ADVERTISEMENT

`ಹಸಿರು' ಬಣ್ಣದ ಬಸ್‌ಗಳಿಗೆ `ಗ್ರೀನ್ ಸಿಗ್ನಲ್'

ನಗರ ಸಾರಿಗೆಗೆ ಉತ್ತಮ ಪ್ರತಿಕ್ರಿಯೆ...

ಸಿದ್ದಯ್ಯ ಹಿರೇಮಠ
Published 15 ಜೂನ್ 2013, 5:46 IST
Last Updated 15 ಜೂನ್ 2013, 5:46 IST

ಬಳ್ಳಾರಿ: ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಒಂದು ತಿಂಗಳ ಹಿಂದೆ ನಗರದಾದ್ಯಂತ ಆರಂಭಿಸಿರುವ ಹಸಿರು ಬಣ್ಣದ 33 ಹೊಸ ಬಸ್‌ಗಳ ನಗರ ಸಾರಿಗೆ ಸೌಲಭ್ಯಕ್ಕೆ ಪ್ರಯಾಣಿಕರಿಂದ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಅನೇಕ ವರ್ಷಗಳಿಂದ ಸಮರ್ಪಕವಾದ ನಗರ ಸಾರಿಗೆ ಬಸ್ ಸೌಲಭ್ಯ ದೊರೆಯದ್ದರಿಂದ ದೂರದೂರದ ಪ್ರದೇಶಗಳಿಗೆ ತೆರಳಲು ಸಾಧ್ಯವಾಗದೆ ಪರದಾಡುತ್ತ, ದುಬಾರಿ ದರದ ಆಟೋ ರಿಕ್ಷಾ, ಟಂಟಂ ಮತ್ತಿತರ ವಾಹನಗಳನ್ನೇ ಅವಲಂಬಿಸಿದ್ದ ಬಡಜನತೆ ನೂತನವಾಗಿ ಆರಂಭವಾಗಿರುವ ಬಸ್ ಸೌಲಭ್ಯವನ್ನು ಸ್ವಾಗತಿಸಿದ್ದಾರೆ.

ಅಲ್ಲದೆ, ಇದುವರೆಗೂ ನಗರ ಸಾರಿಗೆ ಬಸ್ ಸೌಲಭ್ಯ ಆರಂಭವಾಗದ ಕೆಲವು ಬಡಾವಣೆಗಳ ಜನತೆ, ತಮ್ಮ ಪ್ರದೇಶಗಳಿಗೂ ಬಸ್ ಸೌಲಭ್ಯ ಕಲ್ಪಿಸುವಂತೆ ಮನವಿ ಸಲ್ಲಿಸುತ್ತಿದ್ದಾರೆ.

ಗ್ಲೋಬಲ್ ಪೋಸಿಷನಿಂಗ್ ಸಿಸ್ಟಮ್ (ಜಿಪಿಎಸ್) ಅಡಿ ವಿವಿಧ ನಿಲ್ದಾಣಗಳ ಹೆಸರುಗಳನ್ನು ಪ್ರಕಟಿಸುವ ಆಟೊಮೆಟಿಕ್ ಆಡಿಯೋ ಅನೌನ್ಸ್‌ಮೆಂಟ್ ವ್ಯವಸ್ಥೆಯನ್ನೂ ಅಳವಡಿಸಿದ್ದು, ಅತ್ಯಾಧುನಿಕ ಮಾದರಿಯ ಬಸ್ ಸೌಲಭ್ಯ ನಗರದ ಪ್ರಯಾಣಿಕರಿಗೆ ದೊರೆಯುತ್ತಿದೆ.

ಬಳ್ಳಾರಿ ನಗರದ ವಿವಿಧೆಡೆ 31 ಬಸ್‌ಗಳು ನಿತ್ಯ ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಸಂಚರಿಸುತ್ತಿದ್ದು, ನಿತ್ಯ ರೂ 1.20 ಲಕ್ಷದಷ್ಟು ವಹಿವಾಟು ನಡೆಸುತ್ತಿವೆ. ಎರಡು ಬಸ್‌ಗಳು ಪ್ರತ್ಯೇಕವಾಗಿ ನಗರದ ಹಳೆ ಬಸ್ ನಿಲ್ದಾಣದಿಂದ ತೋರಣಗಲ್‌ನಲ್ಲಿರುವ ಜೆಎಸ್‌ಡಬ್ಲ್ಯೂ ಸ್ಟೀಲ್ ಕಂಪೆನಿಯ ವಿದ್ಯಾನಗರ ಟೌನ್‌ಶಿಪ್‌ಗೆ ನಿತ್ಯ 8 ಬಾರಿ ಸಂಚರಿಸುತ್ತಿವೆ ಎಂದು ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಡಿ.ದುರ್ಗಪ್ಪ `ಪ್ರಜಾವಾಣಿ'ಗೆ ತಿಳಿಸಿದ್ದಾರೆ.

ನಗರದ ಬಿಸಿಲಹಳ್ಳಿಯಿಂದ  ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ (ವಿಮ್ಸ)ಯ  ಆಸ್ಪತ್ರೆ, ಹುಸೇನ್ ನಗರದಿಂದ ವಿಮ್ಸ ಆಸ್ಪತ್ರೆ, ಬಸವೇಶ್ವರ ನಗರದಿಂದ ರಾಮೇಶ್ವರಿ ನಗರ, ಸಂಗನಕಲ್‌ನಿಂದ ವಿಮ್ಸ ಆಸ್ಪತ್ರೆ, ಬಿ.ಗೋನಾಳ್‌ನಿಂದ ಕೌಲ್‌ಬಝಾರ್ ಮಾರ್ಗವಾಗಿ ವಿಮ್ಸ ಆಸ್ಪತ್ರೆ, ಅಂದ್ರಾಳ್‌ನಿಂದ ಕೌಲ್‌ಬಝಾರ್ ಮಾರ್ಗವಾಗಿ ವಿಮ್ಸ ಆಸ್ಪತ್ರೆ, ಗಡಿಗಿ ಚೆನ್ನಪ್ಪ ವೃತ್ತ (ರಾಯಲ್)ದಿಂದ ಕೌಲ್‌ಬಝಾರ್, ಗಡಿಗಿ ಚೆನ್ನಪ್ಪ ವೃತ್ತ (ರಾಯಲ್)ದಿಂದ ವಿಮ್ಸ ಆಸ್ಪತ್ರೆ, ಪ್ರಶಾಂತ ನಗರದಿಂದ ಹಳೆ ಬಸ್ ನಿಲ್ದಾಣ, ಬಂಡಿಹಟ್ಟಿಯಿಂದ ಹಳೆ ಬಸ್ ನಿಲ್ದಾಣ, ಅಲ್ಲಿಪುರದಿಂದ ಕೌಲ್‌ಬಝಾರ್ ಮಾರ್ಗವಾಗಿ ಹಳೆ ಬಸ್ ನಿಲ್ದಾಣಕ್ಕೆ ಸದ್ಯ ನಗರ ಸಾರಿಗೆ ಬಸ್ ಸೌಲಭ್ಯ ಆರಂಭಿಸಲಾಗಿದೆ.

ಬೇಡಿಕೆ ಹಾಗೂ ಹೊಸ ಬಸ್‌ಗಳ ಲಭ್ಯತೆಗೆ ಅನುಗುಣವಾಗಿ ಹಂತಹಂತವಾಗಿ ಇನ್ನುಳಿದ ಪ್ರದೇಶಗಳಿಗೂ ಹೊಸ ಬಸ್ ಬಿಡುವ ಚಿಂತನೆ ನಡೆದಿದೆ ಎಂದು ಅವರು ಹೇಳಿದ್ದಾರೆ.
ಆರಂಭದಲ್ಲಿ ಪ್ರತಿ ಕಿಲೋಮೀಟರ್ ಪ್ರಯಾಣಕ್ಕೆ ರೂ 32 ಖರ್ಚು ತಗಲುತ್ತಿದ್ದು, ಇದೀಗ ಪ್ರತಿ ಕಿಮೀಗೆ ಸರಾಸರಿ ರೂ 26ರಂತೆ ಆದಾಯ ಸಂಗ್ರಹವಾಗುತ್ತಿದೆ. ಪ್ರಯಾಣಿಕರು ಇನ್ನೂ ಹೆಚ್ಚಿನ ಪ್ರಯಾಣದಲ್ಲಿ ಸಂಸ್ಥೆಯ ಬಸ್‌ಗಳನ್ನು ಅವಲಂಬಿಸಿ, ಸದುಪಯೋಗ ಪಡಿಸಿಕೊಂಡಲ್ಲಿ ಆದಾಯದ ಪ್ರಮಾಣ ಹೆಚ್ಚಲಿದೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ಪಾಸ್ ಸೌಲಭ್ಯ: ನಗರ ಸಾರಿಗೆ ಬಸ್‌ಗಳಿಗೆ ಕನಿಷ್ಠ ರೂ 3ರಿಂದ ಗರಿಷ್ಠ ರೂ 10ರವರೆಗೆ ಪ್ರಯಾಣ ದರ ನಿಗದಿ ಮಾಡಲಾಗಿದ್ದು, ಪ್ರಯಾಣಿಕರ ಅನುಕೂಲಕ್ಕಾಗಿ ದೈನಂದಿನ ಪಾಸ್ ಹಾಗೂ ಮಾಸಿಕ ಪಾಸ್ ನೀಡುವ ವ್ಯವಸ್ಥೆಯನ್ನೂ ಜಾರಿಗೊಳಿಸಲಾಗಿದೆ.

ಬೆಳಿಗ್ಗೆ 6ರಿಂದ ರಾತ್ರಿ 9ರವರೆಗೆ ಯಾವುದೇ ನಗರ ಸಾರಿಗೆ ಬಸ್‌ನಲ್ಲಿ ಎಷ್ಟೇ ಬಾರಿ ಪ್ರಯಾಣ ಮಾಡುವ ಸೌಲಭ್ಯ ಹೊಂದಿರುವ ರೂ 20 ಮುಖಬೆಲೆಯ ಪಾಸ್ ನೀಡಲಾಗುತ್ತಿದೆ. ಅದೇ ರೀತಿ, ರೂ 500 ಮುಖಬೆಲೆಯ ಮಾಸಿಕ ಪಾಸ್ ಸೌಲಭ್ಯವನ್ನೂ ಪರಿಚಯಿಸಲಾಗಿದೆ. ಪ್ರಯಾಣಿಕರು ಈ ರಿಯಾಯಿತಿ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಸಹಾಯಕ ಸಂಚಾರ ವ್ಯವಸ್ಥಾಪಕ ಡಿ.ಅಬ್ದುಲ್ ನಯೀಮ್ ಕೋರಿದ್ದಾರೆ.

ಹೆಚ್ಚಿದ ಬೇಡಿಕೆ: ನಗರದ ವಿವಿಧ ಪ್ರದೇಶಗಳೂ ಒಳಗೊಂಡಂತೆ ಕಣೇಕಲ್ ಬಸ್ ನಿಲ್ದಾಣದಿಂದ ದೊಡ್ಡ ಮಾರುಕಟ್ಟೆ ಮಾರ್ಗವಾಗಿ ವಿಮ್ಸಗೆ, ಮಿಲ್ಲರ್ ಪೇಟೆಯಿಂದ  ವಿಮ್ಸಗೆ ಬಸ್ ಸೌಲಭ್ಯ ಕಲ್ಪಿಸುವಂತೆ ಈಗಾಗಲೇ ಕೆಲವು ಸಂಘ-ಸಂಸ್ಥೆಗಳೂ, ಸಾರ್ವಜನಿಕರು ಮನವಿ ಸಲ್ಲಿಸಿದಾರೆ.

ಕೆಲವು ಗ್ರಾಮೀಣ ಪ್ರದೇಶಗಳ ಪ್ರಯಾಣಿಕರೂ ಅತ್ಯಾಧುನಿಕ ಸೌಲಭ್ಯದ ಹೊಸ ಬಸ್‌ಗಳನ್ನು ಬಿಡುವಂತೆ ಕೋರಿದ್ದಾರೆ.

ಸರ್ಕಾರಿ ಸ್ವಾಮ್ಯದ ಸಾರಿಗೆ ಸಂಸ್ಥೆಯ ಬಸ್‌ಗಳ ಸದುಪಯೋಗ ಪಡಿಸಿಕೊಂಡು ಸಂಸ್ಥೆಯ ಅಭ್ಯುದಯಕ್ಕೆ ಪ್ರಯಾಣಿಕರು ತಮ್ಮ ಕಾಣಿಕೆ ನೀಡುವ ಅಗತ್ಯವಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಎನ್. ಶಿವಮೂರ್ತಿ ಮನವಿ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.