ADVERTISEMENT

‘ಬಡವರ ಸೇವೆಯಲ್ಲಿ ದೇವರನ್ನು ಕಾಣಿ’

​ಪ್ರಜಾವಾಣಿ ವಾರ್ತೆ
Published 13 ಜನವರಿ 2018, 6:48 IST
Last Updated 13 ಜನವರಿ 2018, 6:48 IST
ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಯಂತಿಯ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು
ಬಳ್ಳಾರಿಯ ಶ್ರೀಮತಿ ಸರಳಾದೇವಿ ಸತೀಶ್ಚಂದ್ರ ಅಗರ್‌ವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಜಯಂತಿಯ ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದರ ಅವರ ಭಾವಚಿತ್ರಕ್ಕೆ ಗಣ್ಯರು ಪುಷ್ಪ ನಮನ ಸಲ್ಲಿಸಿದರು   

ಬಳ್ಳಾರಿ: ‘ಎಲ್ಲರಲ್ಲಿಯೂ ದೇವರಿದ್ದು, ಪ್ರತಿಯೊಬ್ಬರು ಸಮಾನರು ಎಂಬುದು ವಿವೇಕಾನಂದರು ಮೂಲ ತತ್ವವಾಗಿತ್ತು’ ಎಂದು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ.ಸಿ.ಬಿರಾದಾರ ನುಡಿದರು.

ನಗರದ ಸರಳಾದೇವಿ ಸತೀಶ್ಚಂದ್ರ ಅಗರವಾಲ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 155ನೇ ಜಯಂತಿಯನ್ನು ಉದ್ಘಾಟಿಸಿ ಮಾತನಾಡಿದರು.

‘ಇಂದಿನ ಯುವಜನತೆ ದುಶ್ಚಟಗಳಿಗೆ ದಾಸರಾಗಿ ಅಮೂಲ್ಯ ಜೀವನವನ್ನು ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ವಿವೇಕಾನಂದರು ಕಂಡ ಕನಸು ಇನ್ನೂ ಸಾಕಾರಗೊಂಡಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದರು. ‘ಅಂಬೇಡ್ಕರ್ ರಚಿಸಿದ ಸಂವಿಧಾನ ವೇದಾಂತ ಗ್ರಂಥವಿದ್ದಂತೆ. ಅದಕ್ಕೆ ಎಲ್ಲರೂ ಗೌರವಿಸಬೇಕು’ ಎಂದರು. ರಾಮಕೃಷ್ಣ ಆಶ್ರಮದ ರಾಜಶೇಖರ ಅವರು ‘ವ್ಯಕ್ತಿತ್ವ ವಿಕಾಸ’ ಕುರಿತು ವಿಶೇಷ ಉಪನ್ಯಾಸ ನೀಡಿದರು.

ADVERTISEMENT

ಜಿಲ್ಲಾ ಕಾನೂನು ಸೇವಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಸ್.ಬಿ.ಹಂದ್ರಾಳ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ರಹಮತ್ ಉಲ್ಲಾ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ರವಿರಾಜಶೇಖರ ರೆಡ್ಡಿ, ಪ್ರಾಂಶುಪಾಲರಾದ ಪ್ರೊ.ಯು.ಅಬ್ದುಲ್ ಮುತಾಲಿಬ್ ಉಪಸ್ಥಿತರಿದ್ದರು.

ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ: ನಗರದ ಹವಂಬಾವಿ ಶಾಲೆಯಲ್ಲಿ ಶುಕ್ರವಾರ ಸ್ವಾಮಿ ವಿವೇಕಾನಂದರ ಜಯಂತಿ ಆಚರಿಸಲಾಯಿತು. ಮುಖ್ಯ ಶಿಕ್ಷಕ ಎ.ತಿಮ್ಮಪ್ಪ ಮಾತನಾಡಿದರು. ಶಿಕ್ಷಕರಾದ ದ್ರಾಕ್ಷಾಯಣಿ, ಶೌರಮ್ಮ, ಅನಿತ, ಜ್ಯೋತಿ, ವಿಜಯಲಕ್ಷ್ಮಿ, ಸುಧಾಕರ್, ಕೊಟ್ರಯ್ಯ, ರಶ್ಮಿ, ಶೀಲಾ, ತಿಪ್ಪೇಸ್ವಾಮಿ, ಎನ್.ಜೆ.ಪಿ.ಭೂಷಣ ಶರ್ಮ ಇದ್ದರು.

ಇಂಡೋ–ಅಮೆರಿಕನ್ ಡಿಗ್ರಿ ಕಾಲೇಜು: ಇಲ್ಲಿ ವಿವೇಕಾನಂದರ ಜಯಂತಿ ಕಾರ್ಯಕ್ರಮ ನಡೆಯಿತು. ಪ್ರಾಚಾರ್ಯ ರಾಜೇಶ ಮಾತನಾಡಿದರು. ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಎಚ್.ನಾಯ್ಡು, ಉಪಪ್ರಾಚಾರ್ಯ ಶೇಖ್ ಸಲೀಂ ಬಾಷಾ, ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಮುಖ್ಯಸ್ಥ ಸುಧೀರ್ ಕುಮಾರ, ಸಂಯೋಜನಾಧಿಕಾರಿ ದಿನೇಶ ರಾಜ್, ಶಿವಕುಮಾರ ಅಂಗಡಿ ಉಪಸ್ಥಿತರಿದ್ದರು.

ವೀರಶೈವ ಕಾಲೇಜು: ವಿವೇಕಾಂದರ ಜಯಂತಿ ಅಂಗವಾಗಿ ನಗರದ ವೀರಶೈವ ಕಾಲೇಜಿನಲ್ಲಿ ವಿಶೇಷ ಉಪನ್ಯಾಸ ನಡೆಯಿತು. ನಿವೃತ್ತ ಉಪನ್ಯಾಸಕ ಎಸ್.ಬಸವರಾಜ ಮಾತನಾಡಿದರು. ಇದೇ ವೇಳೆಯಲ್ಲಿ ಪ್ರಬಂಧ ಮತ್ತು ಭಾಷಣ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಪ್ರಾಚಾರ್ಯ ಡಾ.ಜಿ.ರಾಜಶೇಖರ ಇದ್ದರು.

* * 

ಲಂಚ ನೀಡಿದರೆ ಉದ್ಯೋಗ ಸಿಗುತ್ತದೆ ಎಂದು ಕೆಲವರು ನಂಬಿದ್ದಾರೆ. ಅದು ಶುದ್ಧ ಸುಳ್ಳು. ಪ್ರತಿಭೆಯಿಂದ ಮಾತ್ರ ಉದ್ಯೋಗ ಸಿಗಲು ಸಾಧ್ಯ
ಬಿ.ಸಿ.ಬಿರಾದಾರ
ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.