವುದನ್ನು ಕೈಬಿಟ್ಟು, ಮೆಣಸಿನಕಾಯಿ ಮತ್ತು ಮೆಕ್ಕೆಜೋಳ ಬೆಳೆಯಲು ಮುಂದಾಗಿದ್ದರು. ಸೂಕ್ತ ಬೆಲೆ ದೊರೆಯದ ಕಾರಣ ಮೆಣಸಿನಕಾಯಿ ಮತ್ತು ಮೆಕ್ಕೆಜೋಳವೂ ಅವರ ಪಾಲಿಗೆ ಮುಳ್ಳಾಗಿತ್ತು.

ಹಿಂದಿನ ಮೂರು ವರ್ಷಗಳಲ್ಲಿ ವಾತಾವರಣ ಮತ್ತು ಮಾರುಕಟ್ಟೆ ದೊಂಬರಾಟದಿಂದ ತೊಂದರೆ ಅನುಭವಿಸಿದ್ದರೂ, ಈ ವರ್ಷ ತುಂಗ­ಭದ್ರಾ ಜಲಾಶಯ ತುಂಬಿದ ಹಿನ್ನೆಲೆಯಲ್ಲಿ ಅವಧಿಗೆ ಮುನ್ನ ಕಾಲುವೆಗೆ ನೀರು ಹರಿಬಿಡ­ಲಾಗಿತ್ತು. ಪ್ರಾರಂಭದಿಂದ ಕಾಲಕಾಲಕ್ಕೆ ಉತ್ತಮ ಮಳೆಯಾಗಿದೆ.

ಕಳೆದ ವರ್ಷ ಹತ್ತಿ ಬೆಳೆಗೆ ಬೆಲೆ ಕುಸಿತ ಹೊರತುಪಡಿಸಿ, ಯಾವುದೇ ರೋಗಭಾದೆ ಕಾಣಿಸಿಕೊಂಡಿರಲಿಲ್ಲ. ಆದ್ದರಿಂದ ಸಂತುಷ್ಟಗೊಂ­ಡಿರುವ ರೈತಾಪಿವರ್ಗ ವಿವಿಧ ತಳಿ ಹತ್ತಿ ಬೆಳೆಯುವ ಪ್ರಯತ್ನ ಮಾಡಿದ್ದಾರೆ. ಹತ್ತಿ ಬೆಳೆಗೆ ಈ ವರ್ಷ ರೋಗಭಾದೆ ಕಾಡಿಸಿ ಬೆಳೆ ನಿರ್ವಹಣಾ ವೆಚ್ಚ ಹೆಚ್ಚಾದರು ಈ ವರ್ಷ ಹತ್ತಿ ಬೆಳೆ ಉತ್ತಮವಾಗಿ ಬೆಳೆದು ಹೆಚ್ಚಿನ ಇಳುವರಿಯ ನಿರೀಕ್ಷೆಯಲ್ಲಿರುವ ಬೆಳೆಗಾರರು ಹರ್ಷಗೊಂಡಿದ್ದಾರೆ.

ಒಂದು ಎಕರೆಗೆ ₨ 25 ರಿಂದ  30 ಸಾವಿರದ ವರೆಗೆ ನಿರ್ವಹಣಾ ವೆಚ್ಚ ತಗುಲಲಿದೆ. ಎಕರೆಗೆ ಕನಿಷ್ಠ 15 ರಿಂದ 20 ಕ್ವಿಂಟಲ್ ಬೆಳೆ ಬರುವ ನಿರೀಕ್ಷೆಯಿದೆ. ಕಳೆದ ವರ್ಷ ಪ್ರಾರಂಭದಲ್ಲಿ ಒಂದು ಕ್ವಿಂಟಲ್ ಗೆ ₨ 5000 ವರೆಗೆ ಇದ್ದ ಬೆಲೆ ಏಕಾಏಕಿ ₨ 3000 ಕ್ಕೆ ಕುಸಿದಿತ್ತು. ಆದರೆ ಈ ವರ್ಷ ಬೆಲೆ ಪ್ರತಿ ಕ್ವಿಂಟಲ್‌ಗೆ ₨ 4000 ರಿಂದ 4500 ವರೆಗೆ ಮಾರಾಟ ಮಾಡಲಾಗುತ್ತಿದೆ.

ಮಾರುಕಟ್ಟೆಯಲ್ಲಿ ಹತ್ತಿಗೆ ಹೆಚ್ಚು ಬೇಡಿಕೆ ಇದ್ದು, ರೈತರು ತಮ್ಮ ಬೆಳೆಗೆ ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ದೊರೆಯಬಹುದು ಎನ್ನುವ ನಿರೀಕ್ಷೆಯಲ್ಲಿದ್ದಾರೆ. ಈ ವರ್ಷ ಹತ್ತಿ ಬೆಳೆಗೆ ವಿವಿಧ ರೋಗ ಬಾಧೆ ಕಾಣಿಸಿಕೊಂಡಿದೆ. ಕ್ರಿಮಿನಾಶಕ, ರಸಗೊಬ್ಬರ ಬೆಲೆ ಗಗನಕ್ಕೇರಿದೆ. ಕಾರ್ಮಿಕ ಕೂಲಿ ದುಪ್ಪಟ್ಟಾಗಿದೆ.

ಪ್ರತಿವರ್ಷಕ್ಕಿಂತ ಈ ವರ್ಷ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಸರ್ಕಾರ ಕ್ವಿಂಟಲ್‌ಗೆ ಕೇವಲ ₨ 4000 ಬೆಂಬಲ ಬೆಲೆ ನಿಗದಿಗೊಳಿಸಿದೆ. ರೈತರನ್ನು ಸಂಕಷ್ಟದಿಂದ ಪಾರುಮಾಡಲು ಬೆಂಬಲ ಬೆಲೆ ಹೆಚ್ಚಿಸಬೇಕು ಎಂದು ಹತ್ತಿ ಬೆಳೆಗಾರ ಜಿ.ಕೆ.ದೇವೇಂದ್ರ ಸರ್ಕಾರವನ್ನು ಆಗ್ರಹಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.