ADVERTISEMENT

ಹೊಲದಲ್ಲಿ ಹಾವು ಕಡಿದು ರೈತನ ಸಾವು

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2012, 5:40 IST
Last Updated 19 ಏಪ್ರಿಲ್ 2012, 5:40 IST

ಮರಿಯಮ್ಮನಹಳ್ಳಿ: ಹೊಲಕ್ಕೆ ನೀರು ಕಟ್ಟಲು ತೆರಳಿದ್ದ ರೈತನೊಬ್ಬನಿಗೆ ಹಾವು ಕಡಿದು ಸಾವನ್ನಪ್ಪಿದ ಘಟನೆ ಸಮೀಪದ ಕಟ್ಟೆಹೊಲ ತಾಂಡಾದಲ್ಲಿ ಮಂಗಳವಾರ ಜರುಗಿದೆ.

ಮೃತಪಟ್ಟವನನ್ನು ಕಟ್ಟೆಹೊಲ ತಾಂಡಾದ ಶಂಕರ್ ನಾಯ್ಕ(55) ಎಂದು ಗುರುತಿಸಲಾಗಿದೆ.
ಹೊಲದಲ್ಲಿ ನೀರು ಕಟ್ಟಿದ ಬಳಿಕ ಅಲ್ಲಿಯೇ ಮಲಗಿದ್ದಾಗ ಹಾವು ಕಚ್ಚಿದೆ. ತೀವ್ರ ಅಸ್ವಸ್ಥಗೊಂಡ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾಲಕಿ ಸಾವು: ಟ್ರ್ಯಾಕ್ಟರ್‌ರೊಂದು ಹಿಮ್ಮುಖವಾಗಿ ಚಲಿಸುವ ಸಂದರ್ಭ ದಲ್ಲಿ ಬಾಲಕಿಯೊಬ್ಬಳ ಮೇಲೆ ಹರಿದ ಪರಿಣಾಮ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸಮೀಪದ ಲೋಕಪ್ಪನಹೊಲದ ಬಳಿಯ ವಿಎಸ್‌ಎಲ್ ಆಗ್ರೊಟೆಕ್ ಕಂಪೆನಿಯ ಗ್ರೀನ್‌ಹೌಸ್‌ನಲ್ಲಿ ಮಂಗಳವಾರ ಜರುಗಿದೆ.

ಮೃತಪಟ್ಟ ಬಾಲಕಿಯನ್ನು ಮುಂಡ್ರಿಗಿ ಬಳಿಯ ದೋನಿಗ್ರಾಮದ ದ್ಯಾಮವ್ವ (13) ಎಂದು ಗುರುತಿಸಲಾಗಿದೆ.
ಈಕೆ ಸಮೀಪದ ಸೊನ್ನ ಗ್ರಾಮದ ಸಂಬಂಧಿಕರ ಮನೆಗೆ ಬಂದಿದ್ದು, ಸಂಬಂಧಿಕರೊಬ್ಬರು ವಿಎಸ್‌ಎಲ್ ಆಗ್ರೊಟೆಕ್‌ನಲ್ಲಿ ಕೆಲಸದಲ್ಲಿ ತೊಡಗಿದ್ದು, ಮಂಗಳವಾರ ಆ ಸಂಬಂಧಿಕ ಮಹಿಳೆಯ ಜತೆಗೆ ವಿಎಸ್‌ಎಲ್ ಗ್ರೀನ್‌ಹೌಸ್ ನೋಡಲು ತೆರಳಿದ್ದಾಳೆ. ಮಧ್ಯಾಹ್ನದ ಸಮಯದಲ್ಲಿ ಮರದ ನೆರಳಲ್ಲಿ ಕುಳಿತ್ತಿದ್ದ ಸಮಯದಲ್ಲಿ ಟ್ರ್ಯಾಕ್ಟರ್‌ರೊಂದು ಹಿಮ್ಮುಖವಾಗಿ ಚಲಿಸಲು ಹಿಂದೆ ತೆಗೆದುಕೊಳ್ಳವ ಸಮಯದಲ್ಲಿ ಬಾಲಕಿಯ ಮೇಲೆ ಹರಿದು ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಣ್ಣಿನ ಗುಡ್ಡೆ ಕುಸಿದು ವ್ಯಕ್ತಿ ಸಾವು: ಮಣ್ಣಿನ ಗುಡ್ಡೆ ಕುಸಿದು ವ್ಯಕ್ತಿಯೊಬ್ಬ ಸಾವನ್ನಪ್ಪಿದ ಘಟನೆ ಸಮೀಪದ ಡಣಾಪುರ ಬಳಿಯ ಬಿಎಂಎಂ ಕಾರ್ಖಾನೆಯವರು ತೋಡಿರುವ ಕೆರೆಯ ಹಿಂಭಾಗದಲ್ಲಿ ಸೋಮವಾರ ಜರುಗಿದೆ.
ಮೃತಪಟ್ಟವನನ್ನು ಪಟ್ಟಣದ 6ನೇ ವಾರ್ಡ್‌ನ ಎಲ್.ಪಾಂಡುರಂಗ (45) ಎಂದು ಗುರುತಿಸಲಾಗಿದೆ.

ಪಾಂಡುರಂಗ ಮತ್ತು ಇತರರು ಟ್ರ್ಯಾಕ್ಟರ್‌ನಲ್ಲಿ ಮಣ್ಣು ತುಂಬಲು ಬಿಎಂಎಂ ಕಾರ್ಖಾನೆಯವರು ತೋಡಿರುವ ಕೆರೆಯ ಹಿಂಭಾಗದಲ್ಲಿ ಹಾಕಿರುವ ಮಣ್ಣಿನ ಗುಡ್ಡೆಯಲ್ಲಿ ಮಣ್ಣು ತುಂಬಲು ತೆರಳಿದ್ದಾರೆ. ಈ ಸಂದರ್ಭದಲ್ಲಿ ಪಾಂಡುರಂಗ ಮಣ್ಣು ತುಂಬುತ್ತಿದ್ದಾಗ ಚಾಲಕ ಟ್ರ್ಯಾಕ್ಟರ್‌ನ್ನು ಹಿಮ್ಮುಖವಾಗಿ ಚಲಿಸುವ ಸಂದರ್ಭದಲ್ಲಿ ಟ್ರ್ಯಾಕ್ಟರ್ ಮಣ್ಣಿನ ಗುಡ್ಡೆಗೆ ಡಿಕ್ಕಿ ಹೊಡೆದಿದೆ.

ಡಿಕ್ಕಿ ಹೊಡೆದ ರಭಸಕ್ಕೆ ಮಣ್ಣಿನ ಗುಡ್ಡೆ ಪಾಂಡುರಂಗನ ಮೇಲೆ ಬಿದ್ದಿದ್ದೆ. ತೀವ್ರ ಆಸ್ವಸ್ಥಗೊಂಡ ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಹೊಸಪೇಟೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.