ADVERTISEMENT

ಹೊಸ ಸಂಶೋಧಕರಿಗೆ ಶಂಬಾ ವ್ಯಕ್ತಿತ್ವವೇ ಮಾರ್ಗದರ್ಶಿ

​ಪ್ರಜಾವಾಣಿ ವಾರ್ತೆ
Published 5 ಜನವರಿ 2012, 7:40 IST
Last Updated 5 ಜನವರಿ 2012, 7:40 IST

ಹೊಸಪೇಟೆ: ಸತ್ವಪೂರ್ಣ, ವೈವಿಧ್ಯಮಯ ಸಂಶೋಧನೆಯಲ್ಲಿ ತೊಡಗಿ ಸಂಶೋಧನೆಯ ಮೌಲ್ಯ ಗಳನ್ನು ಗಟ್ಟಿಗೊಳಿಸಬೇಕೆಂಬ ನೂತನ ಸಂಶೋಧಕರಿಗೆ ಡಾ.ಶಂಬಾ ಜೋಶಿ ವ್ಯಕ್ತಿತ್ವ ಪರಿಚಯವೇ ಒಂದು ಮಾರ್ಗದರ್ಶಿ ಎಂದು ಸಂಸ್ಕೃತ ವಿಶ್ವ ವಿದ್ಯಾಲಯದ ಕುಲಪತಿ ಡಾ.ಮಲ್ಲೆೀಪುರಂ ಜಿ.ವೆಂಕಟೇಶ್ ಹೇಳಿದರು.

ಬುಧವಾರ ಹಂಪಿ ಕನ್ನಡ ವಿಶ್ವವಿದ್ಯಾಲಯದ  ಭುವನ ವಿಜಯದಲ್ಲಿ ಅಧ್ಯಯನಾಂಗ ಮತ್ತು ಡಾ.ಶಂ.ಬಾ. ಜೋಶಿ ಅಧ್ಯಯನ ಪೀಠದ ಸಹಯೋಗದಲ್ಲಿ ಏರ್ಪಡಿಸಿದ್ದ ಸಂಶೋಧನ ಸಮಾವೇಶವನ್ನು ಮಾತನಾಡಿದರು.

ಪ್ರಸ್ತುತ ಎಲ್ಲ ಕ್ಷೇತ್ರಗಳಲ್ಲಿ ವಿಶ್ಲೇಷಣಾತ್ಮಕ ವಿಧಾನದಲ್ಲಿ ಸಂಶೋಧನೆಗಳು ನಡೆಯುತ್ತಿವೆ. ಆದರೆ ವಿಶ್ಲೇಷಣಾತ್ಮಕ ಸಂಶೋಧನೆಯಷ್ಟೇ ಮೂಲ ಸಂಶೋಧನೆಯೂ ಅಷ್ಟೇ ಮುಖ್ಯವಾಗಿದೆ.  ಈ ಹಿನ್ನೆಲೆಯಲ್ಲಿ ಎರಡೂ ರೀತಿಯಲ್ಲಿಯೂ ಸಂಶೋಧನೆ ಗಳು ಸಮಾನಾಂತರ ವಾಗಿಯೇ ಸಾಗಬೇಕಾಗಿದೆ ಎಂದು  ಅಭಿಪ್ರಾಯ ಪಟ್ಟರು.

`ಸಂಶೋಧನೆಗಳು ಭಾಷಿಕ ಅಧ್ಯಯನದಿಂದ ಮಾತ್ರವಲ್ಲದೆ ಸಾಂಸ್ಕೃತಿಕ ಪರಿಸರದ ದೃಷ್ಟಿಕೋನದಿಂದ ನಡೆಯಬೇಕು ಎಂಬುದು ಡಾ.ಶಂಬಾ ಅವರ ಸ್ಪಷ್ಟ ನಿಲುವಾಗಿತ್ತು~.

ಕಾಲಕಾಲಕ್ಕೆ ಬದಲಾಗುತ್ತ ಬಂದಿರುವ ನೆಲೆಗಟ್ಟುಗಳ ಆಧಾರದ ಮೇಲೆ ಸಂಶೋದನೆಗಳು ನಡೆಯಬೇಕು ಇದಕ್ಕೆ ಅನುಗುಣವಾಗಿ ಅಧ್ಯಯನ ಪರಿಕ್ರಮಗಳು ಅಧ್ಯಯನಶೀಲತೆ ರೂಪು ಗೊಳ್ಳುತ್ತವೆ. ಬೌದ್ಧಿಕವಾಗಿ ಕನ್ನಡ ವಿಶ್ವವಿದ್ಯಾಲಯ ಸದ್ಯ ಮುಂಚೂಣಿ ಯಲ್ಲಿದೆ ಎಂದರು.

“ಸೂಕ್ಷ್ಮ ಸಂವೇದನೆಗಳ ದೃಷ್ಟಿ ಕೋನದ ಕೊರತೆ ಇಂದಿನ ಸಂಶೋಧನ ವಿದ್ಯಾರ್ಥಿಗಳಲ್ಲಿ ಕಂಡು ಬರುತ್ತಿದೆ. ಶೈಕ್ಷಣಿಕ ಕಾರಣಕ್ಕಾಗಿ, ವೃತ್ತಿಗಾಗಿ ಮಾತ್ರ ಸಂಶೋಧನೆ ಮಾಡಬೇಡಿ, ಪ್ರವೃತ್ತಿಯಿಂದಲೂ ಸಂಶೋಧಕರಾಗಿ” ಎಂದು ಹಾಜರಿದ್ದ ಸಂಶೋಧಕರಿಗೆ ಕರೆ ನೀಡಿದರು.

ಸದ್ಯ ಗಡಿಗಳಲ್ಲಿ ಆಗುತ್ತಿರುವ ಭಾಷಿಕ ಗೊಂದಲಗಳಿಗೂ ಸಾಂಸ್ಕೃತಿಕ ನೆಲೆಗಟ್ಟು ಗಳನ್ನು ನೀಡುವ ಮೂಲಕ ಪರಿಹಾರ ಕಂಡುಹಿಡಿಯಲು ಸಂಶೋಧಕರಿಂದ ಸಾಧ್ಯ ಎಂದು ಈ ನಿಟ್ಟಿನಲ್ಲಿ ಸಂಶೋ ಧನೆಗೆ ತೊಡಗುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಮಲ್ಲೆೀಪುರಂ ಜಿ.ವೆಂಕಟೇಶ ಅವರು `ಡಾ.ಶಂಬಾ ಅಸಂಕಲಿತ ಲೇಖನಗಳು~ ಕೃತಿಯನ್ನು ಬಿಡುಗಡೆ ಮಾಡಿದರು.

ಅಧ್ಯಕ್ಷತೆ ವಹಿಸಿದ್ದ  ಕುಲಪತಿ ಡಾ.ಎ. ಮುರಿಗೆಪ್ಪ ಮಾತನಾಡಿ ಕಾಲ, ಪ್ರದೇಶ, ಭಾಷೆ ಮೀರಿದ ಅಧ್ಯಯನ ಮಾಡಲು ಡಾ.ಶಂಬಾ ಅವರನ್ನು  ಸಂಶೋಧಕರು ಮಾದರಿಯಾಗಿ ಮಾಡಿಕೊಂಡು ಅವರ ದಾರಿಯಲ್ಲಿ ಕ್ರಮಿಸಿದರೆ ಸಂಶೋಧನೆ ಹವ್ಯಾಸವಾಗಲು ಸಾಧ್ಯವಾಗುತ್ತದೆ. ಹೊಸ ಸಿದ್ಧಾಂತ, ಚರಿತ್ರೆ ಕಟ್ಟಲು ಮುಂದಾಗಿ ಎಂದು ಸಲಹೆ ನೀಡಿದರು.

ಅಧ್ಯಯನಾಂಗದ ನಿರ್ದೇಶಕ ಡಾ.ಎಫ್.ಟಿ.ಹಳ್ಳಿಕೇರಿ ಪ್ರಾಸ್ತಾವಿಕ ವಾಗಿ ಮಾತನಾಡಿದರು.
ಡಾ. ಶಂಬಾ ಅಧ್ಯಯನ ಪೀಠದ ಸಂಚಾಲಕ ಡಾ.ಪಿ.ಮಹಾದೇವಯ್ಯ ಸ್ವಾಗತಿಸಿದರು. ಎಂ.ಎಂ.ಶಿವಪ್ರಕಾಶ್ ಕಾರ್ಯಕ್ರಮ ನಿರ್ವಹಿಸಿದ್ದರು.

ಸಾಮಾಜಿಕ ದೃಷ್ಟಿಕೋನ ಕುರಿತು ಡಾ.ಬಿ.ವಿ.ಶಿರೂರ ಮತ್ತು ಡಾ.ಸಿ.ಮಹದೇವ ವಿಶೇಷ ಉಪನ್ಯಾಸ ಮಂಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.