ADVERTISEMENT

ಹೊಸ ತಾಲ್ಲೂಕು ರಚನೆ ವಿಳಂಬ

​ಪ್ರಜಾವಾಣಿ ವಾರ್ತೆ
Published 2 ಜನವರಿ 2018, 7:20 IST
Last Updated 2 ಜನವರಿ 2018, 7:20 IST
ಕೊಟ್ಟೂರು ಪಟ್ಟಣದಲ್ಲಿ ನೂತನ ತಾಲ್ಲೂಕು ಕಚೇರಿಗೆಂದು ಗುರುತಿಸಿರುವ ಯಾತ್ರಿ ನಿವಾಸ ಕಟ್ಟಡ.
ಕೊಟ್ಟೂರು ಪಟ್ಟಣದಲ್ಲಿ ನೂತನ ತಾಲ್ಲೂಕು ಕಚೇರಿಗೆಂದು ಗುರುತಿಸಿರುವ ಯಾತ್ರಿ ನಿವಾಸ ಕಟ್ಟಡ.   

ಬಳ್ಳಾರಿ: ಜಿಲ್ಲೆಯ ಕೊಟ್ಟೂರು, ಕಂಪ್ಲಿ ಮತ್ತು ಕುರುಗೋಡಿನಲ್ಲಿ ಹೊಸ ತಾಲ್ಲೂಕು ಕಚೇರಿ ಜ.1ರಿಂದ ಕಾರ್ಯಾರಂಭ ಮಾಡಲಿವೆ ಎಂಬ ಜನರ ನಿರೀಕ್ಷೆ ಹುಸಿಯಾಗಿದೆ. ತಾಲ್ಲೂಕು ಘಟಕವಾಗಿ ಈ ಪಟ್ಟಣಗಳು ಪರಿವರ್ತನೆಗೊಂಡು ಕಾರ್ಯಾರಂಭ ಮಾಡಲು ಇನ್ನಷ್ಟು ದಿನ ಬೇಕಾಗಿದೆ.

ಹಲವು ವರ್ಷಗಳ ಹೋರಾಟದ ಫಲವಾಗಿ ಈ ಮೂರೂ ಪಟ್ಟಣಗಳು ತಾಲ್ಲೂಕು ಕೇಂದ್ರಗಳಾಗಲು ಅರ್ಹವಾಗಿವೆ ಎಂದು ತಾಲ್ಲೂಕು ಪುನರಚನೆ ಸಮಿತಿಗಳು ಶಿಫಾರಸು ಮಾಡಿದ್ದವು.

ಕಾಂಗ್ರೆಸ್‌ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಜಿಲ್ಲೆಯ ಮೂರೂ ಪಟ್ಟಣ ಸೇರಿದಂತೆ ರಾಜ್ಯದ 50 ಪಟ್ಟಣಗಳನ್ನು ತಾಲ್ಲೂಕು ಎಂದು ಘೋಷಣೆ ಮಾಡಿದ್ದು, 2018ರ ಜ.1ರಿಂದಲೇ ತಾಲ್ಲೂಕುಗಳು ಅಸ್ತಿತ್ವಕ್ಕೆ ಬರಲಿವೆ ಎಂದು ಮುಖ್ಯಮಂತ್ರಿ, ಕಂದಾಯ ಸಚಿವರು ಹೇಳಿಕೆ ನೀಡಿದ್ದರು. ಅದಕ್ಕೆ ಪೂರಕವೆಂಬಂತೆ ಪಟ್ಟಣಗಳಲ್ಲಿ ತಾಲ್ಲೂಕು ಕಚೇರಿ ಸೇರಿದಂತೆ ವಿವಿಧ ಕಚೇರಿಗಳ ಆರಂಭಕ್ಕೆ ಕಟ್ಟಡಗಳನ್ನೂ ಗುರುತಿಸಲಾಗಿದೆ.

ADVERTISEMENT

ಆಕ್ಷೇಪಣೆ: ತಾಲ್ಲೂಕು ಕಚೇರಿಯಲ್ಲಿರುವ ಸಿಬ್ಬಂದಿಯನ್ನೇ ಹೊಸ ತಾಲ್ಲೂಕು ಕಚೇರಿಗೆ ನಿಯೋಜಿಸಲು ಜಿಲ್ಲಾಡಳಿತ ನಿರ್ಧರಿಸಿತ್ತು. ಆದರೆ ನಂತರದ ಬೆಳವಣಿಗೆಯಲ್ಲಿ ಜ.7ರವರೆಗೆ ಅಕ್ಷೇಪಣೆಗಳನ್ನು ಸಲ್ಲಿಸಲು ಅವಕಾಶ ನೀಡಿ, ಅಂತಿಮ ಅಧಿಸೂಚನೆಯನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಹೀಗಾಗಿ ತಾಲ್ಲೂಕು ಘೋಷಣೆ ವಿಳಂಬವಾಗುವ ಲಕ್ಷಣಗಳು ಕಂಡು ಬರುತ್ತಿವೆ.

ವಿಚಾರಣೆ ಬಳಿಕ ನಿರ್ಧಾರ ಪ್ರಕಟ: ‘ಸಲ್ಲಿಕೆಯಾದ ಆಕ್ಷೇಪಣೆಗಳ ಕುರಿತು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ವಿಚಾರಣೆ ನಡೆಸುತ್ತಾರೆ. ಆ ಬಳಿಕ ಅಂತಿಮ ಅಧಿಸೂಚನೆ ಪ್ರಕಟವಾಗುತ್ತದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

* * 

ನೂತನ ತಾಲ್ಲೂಕಿನ ಬಗ್ಗೆ ಅಕ್ಷೇಪಣೆ ಸಲ್ಲಿಸಲು ಜ.7ರವರೆಗೆ ಕಾಲಾವಕಾಶ ನೀಡಲಾಗಿದೆ. ಅಂತಿಮ ಅಧಿಸೂಚನೆಯ ನಂತರ ಸರ್ಕಾರದ ಸೂಚನೆಯಂತೆ ಕ್ರಮ ಕೈಗೊಳ್ಳಲಾಗುವುದು.
 ಎಲ್. ಕೃಷ್ಣಮೂರ್ತಿ, ತಹಶೀಲ್ದಾರ್, ಕೂಡ್ಲಿಗಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.