ADVERTISEMENT

ವಿಠಲಾಪುರದಲ್ಲಿ ಕುಡಿವ ನೀರಿಗೆ ತತ್ವಾರ

​ಪ್ರಜಾವಾಣಿ ವಾರ್ತೆ
Published 15 ಜನವರಿ 2018, 7:26 IST
Last Updated 15 ಜನವರಿ 2018, 7:26 IST
ವಿಠಲಾಪುರದಲ್ಲಿ ಗ್ರಾಮಸ್ಥರು ಖಾಸಗಿ ನೀರಿನ ಟ್ಯಾಂಕರ್‌ಗೆ ಮುಗಿಬಿದ್ದಿರುವುದು
ವಿಠಲಾಪುರದಲ್ಲಿ ಗ್ರಾಮಸ್ಥರು ಖಾಸಗಿ ನೀರಿನ ಟ್ಯಾಂಕರ್‌ಗೆ ಮುಗಿಬಿದ್ದಿರುವುದು   

ವಿಠಲಾಪುರ(ಸಂಡೂರು): ಸಂಡೂರು ತಾಲ್ಲೂಕಿನ ವಿಠಲಾಪುರದಲ್ಲಿ ಬೇಸಿಗೆಗೂ ಮುನ್ನವೇ ಕುಡಿಯುವ ನೀರಿನ ತೊಂದರೆ ಕಾಣಿಸಿಕೊಂಡಿದೆ.

ಮಳೆ ಕೊರತೆಯಿಂದ ಕೆರೆ ಬತ್ತಿದೆ. ಅಂತರ್ಜಲ ಮಟ್ಟವೂ ಕುಸಿದಿದೆ. ಹೀಗಾಗಿ ಗ್ರಾಮ ಕೆಲ ಭಾಗಗಳಲ್ಲಿ ಜೀವಜಲಕ್ಕೆ ತತ್ವಾರ ಎದುರಾಗಿದೆ.

‘ನಲ್ಲಿಗಳ ಮೂಲಕ ಗ್ರಾಮ ಪಂಚಾಯ್ತಿ ನೀರು ಪೂರೈಸುತ್ತಿದೆ. ಆದರೆ, ಒಂದು ಕೊಡ ತುಂಬಿಸಲು 8–10 ನಿಮಿಷಗಳೇ ಬೇಕು’ ಎನ್ನುತ್ತಾರೆ ಗ್ರಾಮಸ್ಥರು.

ADVERTISEMENT

ಹೀಗಾಗಿ ಜನರು ಕುಡಿಯುವ ನೀರು ಪಡೆಯಲು ಖಾಸಗಿ ನೀರಿನ ಟ್ಯಾಂಕರ್‌ಗಳ ಮೊರೆ ಹೋಗಿದ್ದಾರೆ. ಈ ಕುರಿತು ಮಾತನಾಡಿದ ಗ್ರಾಮದ ಮುಖಂಡ ಸದಾಶಿವ, ‘ಸಮರ್ಪಕ ಮಳೆ ಇಲ್ಲದೆ ಅಂತರ್ಜಲ ಮಟ್ಟ ಕುಸಿದಿದೆ. ಹೀಗಾಗಿ ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಅದರಿಂದ ನೀರುಪೂರೈಕೆಯಲ್ಲಿ ವ್ಯತಯವಾಗುತ್ತಿದೆ’ ಎಂದರು.

‘ಅಂತರ್ಜಲದ ಮಟ್ಟದ ಕುಸಿದಿರುವುದರಿಂದ, ಗ್ರಾಮದ ಎರಡು ಕಡೆ ಸ್ವಲ್ಪ ನೀರಿನ ಸಮಸ್ಯೆ ಉಂಟಾಗಿದೆ. ನೀರಿನ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳಲಾಗಿದೆ. ಹೊಸದಾಗಿ ಕೊಳವೆ ಬಾವಿ ಕೊರೆಸಲಾಗಿದ್ದು, ಪೈಪ್‌ಲೈನ್ ಹಾಕುವ ಕಾಮಗಾರಿ ಆರಂಭವಾಗಿದೆ. ಇನ್ನು 2–3 ದಿನದಲ್ಲಿ ಕಾಮಗಾರಿ ಮುಗಿಯಲಿದೆ. ಅಲ್ಲಿಂದ ನೀರು ಪೂರೈಕೆಯಾದರೆ, ನೀರಿನ ಸಮಸ್ಯೆ ಬಗೆ ಹರಿಯಲಿದೆ’ ಎಂದು ಸ್ಥಳೀಯ ಪಿಡಿಒ ರಾಜಕುಮಾರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.