ADVERTISEMENT

33 ಜೂಜುಕೋರರ ಬಂಧನ: ಎಸ್‌ಐ ಅಮಾನತು

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 6:20 IST
Last Updated 13 ಫೆಬ್ರುವರಿ 2011, 6:20 IST

ಬಳ್ಳಾರಿ: ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ನಿವಾಸಗಳಲ್ಲಿ ಬಹಿರಂಗವಾಗಿ  ಅಂದರ್- ಬಾಹರ್ ಇಸ್ಪೀಟ್ ಆಟದಲ್ಲಿ ತೊಡಗಿದ್ದ ಒಟ್ಟು 33 ಜನರನ್ನು ಶನಿವಾರ ಸಂಜೆ ಬಂಧಿಸಿರುವ ಪೊಲೀಸರು, ಅವರಿಂದ ಅಪಾರ ಪ್ರಮಾಣದ ನಗದು, 20 ಬೈಕ್, 24 ಮೊಬೈಲ್‌ಫೋನ್ ವಶಪಡಿಸಿಕೊಂಡಿದ್ದಾರೆ.

ಬಳ್ಳಾರಿಯ ಕರುಮಾರೆಮ್ಮ ಗುಡ್ಡದ ಬಳಿಯ ವಾಟರ್ ಪಂಪ್‌ಹೌಸ್ ಬಳಿ, ನಗರದ ಹೊರವಲಯದಲ್ಲಿರುವ ಅನಂತಪುರ ಬೈಪಾಸ್ ರಸ್ತೆಯ ಹತ್ತಿರ  ಹಾಗೂ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನ ಮಾಟಸುಗೂರು ಗ್ರಾಮದ ಬಳಿ ಇಸ್ಪೀಟ್ ಆಟದಲ್ಲಿ ನಿರತರಾಗಿದ್ದರು. ಇವರಲ್ಲಿ ಗ್ರಾಮ ಪಂಚಾಯ್ತಿ ಸದಸ್ಯರು, ಗ್ರಾಮಗಳ ಮುಖಂಡರು, ಯುವಕರು ಸೇರಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎನ್. ನಾಗರಾಜ್ ಶನಿವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ನಗರದ ಕೌಲ್‌ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕರುಮಾರೆಮ್ಮ ಗುಡ್ಡದ ಬಳಿ ಅನೇಕ ದಿನಗಳಿಂದ ಈ ಜೂಜಾಟ ನಡೆದಿದ್ದರೂ, ಅದನ್ನು ತಡೆಯಲು ಕ್ರಮ ಕೈಗೊಳ್ಳದೆ, ನಿರ್ಲಕ್ಷ್ಯವಹಿಸಿ ಕರ್ತವ್ಯಲೋಪ ಎಸಗಿರುವ ಕೌಲ್‌ಬಜಾರ್ ಠಾಣೆ ಪಿಎಸ್‌ಐ ಹಸನ್‌ಸಾಬ್ ಅವರನ್ನು ತಕ್ಷಣದಿಂದಲೇ ಅಮಾನತು ಮಾಡಲಾಗಿದೆ ಎಂದು ಅವರು ಹೇಳಿದರು.

ಮಲ್ಲಯ್ಯ, ಬಸಪ್ಪ, ಬಸವರಾಜ, ಲಿಂಗರಾಜ, ಥಾಮಸ್, ತಿಪ್ಪೇಸ್ವಾಮಿ, ವೆಂಕಟೇಶ, ರಾಜಾ, ಗೋವಿಂದಪ್ಪ, ಗಾದಿಲಿಂಗಪ್ಪ, ಗುರುಪ್ರಸಾದ್, ರಾಜೇಶ್, ದುರ್ಗಾ, ಜಗದೀಶ, ದುರ್ಗಪ್ಪ, ವೆಂಕಟೇಶ, ತಿಪ್ಪಯ್ಯ, ಯರ್ರಿಸ್ವಾಮಿ, ನಲ್ಲಪ್ಪ, ಪ್ರಸಾದ್, ದುರ್ಗಪ್ಪ, ದುರ್ಗೇಶ, ಓಬಳೇಶ್, ಸಣ್ಣಯರ್ರಿಸ್ವಾಮಿ, ಬಾಲರಾಜ, ಮಂಜುನಾಥ, ಶ್ರೀನಿವಾಸುಲು ಹಾಗೂ ಇತರ ಆರು ಜನರೇ ಬಂಧನಕ್ಕೆ ಒಳಗಾಗಿದ್ದಾರೆ. ಇವರಿಂದ ಒಟ್ಟು 1.13 ಲಕ್ಷ ನಗದು ಒಳಗೊಂಡಂತೆ ಒಟ್ಟು ರೂ 8.5 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಮನೆಗಳಲ್ಲಿ ಈ ರೀತಿ ಜೂಜಾಟದಲ್ಲಿ ತೊಡಗಿರುವ ಬಗ್ಗೆ ಮಾಹಿತಿ ನೀಡಿದಲ್ಲಿ, ಮಾಹಿತಿದಾರರ ಹೆಸರನ್ನು ಗೌಪ್ಯವಾಗಿರಿಸಿ ಸೂಕ್ತ ಬಹುಮಾನ ನೀಡಲಾಗುವುದು ಎಂದು ನಾಗರಾಜ್ ಮನವಿ ಮಾಡಿದರು.

ಸಿಪಿಐಗಳಾದ ಎಸ್.ಎಸ್. ಹುಲ್ಲೂರ, ಗೋಖಲೆ, ಪಿಎಸ್‌ಐಗಳಾದ ದೇವೆಂದ್ರಪ್ಪ, ವೆಂಕಟೇಶುಲು, ಷಣ್ಮುಖಪ್ಪ, ಸಂತೋಷ್‌ಕುಮಾರ್ ಹಾಗೂ ಸಿಬ್ಬಂದಿ ಈ ದಾಳಿ ನಡೆಸಿದ್ದು, ಸಿರಿಗೆರೆ, ಬಳ್ಳಾರಿ ಗ್ರಾಮೀಣ ಹಾಗೂ ಕೌಲ್‌ಬಜಾರ್ ಪೊಲೀಸ್ ಠಾಣೆಗಳಲ್ಲಿ ಈ ಕುರಿತು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ. ಪೊಲೀಸ್ ಸಿಬ್ಬಂದಿಗೆ ಸೂಕ್ತ ನಗದು ಬಹುಮಾನ ಘೋಷಿಸಲಾಗಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.