ADVERTISEMENT

ಆದಿಲ್‌ಷಾಹಿಗಳು ಸರಸ್ವತಿ ನೆನೆದು ಫರ್ಮಾನು ಹೊರಡಿಸುತ್ತಿದ್ದರು: ಮಲ್ಲಿಕಾ ಘಂಟಿ

​ಪ್ರಜಾವಾಣಿ ವಾರ್ತೆ
Published 9 ಜನವರಿ 2019, 12:09 IST
Last Updated 9 ಜನವರಿ 2019, 12:09 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇತಿಹಾಸ ಸಂಶೋಧಕ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಮಾತನಾಡಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಇತಿಹಾಸ ಸಂಶೋಧಕ ಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಮಾತನಾಡಿದರು   

ಹೊಸಪೇಟೆ: ‘ಸರಸ್ವತಿಯನ್ನು ನೆನೆದು ಆದಿಲ್‌ಷಾಹಿಗಳು ಫರ್ಮಾನು ಹೊರಡಿಸುತ್ತಿದ್ದರು’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಮಲ್ಲಿಕಾ ಎಸ್‌. ಘಂಟಿ ತಿಳಿಸಿದರು.

ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ವಿಭಾಗದಿಂದ ಬುಧವಾರ ಬಾಗಲಕೋಟೆಯ ಬಸವೇಶ್ವರ ವಿದ್ಯಾವರ್ಧಕ ಸಂಘದ ದತ್ತಿನಿಧಿಯಿಂದ ವಿ.ವಿ.ಯಲ್ಲಿ ಏರ್ಪಡಿಸಿದ್ದ ‘ಆದಿಲ್‌ಷಾಹಿ ಸಾಹಿತ್ಯ; ಚಾರಿತ್ರಿಕ ನೋಟ’ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಚರಿತ್ರೆ ಗೊತ್ತಿಲ್ಲದ ಯುವಕರು ನಮ್ಮ ಜೊತೆ ಹುಟ್ಟಿ ಬೆಳೆದ ಮುಸ್ಲಿಮರನ್ನು ಅಪನಂಬಿಕೆಯಿಂದ ನೋಡುತ್ತಿದ್ದಾರೆ. ಚರಿತ್ರೆ ಓದಿದರೆ ಆ ಮನೋಭಾವ ದೂರವಾಗುತ್ತದೆ. ಎರಡನೇ ಆದಿಲ್‌ಷಾಹಿಗೆ ಜಗದ್ಗುರು ಎಂದು ಬಿರುದು ಕೊಟ್ಟಿದ್ದು ಹಿಂದೂಗಳು ಹೊರತು ಮುಸ್ಲಿಮರಲ್ಲ’ ಎಂದು ನೆನಪಿಸಿದರು.

ADVERTISEMENT

‘ಸಮಕಾಲೀನ ಚರಿತ್ರೆ ಮತ್ತು ವಾಸ್ತವಿಕತೆಗೆ ಸಂಬಂಧಪಟ್ಟಂತೆ ಉತ್ತರಗಳನ್ನು ಖಚಿತ, ನಿಖರವಾಗಿ ಕೊಡಬೇಕೆನ್ನುವ ಪ್ರಜ್ಞಾವಂತಿಕೆ ಇರುವವರು ಆದಿಲ್‌ಷಾಹಿ ಸಂಪುಟಗಳನ್ನು ಕಡ್ಡಾಯವಾಗಿ ಓದಬೇಕು’ ಎಂದು ಹೇಳಿದರು.

ಇತಿಹಾಸ ಸಂಶೋಧಕಡಾ.ಕೃಷ್ಣ ಕೋಲ್ಹಾರ ಕುಲಕರ್ಣಿ ಮಾತನಾಡಿ,‘ಸಂಸ್ಕೃತ ಮತ್ತು ಪರ್ಷಿಯನ್‌ ಸಹೋದರ ಭಾಷೆಗಳಾಗಿವೆ. ಇಂದಿಗೂ ರಾಜ್ಯದಲ್ಲಿ ಶೇ 30ರಷ್ಟು ಪರ್ಷಿಯನ್‌, ಅರೇಬಿಕ್‌ ಶಬ್ದಗಳನ್ನು ಉಪಯೋಗಿಸಲಾಗುತ್ತದೆ’ ಎಂದು ತಿಳಿಸಿದರು.

‘ಸರ್ಕಾರ, ಉಮೇದುವಾರ, ಖಾತೆ, ನಸೀಬು, ದಸ್ತಾವೇಜು, ಭಕ್ಷೀಸು, ನಕಲು, ನೌಕರ ಇವುಗಳೆಲ್ಲ ಪರ್ಷಿಯನ್‌ ಶಬ್ದಗಳಾಗಿವೆ. ಆದಿಲ್‌ಷಾಹಿಗಳ ಚರಿತ್ರೆ ಅಧ್ಯಯನ ಮಾಡದೇ ಕರ್ನಾಟಕದ ಚರಿತ್ರೆಯ ಅಧ್ಯಯನ ಪೂರ್ಣಗೊಳ್ಳುವುದಿಲ್ಲ’ ಎಂದು ಹೇಳಿದರು.

‘ಇಬ್ರಾಹಿಂನಾಮ, ಕಿತಾಬೆ ನವರಸ ಕೃತಿಗಳು ದಖನಿ– ಉರ್ದು ಭಾಷೆಯಲ್ಲಿದ್ದು, ಆ ಕಾಲದ ಜನಜೀವನದ ಬಗ್ಗೆ ಮಾಹಿತಿ ಒದಗಿಸುತ್ತವೆ. ನಂತರ ರಚನೆಗೊಂಡ ಮೊಹಮ್ಮದ್‌ನಾಮ ಕೃತಿಯಿಂದ ಕರ್ನಾಟಕವು ಅಂದಿನ ಬಿಜಾಪುರದ ವಶ ಆಗಿದ್ದನ್ನು ತಿಳಿಸುತ್ತದೆ. ಆ ಕೃತಿಯು ಚಾರಿತ್ರಿಕ ಘಟನೆಗಳ ಮೇಲೆ ಬೆಳಕು ಚೆಲ್ಲುತ್ತದೆ’ ಎಂದರು.

ಚರಿತ್ರೆ ವಿಭಾಗದ ಮುಖ್ಯಸ್ಥ ವಿರೂಪಾಕ್ಷಿ ಪೂಜಾರಹಳ್ಳಿ, ಸಂಶೋಧನಾ ವಿದ್ಯಾರ್ಥಿಗಳಾದ ಜಿ.ಒ. ಶಿವರಾಜ್‌, ಮಂಜುನಾಥ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.