ಹೂವಿನಹಡಗಲಿ: ತಾಲ್ಲೂಕಿನ ಮಾನ್ಯರಮಸಲವಾಡ ಗ್ರಾಮದಲ್ಲಿ ಮಂಗಳವಾರ ಮತ್ತೆ 7 ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿದ್ದು, ಅಸ್ವಸ್ಥ ಮೂವರನ್ನು ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗ್ರಾಮದ ಭೋವಿ ಕಾಲೊನಿ, ಕುರುಬರ ಓಣಿಗೆ ಕುಡಿಯುವ ನೀರು ಪೂರೈಸುವ ಕೊಳವೆ ಬಾವಿ ಮತ್ತು ಪೈಪ್ ಲೈನ್‌ನಲ್ಲಿ ಕಲುಷಿತ ನೀರು ಮಿಶ್ರಣವಾಗಿತ್ತು. ಈ ನೀರು ಸೇವಿಸಿದ್ದ 27ಕ್ಕೂ ಹೆಚ್ಚು ಜನರಿಗೆ ವಾಂತಿಭೇದಿ ಕಾಣಿಸಿಕೊಂಡಿತ್ತು. ಅಸ್ವಸ್ಥರು ದಾವಣಗೆರೆ, ಗದಗ, ಹರಪನಹಳ್ಳಿ, ಹೂವಿನಹಡಗಲಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ.
‘ದಾವಣಗೆರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ದೆ ಅಮಲಮ್ಮ ಅವರನ್ನು ವೈದ್ಯರು ಡಯಾಲಿಸಿಸ್‌ಗೆ ಶಿಫಾರಸು ಮಾಡಿದ್ದು, ಉಳಿದವರೆಲ್ಲರೂ ಚೇತರಿಸಿಕೊಳ್ಳುತ್ತಿದ್ದಾರೆ’ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ.
ಗ್ರಾಮದಲ್ಲಿ ವಾಂತಿಭೇದಿ ನಿಯಂತ್ರಣಕ್ಕೆ ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ. ಕೊಳವೆಬಾವಿ ನೀರು ಪೂರೈಕೆಯನ್ನು ಸ್ಥಗಿತಗೊಳಿಸಲಾಗಿದ್ದು, ಶುದ್ದೀಕರಿಸಿದ ನೀರನ್ನು ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಆರೋಗ್ಯ ಇಲಾಖೆ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಭೇಟಿ ನೀಡಿ, ಸಂಗ್ರಹಿಸಿರುವ ನೀರನ್ನು ಖಾಲಿ ಮಾಡಿಸಿದ್ದಾರೆ.
‘ಗ್ರಾಮದಲ್ಲಿ ಕುಡಿಯುವ ನೀರು ನೈರ್ಮಲ್ಯ ಕಾಪಾಡಲು ಕ್ರಮ ಕೈಗೊಂಡಿದ್ದೇವೆ. ಮುಂಜಾಗ್ರತಾ ಕ್ರಮವಾಗಿ ಎಲ್ಲ ಕೊಳವೆ ಬಾವಿ ಸ್ಥಗಿತಗೊಳಿಸಿ, ನಾಲ್ಕು ಟ್ಯಾಂಕರ್ ಗಳಿಂದ ನೀರು ಪೂರೈಸುತ್ತಿದ್ದೇವೆ. ನೀರಿನ ಮಾದರಿ ಪರೀಕ್ಷಾ ವರದಿ ಬಂದ ನಂತರ ಯೋಗ್ಯವಿರುವ ಬೋರ್ ವೆಲ್ ಗಳಿಂದ ಮಾತ್ರ ನೀರು ಪೂರೈಸಲಾಗುತ್ತದೆ. ಸದ್ಯ ವಾಂತಿಭೇದಿ ನಿಯಂತ್ರಣಕ್ಕೆ ಬರುತ್ತಿದೆ’ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಉಮೇಶ್ ಹೇಳಿದರು.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಷಣ್ಮುಖನಾಯ್ಕ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಪ್ನಾ ಕಟ್ಟಿ ಮನೆಗಳಿಗೆ ಭೇಟಿ ನೀಡಿ ಜನರ ಆರೋಗ್ಯ ವಿಚಾರಿಸುತ್ತಿದ್ದಾರೆ. ಪ್ರತಿ ಮನೆಗೂ ಒಆರ್‌ಎಸ್ ಪಾಕೀಟ್ ಗಳನ್ನು ವಿತರಿಸಿದ್ದಾರೆ. ವಾಂತಿಭೇದಿ, ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವಂತೆ ತಿಳಿಸಿದ್ದಾರೆ.
ಜಿ.ಪಂ. ಸಿಇಒ ಭೇಟಿ : ಜೆಜೆಎಂ ಕಾಮಗಾರಿ ಪೂರ್ಣಗೊಳಿಸಲು ಸೂಚನೆ
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಅಕ್ರಂ ಪಾಷಾ ಅವರು ಮಂಗಳವಾರ ಮಾನ್ಯರಮಸಲವಾಡ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಆರೋಗ್ಯ ಇಲಾಖೆ ಗ್ರಾಮ ಪಂಚಾಯಿತಿ ಸಮನ್ವಯದೊಂದಿಗೆ ಕೆಲಸ ಮಾಡಿ ವಾಂತಿಭೇದಿ ನಿಯಂತ್ರಿಸಬೇಕು. ಅಸ್ವಸ್ಥರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿಕೊಂಡು ಚಿಕಿತ್ಸೆ ನೀಡಬೇಕು ಎಂದು ಸೂಚಿಸಿದರು. ಅಪೂರ್ಣಗೊಂಡಿರುವ ಜಲಜೀವನ್ ಮಿಷನ್ ಕಾಮಗಾರಿಯನ್ನು ತಿಂಗಳೊಳಗೆ ಪೂರ್ಣಗೊಳಿಸಿ ಗ್ರಾಮ ಪಂಚಾಯಿತಿಗೆ ಹಸ್ತಾಂತರಿಸುವಂತೆ ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ದೀಪಾ ಅವರಿಗೆ ಸೂಚಿಸಿದರು. ತಾ.ಪಂ. ಇಒ ಎಂ.ಉಮೇಶ ಎಇಇ ಅಂಬೇಡ್ಕರ್ ಸನಗುಂದ ಪಿಡಿಒ ಮಹ್ಮದ್ ರಫಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.