ADVERTISEMENT

ಸಾರ್ವತ್ರಿಕ ಮುಷ್ಕರಕ್ಕೆ ಸಂಘಟನೆ ಸಜ್ಜು

ಜಿಲ್ಲೆಯಲ್ಲಿ ಮಿಶ್ರ ಪ್ರತಿಕ್ರಿಯೆ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 7 ಜನವರಿ 2019, 13:09 IST
Last Updated 7 ಜನವರಿ 2019, 13:09 IST
ಮುಷ್ಕರದ ಕುರಿತು ಜಾಗೃತಿ ಮೂಡಿಸಲು ಬಳ್ಳಾರಿಯಲ್ಲಿ ಸೋಮವಾರ ಸಂಜೆ ವಿವಿಧ ಸಂಘಟನೆಗಳ ಮುಖಂಡರು ಬೈಕ್‌ ರ್‌್ಯಾಲಿಯನ್ನು ಹಮ್ಮಿಕೊಂಡರು.
ಮುಷ್ಕರದ ಕುರಿತು ಜಾಗೃತಿ ಮೂಡಿಸಲು ಬಳ್ಳಾರಿಯಲ್ಲಿ ಸೋಮವಾರ ಸಂಜೆ ವಿವಿಧ ಸಂಘಟನೆಗಳ ಮುಖಂಡರು ಬೈಕ್‌ ರ್‌್ಯಾಲಿಯನ್ನು ಹಮ್ಮಿಕೊಂಡರು.   

ಹೊಸಪೇಟೆ:‘ಜನ ವಿರೋಧಿ ನೀತಿ ಆಡಳಿತ ನಡೆಸುತ್ತಿರುವ ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ಧ’ ಜ.8 ಮತ್ತು 9ರಂದು ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿಯ ನೇತೃತ್ವದಲ್ಲಿ ನಡೆಯಲಿರುವ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಜಿಲ್ಲೆಯಲ್ಲಿ ವಿವಿಧ ಸಂಘಟನೆಗಳು ಸಜ್ಜಾಗಿವೆ. ಆದರೆ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ದೊರಕುವ ಸಾಧ್ಯತೆ ಇದೆ.

ಸಾರ್ವಜನಿಕ ಸಾರಿಗೆ ಬಸ್‌ಗಳ ಸಂಚಾರ ಅನಿಶ್ಷಿತವಾಗಿದೆ. ಆಟೋರಿಕ್ಷಾಗಳ ಸಂಚಾರ ಬಹುತೇಕ ಸ್ಥಗಿತಗೊಳ್ಳಲಿದೆ.

ಮುಷ್ಕರದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯನ್ನು ಪದವಿಪೂರ್ವ ಶಿಕ್ಷಣ ಇಲಾಖೆಯು ಮುಂದೂಡಿದೆ.

ADVERTISEMENT

ಸಾರಿಗೆ, ಹೋಟೆಲ್, ಚಿತ್ರಮಂದಿರ, ಜಿಲ್ಲಾ ವಾಣಿಜ್ಯ ಕೈಗಾರಿಕಾ ಕೇಂದ್ರ, ಹಾಗೂ ಶಾಲಾ ಕಾಲೇಜುಗಳನ್ನು ಎರಡು ದಿನ ಬಂದ್ ಮಾಡಲು ಸಂಘಟನೆಗಳು ಮನವಿ ಮಾಡಿವೆ. ಆದರೆ ಎಪಿಎಂಸಿ ಮಾರುಕಟ್ಟೆ, ಅಂಗಡಿ ಮಳಿಗೆಗಳು ಎಂದಿನಂತೆ ನಡೆಯುವ ಸಾಧ್ಯತೆಯೇ ಹೆಚ್ಚಿದೆ.

‘ಎಪಿಎಂಸಿಗೆ ಸಂಘಟನೆಗಳು ಮುಷ್ಕರದ ಕುರಿತು ಮಾಹಿತಿ ನೀಡಿಲ್ಲ. ಸರ್ಕಾರದಿಂದಲೂ ಸೂಚನೆ ಬಂದಿಲ್ಲ. ಹೀಗಾಗಿ ರಜೆ ಘೋಷಿಸಿಲ್ಲ’ ಎಂದು ಕಾರ್ಯದರ್ಶಿ ಮಹ್ಮದ್‌ ಖಲೀಲ್‌ ತಿಳಿಸಿದ್ದಾರೆ. ಮಾರುಕಟ್ಟೆ ಎಂದಿನಂತೆ ನಡೆಯಲಿದೆ. ಹಮಾಲಿಗಳು, ರೈತರು ಬರದಿದ್ದರೆ ಮಾತ್ರ ಮಾರುಕಟ್ಟೆ ಸ್ಥಗಿತಗೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಬೆಂಬಲ: ಸಿಐಟಿಯು, ಎಐಟಿಯುಸಿ, ಐಎನ್‌ಟಿಯುಸಿ, ಎಐಡಿಎಸ್‍ಓ,ಜನವಾದಿ ಮಹಿಳಾ ಸಂಘಟನೆ, ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯೊಂದಿಗೆ ಎರಡೂ ರೈತ ಸಂಘಗಳು, ಕರ್ನಾಟಕ ಪ್ರಾಂತ ರೈತ ಸಂಘ, ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ, ಅಖಿಲ ಭಾರತ ಕಿಸಾನ್ ಸಭಾ, ರೈತ–ಕೃಷಿ ಕಾರ್ಮಿಕರ ಸಂಘಟನೆ, ಅಖಿಲ ಭಾರತ ಕಿಸಾನ್ ಮಜ್ದೂರ್, ಕಿಸಾನ್ ಸ್ವರಾಜ್ ಹಾಗೂ ಕರ್ನಾಟಕ ಜನಶಕ್ತಿ ಸಂಘಟನೆ, ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ಕಾರ್ಮಿಕರ ಸಂಘ, ಪ್ರಗತಿಕೃಷ್ಣ ಗ್ರಾಮೀಣ ಬ್ಯಾಂಕ್‌ ನೌಕರರ ಮತ್ತು ಅಧಿಕಾರಿಗಳ ಸಂಘ,ವಿಮಾ ನೌಕರರ ಸಂಘ, ತುಂಗಭದ್ರಾ ರೈತ ಸಂಘ, ಜಿಲ್ಲಾ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘ ಮುಷ್ಕರಕ್ಕೆ ಬೆಂಬಲ ನೀಡಿವೆ.

ಹೋಟೆಲ್‌ಗಳು ಬಂದ್:
ಜಿಲ್ಲೆಯಲ್ಲಿ ಎಲ್ಲ ಹೋಟೆಲ್‌ಗಳನ್ನು ಬಂದ್‌ ಮಾಡಲು ನಿರ್ಧರಿಸಲಾಗಿದೆ ಎಂದು ಹೋಟೆಲ್‌ ಮಾಲೀಕರ ಸಂಘದ ಕಾರ್ಯದರ್ಶಿ ಹರೀಶ್‌ ಶೆಟ್ಟಿ ತಿಳಿಸಿದರು.

‘ಮುಷ್ಕರದ ಸನ್ನಿವೇಶದಲ್ಲಿ ಗಲಭೆಗಳಾದರೆ ನಮಗೇ ತೊಂದರೆ, ಹೋಟೆಲ್‌ ತೆರೆದು ಅನಗತ್ಯವಾಗಿ ಆತಂಕ ಪಡುವುದು ಬೇಡ ಎಂದು ನಿರ್ಧರಿಸಿದ್ದೇವೆ’ ಎಂದರು.

ನಗರದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಮುಷ್ಕರದ ಕುರಿತು ಜಾಗೃತಿ ಮೂಡಿಸಲು ಬೈಕ್‌ ರ್‌್ಯಾಲಿಯನ್ನು ಹಮ್ಮಿಕೊಂಡರು.

ಬಸ್‌ ಸಂಚರಿಸಿದರೆ ರಕ್ಷಣೆ: ಎಸ್ಪಿ
ಜಿಲ್ಲೆಯಲ್ಲಿ ಸಾರ್ವಜನಿಕ ಸಾರಿಗೆ ಬಸ್‌ಗಳು ಸಂಚರಿಸಿದರೆ ಅಗತ್ಯ ರಕ್ಷಣೆ ನೀಡಲಾಗುವುದು. ಈ ಬಗ್ಗೆ ಈಶಾನ್ಯ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿಗೆ ಪತ್ರ ಬರೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅರುಣ್‌ ರಂಗರಾಜನ್‌ ತಿಳಿಸಿದರು.

‘ಜಿಲ್ಲೆಯಲ್ಲಿ ಮುಷ್ಕರ ತೀವ್ರವಾಗಿ ನಡೆಯಲಿರುವ 93 ಸ್ಥಳಗಳನ್ನು ಗುರುತಿಸಿದ್ದು, ಅಲ್ಲಿ ಸೂಕ್ತ ಬಂದೋಬಸ್ತ್‌ ವ್ಯವಸ್ಥೆ ಮಾಡಲಾಗಿದೆ. 8 ಜಿಲ್ಲಾ ಸಶಸ್ತ್ರ ಮೀಸಲು ಪಡೆ ಹಾಗೂ 1 ರಾಜ್ಯ ಸಶಸ್ತ್ರ ಮೀಸಲು ಪಡೆಗೆ ಬೇಡಿಕೆ ಸಲ್ಲಿಸಲಾಗಿದೆ. ಎಚ್ಚರಿಕೆಯಿಂದ ಇರುವಂತೆ ಎಲ್ಲ ಅಧಿಕಾರಿಗಳಿಗೂ ಸೂಚನೆ ನೀಡಲಾಗಿದೆ’ ಎಂದರು.

ಮುಷ್ಕರದ ಹಿನ್ನೆಲೆಯಲ್ಲಿ ಜ.8ರಂದು ಮಾತ್ರ ಶಾಲೆ–ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ವಿ.ರಾಮಪ್ರಸಾದ್‌ ಮನೋಹರ್‌ ಆದೇಶಿಸಿದ್ದಾರೆ. ರಜೆ ದಿನದ ತರಗತಿಗಳನ್ನು ಶನಿವಾರ ನಡೆಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.