ADVERTISEMENT

ಕಾಂಗ್ರೆಸ್ ಸೇರಲ್ಲ: ಸುರೇಶ ಬಾಬು

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2018, 9:45 IST
Last Updated 7 ಫೆಬ್ರುವರಿ 2018, 9:45 IST
ಟಿ.ಎಚ್‌.ಸುರೇಶ್ ಬಾಬು
ಟಿ.ಎಚ್‌.ಸುರೇಶ್ ಬಾಬು   

ಬಳ್ಳಾರಿ: ‘ಕಾಂಗ್ರೆಸ್‌ ಸೇರುತ್ತೇನೆ ಎನ್ನುವುದು ಸುಳ್ಳು. ಉಸಿರು ಇರುವ ತನಕ ಬಿಜೆಪಿಯಲ್ಲಿಯೇ ಇರುತ್ತೇನೆ’ ಎಂದು ಕಂಪ್ಲಿ ಶಾಸಕ ಟಿ.ಎಚ್‌.ಸುರೇಶಬಾಬು ಸ್ಪಷ್ಪಪಡಿಸಿದರು. ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ಸೇರುತ್ತೇನೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಶಿವಕುಮಾರ್‌, ಐಟಿ ದಾಳಿಯಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಮನಬಂದಂತೆ ಮಾತನಾಡುತ್ತಿದ್ದಾರೆ. ಕಾಂಗ್ರೆಸ್‌ನವರು ಚಿಲ್ಲರೆ ರಾಜಕಾರಣ ಬಿಡಬೇಕು’ ಎಂದರು.

‘ಆರು ತಿಂಗಳ ಹಿಂದೆ ಸಿದ್ದರಾಮಯ್ಯ ಅವರನ್ನು ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ವಿಧಾನಸೌಧದಲ್ಲಿ ಭೇಟಿ ಮಾಡಿದ್ದೆ. ಶಿವಕುಮಾರ್‌ ಹಾಗೂ ನನಗೆ ಯಾವುದೇ ವೈಯಕ್ತಿಕ ಸಂಬಂಧವಿಲ್ಲ. ಆದರೆ, ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವುದು ಸರಿಯಲ್ಲ. ನನ್ನನ್ನು ಪಕ್ಷಕ್ಕೆ ಕರೆದುಕೊಳ್ಳುವ ಧೈರ್ಯ ಕಾಂಗ್ರೆಸ್‌ ನಾಯಕರಿಗೆ ಇಲ್ಲ’ ಎಂದರು.

‘ಬಿಜೆಪಿಯ ಮನೆ ಬಾಗಿಲು ಗಟ್ಟಿ ಇದೆ. ಇನ್ನೊಬ್ಬರ ಮನೆ ಬಾಗಿಲು ತಟ್ಟುವ ಅವಶ್ಯಕತೆ ನನಗಿಲ್ಲ. ನಾಯಕ ಸಮುದಾಯದಲ್ಲಿ ಹುಟ್ಟಿ ನಾಯಕನಾಗಿ ಬಾಳುತ್ತೇನೆಯೇ ಹೊರತು ಹೇಡಿತನದ ಜೀವನ ಮಾಡುವುದಿಲ್ಲ. ಕಾಂಗ್ರೆಸ್ ಸೇರುತ್ತೇನೆ ಎಂದು ಹೇಳಿರುವುದಕ್ಕೆ ಪುರಾವೆಗಳಿದ್ದರೆ ಬಿಡುಗಡೆ ಮಾಡಲಿ’ ಎಂದು ಅವರು ಸವಾಲು ಹಾಕಿದರು.

ADVERTISEMENT

‘ಪಕ್ಷ ಟಿಕೆಟ್ ನೀಡದಿದ್ದರೂ ಸಾಮಾನ್ಯ ಕಾರ್ಯಕರ್ತನಾಗಿ ದುಡಿಯುತ್ತೇನೆ. ಪಕ್ಷ ಯಾವ ಅಭ್ಯರ್ಥಿಗೆ ಟಿಕೆಟ್ ನೀಡುತ್ತದೆಯೋ ಅವರ ಗೆಲುವಿಗೆ ಶ್ರಮಿಸುತ್ತೇನೆ. ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ನನಗೆ ಎರಡು ಕಣ್ಣುಗಳು ಇದ್ದಂತೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.