ADVERTISEMENT

ಹದಗೆಟ್ಟು ಹೋಗಿವೆ ಹೊಚ್ಚಹೊಸ ರಸ್ತೆಗಳು...!

ಸಿದ್ದಯ್ಯ ಹಿರೇಮಠ
Published 3 ಡಿಸೆಂಬರ್ 2012, 6:17 IST
Last Updated 3 ಡಿಸೆಂಬರ್ 2012, 6:17 IST

ಬಳ್ಳಾರಿ: ಅಭಿವೃದ್ಧಿಯ ಜಪದೊಂದಿಗೆ ಮೂರು ವರ್ಷಗಳ ಹಿಂದಷ್ಟೇ ಹೊಸ ರೂಪ ಪಡೆದಿರುವ ನಗರದ ವಿವಿಧ ರಸ್ತೆಗಳು ಹದಗೆಟ್ಟು ಹೋಗಿದ್ದು, ಈ ರಸ್ತೆಗಳ ಮೂಲಕ ವೇಗವಾಗಿ ಸಾಗುವ ವಾಹನ ಸವಾರರಿಗೆ ಅಪಾಯ `ಕಟ್ಟಿಟ್ಟ ಬುತ್ತಿ' ಎಂಬ ಸ್ಥಿತಿ ಎದುರಾಗಿದೆ.

ಕೇವಲ 3 ವರ್ಷಗಳ ಹಿಂದಷ್ಟೇ ಅಭಿವೃದ್ಧಿ ಹೊಂದಿರುವ ಈ ಚತುಷ್ಫಥ ರಸ್ತೆಗಳಲ್ಲಿ ಅಲ್ಲಲ್ಲಿ ತಗ್ಗುಗಳು ನಿರ್ಮಾಣವಾಗಿದ್ದು, ಸಂಬಂಧಿಸಿದವರು ಅವುಗಳಿಗೆ ತೇಪೆ ಹಾಕುವ ಕೆಲಸವನ್ನೂ ಮಾಡದ್ದ ರಿಂದ ಆ ತಗ್ಗುಗಳನ್ನು ಬಳಸಿಕೊಂಡು ಹೋಗುವ ಅನಿವಾರ್ಯತೆ ವಾಹನ ಸವಾರರದ್ದಾಗಿದೆ.

ಅಪಾಯ ಕಟ್ಟಿಟ್ಟ ಬುತ್ತಿ: ರಸ್ತೆಗಳಲ್ಲಿ ಈ ರೀತಿಯ ತಗ್ಗುಗಳು ನಿರ್ಮಾಣವಾಗಿರುವ ಅರಿವಿರದೆ ವೇಗದಿಂದ ಸಾಗುವ ದ್ವಿಚಕ್ರ ವಾಹನ ಸವಾರರು ಈ ತಗ್ಗುಗಳಲ್ಲಿ ಸಿಲುಕಿಕೊಂಡು ಇದ್ದಕ್ಕಿದ್ದಂತೆಯೇ ನೆಲಕ್ಕುರುಳಿರುವ ಅನೇಕ ಘಟನೆಗಳು ನಡೆದಿದ್ದು, ಜನಪ್ರತಿನಿಧಿಗಳು ನಿತ್ಯವೂ ಈ ರಸ್ತೆಗಳ ದುರವಸ್ತೆ ಕಂಡೂ ಕಾಣದಂತೆ ಮುಂದಕ್ಕೆ ಸಾಗುತ್ತಿರುವುದು ಅಚ್ಚರಿ ಮೂಡಿಸಿದೆ.

ವಾಸ್ತವದಲ್ಲಿ ರಸ್ತೆ ಅಭಿವೃದ್ಧಿ ಮಾಡಿದವರು ಮೂರು ಅಥವಾ ಐದು ವರ್ಷಗಳ ಕಾಲ ಅವುಗಳ ನಿರ್ವಹಣೆ ಹೊಣೆಯನ್ನೂ ಹೊರುವುದು ರೂಢಿ. ನಿರ್ವಹಣೆ ಅವಧಿ ಪೂರ್ಣಗೊಂಡಿದ್ದಲ್ಲಿ ಮಹಾನಗರ ಪಾಲಿಕೆಯೇ ರಸ್ತೆಗಳ ನಿರ್ವಹಣೆ ಹೊಣೆಯನ್ನು ವಹಿಸಿಕೊಳ್ಳಬೇಕು. ಆದರೆ, ರಸ್ತೆ ಅಭಿವೃದ್ಧಿ ಪಡಿಸಿದವರಾಗಲಿ, ಮಹಾನಗರ ಪಾಲಿಕೆಯಾಗಲಿ ಈ ರಸ್ತೆಗಳ ತಗ್ಗುಗಳಿಗೆ ತೇಪೆ ಹಾಕುವ ಕೆಲಸವನ್ನೂ ಮಾಡದ್ದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆ ಎದುರಾಗುತ್ತಿದೆ.

ನಗರದ ಹೃದಯ ಭಾಗವಾಗಿರುವ ಗಡಿಗಿ ಚನ್ನಪ್ಪ ವೃತ್ತದಲ್ಲಿ ಅನಂತಪುರ ರಸ್ತೆಯತ್ತ ಹೊರುವ ತಿರುವಿನಲ್ಲೇ ರಸ್ತೆ ಕೆಟ್ಟುಹೋಗಿದೆ. ಅದೇ ರೀತಿ, ಇದೇ ರಸ್ತೆಯಲ್ಲಿನ ಗಾಂಧಿನಗರ ಪೊಲೀಸ್ ಠಾಣೆಯ ಎದುರೂ ಎರಡು ಮೀಟರ್‌ನಷ್ಟು ರಸ್ತೆ ಹದಗೆಟ್ಟಿದೆ.

ಕನಕ ದುರ್ಗಮ್ಮ ದೇವಸ್ಥಾನ, ಭವಿಷ್ಯ ನಿಧಿ ಕಚೇರಿ ಎದುರಿನ ರಸ್ತೆಯಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ನಗರದ ಮೋತಿ ವೃತ್ತದಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಂತೂ ಅನೇಕ ವರ್ಷಗಳಿಂದ ಕೆಟ್ಟಿದ್ದು, ಅದರ ದುರಸ್ತಿ ಕಾರ್ಯ ಆರಂಭಿಸುವ ಸೂಚನೆಗಳೇ ದೊರೆಯುತ್ತಿಲ್ಲ.

ಕಳಪೆ ಕಾಮಗಾರಿ: ರಸ್ತೆಗಳ ಅಭಿವೃದ್ಧಿ ಕಾರ್ಯ ಕಳಪೆಯಾಗಿರುವ ಹಿನ್ನೆಲೆಯಲ್ಲಿ ಅತ್ಯಂತ ಕಡಿಮೆ ಅವಧಿಯಲ್ಲೇ ರಸ್ತೆಯ ಮೇಲೆ ಅಲ್ಲಲ್ಲಿ ಅಪಾಯ ಕಾರಿ ತಗ್ಗುಗಳು ನಿರ್ಮಾಣವಾಗಿವೆ. ಕೆಲವೆಡೆ ಕುಡಿಯುವ ನೀರು ಸರಬರಾಜು ಪೈಪ್‌ಗಳ ದುರಸ್ತಿಯಿಂದಲೂ ರಸ್ತೆ ಮೇಲೆ ತಗ್ಗು ತೆಗೆದು, ಹಾಗೆಯೇ ಬಿಡಲಾಗಿದೆ.

ಇನ್ನು ಕೆಲವೆಡೆ ಒಳಚರಂಡಿ ಕಾಮಗಾರಿಗಾಗಿ ರಸ್ತೆಯನ್ನು ಹದಗೆಡಿಸಲಾಗಿದ್ದು, ಸೂಕ್ತ ರೀತಿಯಲ್ಲಿ ದುರಸ್ತಿ ಮಾಡದೆ ಕೈಬಿಟ್ಟಿರುವುದರಿಂದ ವಾಹನ ಸವಾರರಿಗೆ ಅಪಾಯ ಎದುರಾಗುತ್ತಿದೆ ಎಂಬುದು ಜನರ ಆರೋಪ. ನಗರದಲ್ಲಿನ ನೂತನ ರಸ್ತೆಗಳ ಸ್ಥಿತಿಗತಿ, ಅವುಗಳ ನಿರ್ವಹಣೆ ಬಗ್ಗೆ ಮಹಾನಗರ ಪಾಲಿಕೆ ಗಮನ ಹರಿಸಿದಲ್ಲಿ ಸಾರ್ವಜನಿಕರಿಗೆ ಎದುರಾಗುವ ತೊಂದರೆ ಯನ್ನು ನೀಗಿಸಬಹುದು ಎಂಬುದು ನೊಂದ ನಾಗರೀಕರ ಸಲಹೆಯಾಗಿದೆ.

ಹೊಸ ರಸ್ತೆಗಳ ಅಭಿವೃದ್ಧಿ ಪಡಿಸಿರುವ ಗುತ್ತಿಗೆದಾರರಿಗೆ ನಿರ್ವಹಣೆಯನ್ನು ಎಷ್ಟು ವರ್ಷಗಳ ಅವಧಿಗೆ ನೀಡಲಾಗಿದೆ ಎಂಬುದನ್ನು ತಿಳಿದು, ತಗ್ಗುಗಳನ್ನು ಮುಚ್ಚಲು ಕ್ರಮ ಕೈಗೊಳ್ಳ ಲಾಗುವುದು ಎಂದು ಮೇಯರ್ ಇಬ್ರಾಹಿಂ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.