ADVERTISEMENT

10 ಲಕ್ಷ ಯುವಕರಿಗೆ ಉದ್ಯೋಗಕ್ಕೆ ಯತ್ನ: ಬಚ್ಚೇಗೌಡ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2012, 4:45 IST
Last Updated 2 ಮಾರ್ಚ್ 2012, 4:45 IST

ಬಳ್ಳಾರಿ: ಮುಂದಿನ ಐದು ವರ್ಷಗಳ ಅವಧಿಯಲ್ಲಿ ರಾಜ್ಯದ 10 ಲಕ್ಷ ನಿರುದ್ಯೋಗಿ ಯುವಕರಿಗೆ ಉದ್ಯೋಗಾವಕಾಶ ದೊರಕಿಸಿಕೊಡುವ ನಿಟ್ಟಿನಲ್ಲಿ ಸರ್ಕಾರ ಶ್ರಮಿಸಲಿದೆ ಎಂದು ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ ತಿಳಿಸಿದರು.

ಸ್ಥಳೀಯ ತಾಲ್ಲೂಕು ಕಚೇರಿ ಆವರಣದಲ್ಲಿ ಗುರುವಾರ ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮಗಳ ಸಂಯುಕ್ತ ಆಶ್ರಯದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರ ಉದ್ಘಾಟಿಸಿ ಮಾತನಾಡಿದರು.

ಎರಡು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ನೂರಾರು ಕೈಗಾರಿಕೋದ್ಯಮಿಗಳು ಕರ್ನಾಟಕದಲ್ಲಿ ಬಂಡವಾಳ ಹೂಡಲು ಆಸಕ್ತಿ ವಹಿಸಿದ್ದರು. ಇದೇ ಜೂನ್‌ನಲ್ಲೂ ಬಂಡವಾಳ ಹೂಡಿಕೆದಾರರ ಮತ್ತೊಂದು ಸಮಾವೇಶ ಜರುಗಲಿದ್ದು, ಕೈಗಾರಿಕಾ ಕ್ಷೇತ್ರದಲ್ಲಿ ಲಕ್ಷಾಂತರ ಕೋಟಿ ಬಂಡವಾಳ ಹೂಡಿಕೆಯಾಗಲಿದೆ. ಇದರಿಂದ ಸ್ಥಳೀಯರಿಗೆ ಹೆಚ್ಚಿನ ಪ್ರಮಾಣದ ಉದ್ಯೋಗ ಅವಕಾಶಗಳು ಲಭ್ಯವಾಗಲಿವೆ ಎಂದು ಅವರು ಹೇಳಿದರು.

ಎಲ್ಲ ವಿದ್ಯಾವಂತರಿಗೆ ಸರ್ಕಾರಿ ಕೆಲಸ ದೊರೆಯುವುದು ಕಷ್ಟ. ಹಾಗಾಗಿ ಖಾಸಗಿ ಕ್ಷೇತ್ರಗಳಲ್ಲಿ ಲಭ್ಯವಿರುವ ಉದ್ಯೋಗಗಳನ್ನು ಮಾನವ ಸಂಪನ್ಮೂಲ ಕೇಂದ್ರದ ಮೂಲಕ ಉದ್ಯೋಗಾಕಾಂಕ್ಷಿಗಳಿಗೆ ತಲುಪಿಸುವ ಕೆಲಸ ನಡೆದಿದೆ.
 
ರಾಜ್ಯದ ವಿವಿಧ ಭಾಗಗಳಲ್ಲಿ 33 ಉದ್ಯೋಗ ಮೇಳ ನಡೆಸಲಾಗಿದೆ. ಈ ಮೂಲಕವೇ ರಾಜ್ಯದ ಸುಮಾರು 2.5 ಲಕ್ಷ ಯುವಕರಿಗೆ ಖಾಸಗಿ ಕ್ಷೇತ್ರದಲ್ಲಿ ಕೆಲಸ ದೊರಕಿಸಿಕೊಡಲಾಗಿದೆ. ಅಗತ್ಯ ಬಿದ್ದಲ್ಲಿ 2ನೇ ಬಾರಿ ಮತ್ತೆ ಉದ್ಯೋಗ ಮೇಳ ನಡೆಸಲಾಗುವುದು ಎಂದು ತಿಳಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ ಸುಮಾರು 335 ಕಾರ್ಖಾನೆಗಳಿದ್ದು, ಐಟಿಐ ಮತ್ತಿತರ ತರಬೇತಿ ಪಡೆದ ಯುವಕರಿಗೆ ಉದ್ಯೋಗಾವಕಾಶಗಳು ಹೆಚ್ಚಾಗಿವೆ. ಮುಂದಿನ ದಿನಗಳಲ್ಲಿ ಉದ್ಯೋಗ ಲಭ್ಯತೆ ಮಾಹಿತಿಯನ್ನು ಆಸಕ್ತ ಆಕಾಂಕ್ಷಿಗಳಿಗೆ ಮೊಬೈಲ್ ದೂರವಾಣಿಯಲ್ಲಿ ಸಂದೇಶ ಕಳುಹಿಸುವ ಮೂಲಕವೇ ನೀಡುವ ಕುರಿತು ಕ್ರಮ ಕೈಗೊಳ್ಳುವ ಚಿಂತನೆ ನಡೆದಿದೆ ಎಂದರು.

ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣದ ಜತೆಗೆ ಕೌಶಲ ಅಭಿವೃದ್ಧಿ ತರಬೇತಿ ಪಡೆಯಬೇಕು. ಐಟಿಐ ಮತ್ತಿತರ ತಾಂತ್ರಿಕ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳು  ಇಂಗ್ಲಿಷ್ ಕಲಿಯಲು ಆಸಕ್ತಿ ವಹಿಸಬೇಕು ಎಂದರು.

ತಾಂತ್ರಿಕ ಶಿಕ್ಷಣಕ್ಕೆ ಇಂಗ್ಲಿಷ್ ಅತ್ಯಂತ ಮಹತ್ವವಾಗಿದ್ದು, ಕೈಗಾರಿಕೆ ತರಬೇತಿ ಕೇಂದ್ರಗಳು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ತರಬೇತಿ ನೀಡಲು ಮುಂದಾಗಬೇಕು ಎಂದು ಅವರು ಸಲಹೆ ನೀಡಿದರು.

ಮಾನವ ಸಂಪನ್ಮೂಲ ಅಭಿವೃದ್ಧಿ ಕೇಂದ್ರದಿಂದ ಜಿಲ್ಲೆಯ ನಿರುದ್ಯೋಗಿ ಯುವಕರಿಗೆ ಹೆಚ್ಚಿನ ಅನುಕೂಲವಾಗಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅಧ್ಯಕ್ಷತೆ ವಹಿಸಿದ್ದ ಮೇಯರ್ ಪಾರ್ವತಿ ಇಂದುಶೇಖರ್ ತಿಳಿಸಿದರು.

ಟೀಂ ಲೀಜ್ ಸ್ಟಾಫಿಂಗ್ ಸೊಲ್ಯೂಷನ್ಸ್ ಸಂಸ್ಥೆಯ ಉಪಾಧ್ಯಕ್ಷೆ ಸಂಗೀತಾ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಎ. ಕೇಶವಮೂರ್ತಿ, ಸರ್ಕಾರಿ ಕೈಗಾರಿಕೆ ತರಬೇತಿ ಸಂಸ್ಥೆಯ ಪ್ರಾಚಾರ್ಯ ಕೃಷ್ಣಮೋಹನ್ ಮತ್ತಿತರರು ಉಪಸ್ಥಿತರಿದ್ದರು.
ಸುಬ್ಬಣ್ಣ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಅಧಿಕಾರಿ ಹಟ್ಟೆಪ್ಪ ವಂದಿಸಿದರು.
 
ಜನಪ್ರತಿನಿಧಿಗಳ ಸುಳಿವಿಲ್ಲ: ಸಮಾರಂಭದಲ್ಲಿ ಮೇಯರ್ ಪಾರ್ವತಿ ಇಂದುಶೇಖರ್ ಹೊರತುಪಡಿಸಿ ಸ್ಥಳೀಯ ಯಾವುದೇ ಜನಪ್ರತಿನಿಧಿಗಳು ಭಾಗವಹಿಸಲಿಲ್ಲ.

ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ, ಶಾಸಕರಾದ ಜಿ.ಸೋಮಶೇಖರ ರೆಡ್ಡಿ, ಬಿ.ಶ್ರೀರಾಮುಲು, ಸಂಸದೆ ಜೆ.ಶಾಂತಾ ಸೇರಿದಂತೆ ಸುಮಾರು 20ಕ್ಕೂ ಹೆಚ್ಚು ಜನಪ್ರತಿನಿಧಿಗಳ ಹೆಸರುಗಳು ಆಹ್ವಾನ ಪತ್ರಿಕೆಯಲ್ಲಿದ್ದರೂ, ಸಮಾರಂಭದ ಬಳಿ ಯಾರೊಬ್ಬರೂ ಸುಳಿಯಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರು ನಗರದಲ್ಲೇ ಇದ್ದರೂ ಕಾರ್ಯಕ್ರಮಕ್ಕೆ ಹಾಜರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.