ADVERTISEMENT

ಹೊಸಪೇಟೆ,ಸಂಡೂರಿನಲ್ಲಿ ಸಿಬಿಐ ಪರಿಶೀಲನೆ

ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆ ಪ್ರಕರಣ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2012, 6:12 IST
Last Updated 7 ಡಿಸೆಂಬರ್ 2012, 6:12 IST

ಹೊಸಪೇಟೆ: ಉತ್ತರ ಕನ್ನಡ ಜಿಲ್ಲೆಯ ಬೇಲೆಕೇರಿ ಬಂದರಿನಿಂದ ಅದಿರು ನಾಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿಸಿರುವ ಸಿಬಿಐ ತಂಡ ಗುರುವಾರ ಹೊಸಪೇಟೆ ಹಾಗೂ ಸಂಡೂರಿಗೆ ಭೇಟಿ ನೀಡಿ ಪರಿಶೀಲಿಸಿತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಬಿಐನಿಂದ ನೋಟಿಸ್ ಪಡೆದಿರುವ ಗಣಿ ಉದ್ಯಮಿಗಳು, ಗಣಿ ಅದಿರು ಮಾರಾಟಗಾರರು, ಸಾಗಣಿದಾರರನ್ನು ಇಲ್ಲಿನ ಅಮರಾವತಿ ಪ್ರವಾಸಿ ಮಂದಿರದಲ್ಲಿ ವಿಚಾರಣೆಗೆ ಒಳಪಡಿಸಿದ ಸಿಬಿಐ ತಂಡ, ಅದಿರು ಸಂಗ್ರಹ ಸ್ಥಳಗಳಿಗೂ ಭೇಟಿ ನೀಡಿ ಪರಿಶೀಲಿಸಿತು.

ಸಿಬಿಐ ಡಿಐಜಿ ಜಿತೇಂದ್ರನಾಥ ಹಾಗೂ ಎಸ್‌ಪಿ ಸುಬ್ರಮಣ್ಯೇಶ್ವರ ರಾವ್ ನೇತೃತ್ವದ 12ಕ್ಕೂ ಹೆಚ್ಚು ಅಧಿಕಾರಿಗಳ ತಂಡ ತಾಲ್ಲೂಕಿನಲ್ಲಿರುವ ಆರ್.ಆರ್ ಮಿನರಲ್ಸ್  ವಡ್ಡರ ನಾಗಪ್ಪ ಗಣಿ ಪ್ರದೇಶ, ವೆಂಕಟಗಿರಿ ಐರನ್ ಓರ್ ಮೈನ್ಸ್, ಎಸ್.ವಿ.ಕೆ.ಸ್ಟಾಕ್ ಪ್ಲಾಟ್, ಮುನೀರ್ ಎಂಟರ್‌ಪ್ರೈಸಸ್, ಎಸ್.ವಿ.ಎಂ.ಪ್ಲಾಟ್, ಸೇಸಾಗೋವಾ ಪ್ಲಾಟ್, ಬಾಲಾಜಿ ಎಂಟರ್‌ಪ್ರೈಸಸ್, ಹಾಗೂ ಯರ‌್ರಿಸ್ವಾಮಿ ಸ್ಟಾಕ್ ಯಾರ್ಡ್‌ಗಳಿಗೆ ಹಾಗೂ ಸಂಡೂರು ತಾಲ್ಲೂಕು ವ್ಯಾಪ್ತಿಯ ಜಯಸಿಂಗ್‌ಪುರ ಗಣಿ ಪ್ರದೇಶದ ಸ್ಟಾಕ್‌ಯಾರ್ಡ್‌ಗಳಲ್ಲಿಯೂ ಗುರುವಾರ ಪರಿಶೀಲನೆ ನಡೆಸಿತು.

ಶುಕ್ರವಾರವೂ ಕಾರ್ಯಾಚರಣೆ ಮುಂದುವರಿಸಲಿರುವ ತಂಡ ಮತ್ತಷ್ಟು ಸ್ಟಾಕ್ ಯಾರ್ಡ್‌ಗಳು ಹಾಗೂ ಕೆಲ ಸಂಸ್ಥೆಗಳ ಮುಖ್ಯಸ್ಥರನ್ನು ಭೇಟಿ ಮಾಡಲಿದೆ ಎನ್ನಲಾಗಿದೆ. ಕಂದಾಯ, ಗಣಿ ಮತ್ತು ಭೂವಿಜ್ಞಾನ, ಅರಣ್ಯ ಹಾಗೂ ಪೊಲೀಸ್‌ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

ಸಂಡೂರು ವರದಿ
ಸಂಡೂರು
:  ಬೇಲಿಕೇರಿ ಅದಿರು ನಾಪತ್ತೆ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ತಂಡದವರು ಗುರುವಾರ ಸಂಡೂರಿನ  ಎ.ಎಂ.ಸಿ. ಜೆಡ್.ಟಿ.ಸಿ, ಎಸ್.ಬಿ .ಮಿನರಲ್ಸ್, ಎಲ್.ಎಂ.ಸಿ, ಎಸ್.ಎಂ.ಬಿ  ಕಂಪೆನಿ, ಎಚ್.ಆರ್.ಗವಿಯಪ್ಪ ಕಂಪೆನಿಗೆ ಸೇರಿದ ಗಣಿ ಸ್ಟಾಕ್ ಯಾರ್ಡ್‌ಗಳಿಗೆ ಬೇಟಿ ನೀಡಿ ಪರಿಶೀಲನೆಕಾರ್ಯ ನಡೆಸಿದರು.

ಖಾಸಗಿ ವಾಹನಗಳಲ್ಲಿ ಬಂದಿದ್ದ ಅಧಿಕಾರಿಗಳು ಪಟ್ಟಣದ ಕೆಲಮಾರ್ಗಗಳಲ್ಲಿ ಸಂಚರಿಸಿದರು. ಗುಪ್ತವಾಗಿ ಹೆಚ್ಚಿನ ಮಾಹಿತಿ ಕಲೆಹಾಕುವ ಕಾರ್ಯದಲ್ಲಿ ಮುಂದಾಗಿದ್ದರು.

ಗಣಿ ಅದಿರು ಕಳ್ಳಸಾಗಣಿಕೆಯಲ್ಲಿ ಸಿಕ್ಕಿಹಾಕಿ ಕೊಂಡಿರುವ ಕೆಲ ರಾಜಕಾರಣಿಗಳು, ಗಣಿ ಮಾಲೀಕರು,ಅದಿರು ಸಾಗಾಣಿಕೆ ದಾರರು   ಈಗಾಗಲೇ ಊರು ತೊರೆದಿದ್ದಾರೆ. ಸಿಬಿಐನವರಿಂದ ನೋಟೀಸ್ ಪಡೆದುಕೊಂಡವರು ಬಂಧನದ   ಭೀತಿಯಲ್ಲಿದ್ದಾರೆ ಎಂದು ಅರಣ್ಯ ಇಲಾಖೆಯ ಅಧಿಕಾರಿಯೊಬ್ಬರು “ಪ್ರಜಾವಾಣಿ' ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.