ADVERTISEMENT

ಕಲಬುರಗಿ ವಿ.ವಿಗೆ ಅಂಬೇಡ್ಕರ್ ಹೆಸರು ನಾಮಕರಣಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2025, 4:56 IST
Last Updated 11 ನವೆಂಬರ್ 2025, 4:56 IST
ಕಂಪ್ಲಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಎಂ.ಆರ್. ಷಣ್ಮುಖ ಅವರಿಗೆ ಸೋಮವಾರ ಸಲ್ಲಿಸಿದರು
ಕಂಪ್ಲಿಯ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಪದಾಧಿಕಾರಿಗಳು ವಿವಿಧ ಬೇಡಿಕೆಗಳ ಮನವಿಯನ್ನು ಗ್ರೇಡ್-2 ತಹಶೀಲ್ದಾರ್ ಎಂ.ಆರ್. ಷಣ್ಮುಖ ಅವರಿಗೆ ಸೋಮವಾರ ಸಲ್ಲಿಸಿದರು   

ಕಂಪ್ಲಿ: ಕಲಬುರಗಿ ವಿಶ್ವವಿದ್ಯಾಲಯಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಹೆಸರು ನಾಮಕರಣ ಮಾಡುವಂತೆ ಕಳೆದ 35 ವರ್ಷಗಳಿಂದ ನಮ್ಮ ಸಮಿತಿ ಹೋರಾಟ ಮಾಡುತ್ತಿದೆ. ಈಗಲಾದರೂ ಸರ್ಕಾರ ಎಚ್ಚೆತ್ತು ವಿಶ್ವವಿದ್ಯಾಲಯಕ್ಕೆ ಅಂಬೇಡ್ಕರ್ ಹೆಸರಿಡುವಂತೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ) ಕಲಬುರಗಿ ವಿಭಾಗೀಯ ಸಂಘಟನಾ ಸಂಚಾಲಕ ಕೆ. ಮೆಹಬೂಬ್ ಸರ್ಕಾರಕ್ಕೆ ಒತ್ತಾಯಿಸಿದರು.

ಈ ಕುರಿತ ಮನವಿಯನ್ನು ಇಲ್ಲಿಯ ಗ್ರೇಡ್-2 ತಹಶೀಲ್ದಾರ್ ಎಂ.ಆರ್. ಷಣ್ಮುಖ ಅವರಿಗೆ ಸೋಮವಾರ ಸಲ್ಲಿಸಿದರು.

ಕಲಬುರಗಿ ಜಿಲ್ಲೆ ಚಿತ್ತಾಪುರ ಪಟ್ಟಣದಲ್ಲಿ ಆರ್.ಎಸ್.ಎಸ್ ಪಥ ಸಂಚಲನ ಮಾಡಲು ಹವಣಿಸುತ್ತಿದ್ದು, ನಿಯಮ ಮೀರಿದಲ್ಲಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಮಾಡಿದರು.

ADVERTISEMENT

‘1950ರ ದಶಕದಲ್ಲಿ ಅಂಬೇಡ್ಕರ್ ಅವರು ಆರ್.ಎಸ್.ಎಸ್, ಹಿಂದೂ ಮಹಾಸಭಾದಂಥ ಸಂಘಟನೆಗಳೊಂದಿಗೆ ಪರಿಶಿಷ್ಟರು ಹೊಂದಾಣಿಕೆ ಮಾಡಿಕೊಳ್ಳಬಾರದೆಂದು, ಮನುಸ್ಮೃತಿಯನ್ನು ಎತ್ತಿಹಿಡಿದು ಸಂವಿಧಾನವನ್ನು ಟೀಕಿಸಿದ್ದ ಆರ್.ಎಸ್.ಎಸ್ ಅಪಾಯಕಾರಿ ಸಂಘಟನೆ ಎಂದು ಪ್ರತಿಪಾದಿಸಿದ್ದರು. ಮಹಿಳೆಯರಿಗೆ ಪುರುಷ ಸಮಾನತೆ ನೀಡುವ ಬಿಲ್ ಪ್ರತಿಯನ್ನು ಆರ್.ಎಸ್.ಎಸ್ ಸುಟ್ಟುಹಾಕಿ ವಿಕೃತಿ ಮೆರೆದಿತ್ತು’ ಎಂದರು.

‘ಸಚಿವ ಪ್ರಿಯಾಂಕ ಖರ್ಗೆ ಅವರಿಗೆ ಜೀವ ಬೆದರಿಕೆ ಹಾಕಿ, ಅಶ್ಲೀಲ ಪದ ಬಳಸಿದ ವ್ಯಕ್ತಿಯನ್ನು ಶಿಕ್ಷೆಗೆ ಗುರಿಪಡಿಸಬೇಕು’ ಎಂದು ಆಗ್ರಹಿಸಿದರು.

ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಫ್ರಾನ್ಸೀಸ್, ತಾಲ್ಲೂಕು ಸಂಚಾಲಕ ಕಾರೇಕಲ್ ಕೃಷ್ಣ, ತಾಲ್ಲೂಕು ಸಂಘಟನಾ ಸಂಚಾಲಕ ರಾಜೇಶ್, ಮುಖಂಡ ಎನ್. ಹೊನ್ನೂರಪ್ಪ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.