ADVERTISEMENT

23ರಿಂದ ಹನ್ನೊಂದನೇ ಶರಣತತ್ವ ಕಮ್ಮಟ

ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಟಿ.ಎಚ್‌. ಬಸವರಾಜ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 7:29 IST
Last Updated 20 ನವೆಂಬರ್ 2018, 7:29 IST
ಟಿ.ಎಚ್.ಬಸವರಾಜ
ಟಿ.ಎಚ್.ಬಸವರಾಜ   

ಹೊಸಪೇಟೆ: ‘ಬಸವಧರ್ಮದ ಜೀವಪರ ಚಿಂತನೆಗಳನ್ನು ಬಿತ್ತಲು ಇದೇ 23ರಿಂದ 26ರ ವರೆಗೆ ನಗರದ ಸುರಭಿ ಕಲ್ಯಾಣ ಮಂಟಪದಲ್ಲಿ ಹನ್ನೊಂದನೇ ಶರಣತತ್ವ ಕಮ್ಮಟ ಹಮ್ಮಿಕೊಳ್ಳಲಾಗಿದೆ’ ಎಂದು ಶರಣ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ ಟಿ.ಎಚ್‌. ಬಸವರಾಜ ತಿಳಿಸಿದರು.

ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯ ವಿವಿಧ ಕಡೆಗಳಿಂದ ಸಾವಿರಕ್ಕೂ ಹೆಚ್ಚು, ರಾಜ್ಯದ ನಾನಾ ಭಾಗಗಳಿಂದ 300 ಶಿಬಿರಾರ್ಥಿಗಳು ಪಾಲ್ಗೊಳ್ಳುವರು. ಕಾರ್ಯಕ್ರಮಕ್ಕೆ ಬಂದವರಿಗೆ ಉಚಿತ ಊಟ, ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ಶರಣರ ಚಿಂತನೆಗಳ ಕುರಿತು ಉಪನ್ಯಾಸ, ವಚನ ಗಾಯನ, ಚಿಂತನ ಮಂಥನ ನಡೆಯಲಿದೆ. ಖಾದಿ, ಕಾವಿಧಾರಿಗಳನ್ನು ಸಂಪೂರ್ಣವಾಗಿ ಇದರಿಂದ ದೂರ ಇಡಲಾಗಿದೆ. ಶರಣರ ವಿಚಾರಗಳನ್ನು ಆಳವಾಗಿ ತಿಳಿದುಕೊಂಡವರು ಭಾಗವಹಿಸಿ ಉಪನ್ಯಾಸ ನೀಡುವರು’ ಎಂದು ಮಾಹಿತಿ ನೀಡಿದರು.

‘23ರಂದು ಸಂಜೆ 6.30ಕ್ಕೆ ದಾವಣಗೆರೆ ಬಸವ ಬಳಗದ ವಿ. ಸಿದ್ದರಾಮಣ್ಣನವರು ಷಟಸ್ಥಲ ಧ್ವಜಾರೋಹಣ ನೆರವೇರಿಸಿ, ಚಾಲನೆ ಕೊಡುವರು. ಹಿರಿಯ ಪತ್ರಕರ್ತ, ಚಿಂತಕ ರಂಜಾನ ದರ್ಗಾ ಅವರು ‘ಬಸವಣ್ಣ ಕಟ್ಟ ಬಯಸಿದ ಸಮಾಜ’ ಕುರಿತು ಉಪನ್ಯಾಸ ನೀಡುವರು. ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ರವೀಂದ್ರನಾಥ, ಬಸವ ಬಳಗದ ಪ್ರಮುಖರಾದ ಸಣ್ಣೆಪ್ಪ, ಎ.ಎಚ್‌. ಹುಚ್ಚಪ್ಪ ಗುರು, ನಿಷ್ಠಿ ರುದ್ರಪ್ಪ, ಬಸವರಾಜಪ್ಪ, ಪ್ರಗತಿ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಸಂಚಾಲಕ ದುರುಗಪ್ಪ ಪೂಜಾರ ಪಾಲ್ಗೊಳ್ಳುವರು’ ಎಂದು ವಿವರಿಸಿದರು.

ADVERTISEMENT

‘24ರಂದು ಬೆಳಿಗ್ಗೆ 7ಕ್ಕೆ ಪಥ ಸಂಚಲನ ನಡೆಯುವುದು. ನಂತರ ಶಿವಯೋಗ ಮತ್ತು ಅನುಭಾವ, ಎಂಟು ಗಂಟೆಗೆ ಇಷ್ಟಲಿಂಗ ಪೂಜೆ ಪ್ರಾತ್ಯಕ್ಷಿಕೆ ನಡೆಯಲಿದೆ. ಬಳಿಕ ಗುರು, ಲಿಂಗ, ಜಂಗಮ, ವಿಭೂತಿ–ರುದ್ರಾಕ್ಷಿ, ಮಂತ್ರ ಕುರಿತು ಚಿಂತನ ಗೋಷ್ಠಿಗಳು ಜರುಗಲಿವೆ. ಸಂಜೆ 6ಕ್ಕೆ ಕುವೆಂಪು ವಿರಚಿತ ‘ಜಗದ ಜಲಗಾರ’ ನಾಟಕವನ್ನು ಮಾನ್ವಿಯ ಬಸವ ಸತ್ಸಂಗ ಬಳಗದ ಸದಸ್ಯರು ಪ್ರಸ್ತುತಪಡಿಸುವರು’ ಎಂದು ತಿಳಿಸಿದರು.

‘25ರಂದು ಪಾದೋದಕ, ಪ್ರಸಾದ, ಪಂಚಾಚಾರ, ಷಟಸ್ಥಲ ಕುರಿತ ಚರ್ಚಾಗೋಷ್ಠಿ ನಡೆಯುವುದು. 26ರಂದು ಬೆಳಿಗ್ಗೆ 10.30ಕ್ಕೆ ನಡೆಯಲಿರುವ ಸಮಾರೋಪದಲ್ಲಿ ಬಸವ ಸಮಿತಿ ಅಧ್ಯಕ್ಷ ಅರವಿಂದ ಜತ್ತಿ ಪಾಲ್ಗೊಳ್ಳುವರು. ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ವಚನ ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ. ವಿಜೇತರಿಗೆ ಪ್ರಮಾಣ ಪತ್ರ ಹಾಗೂ ಬಹುಮಾನ ವಿತರಿಸಲಾಗುವುದು. ಅಜ್ಜಂಪುರ ಸೇವಾ ಟ್ರಸ್ಟ್‌, ಬಸವಪರ, ಪ್ರಗತಿಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಬಸವ ಬಳಗದ ಪ್ರಮುಖರಾದ ಡಾ. ಮಹಾಬಲೇಶ್ವರ ರೆಡ್ಡಿ, ರವಿಶಂಕರ್‌, ಬಸವಕಿರಣ್‌, ಮಧುರಚೆನ್ನ ಶಾಸ್ತ್ರಿ, ವಿಜಯ ಸಿಂಧಗಿ, ಬಸವರಾಜಪ್ಪ, ಮಹಾಂತ ರೆಡ್ಡಿ, ನಾಡಗೌಡ, ಮಾವಿನಹಳ್ಳಿ ಬಸವರಾಜ, ಸೋದಾ ವಿರೂಪಾಕ್ಷಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.