ADVERTISEMENT

ಬಳ್ಳಾರಿ: ಕುಂಟುತ್ತಿದೆ ಅಮೃತ ಭಾರತ ನಿಲ್ದಾಣದ ಕೆಲಸ

ಪ್ಲಾಟ್‌ಫಾರ್ಮ್‌ ಮೇಲ್ಸೇತುವೆ ನಿರ್ಮಾಣಕ್ಕೆ ಹೈಟೆನ್ಶನ್‌ ತಂತಿ ಅಡ್ಡಿ

ಆರ್. ಹರಿಶಂಕರ್
Published 30 ಜೂನ್ 2025, 5:45 IST
Last Updated 30 ಜೂನ್ 2025, 5:45 IST
ಬಳ್ಳಾರಿಯ ಪಾರಂಪರಿಕ ರೈಲು ನಿಲ್ದಾಣಕ್ಕೆ ಬಳಿಯಲಾಗಿದ್ದ ಬಣ್ಣ ತೆರವು ಮಾಡಿ, ನೈಸರ್ಗಿಕವಾಗಿ ಕಲ್ಲಿನ ಕಟ್ಟಡದಂತೆ ಕಾಣುವಂತೆ ಮಾಡಿರುವುದು 
ಬಳ್ಳಾರಿಯ ಪಾರಂಪರಿಕ ರೈಲು ನಿಲ್ದಾಣಕ್ಕೆ ಬಳಿಯಲಾಗಿದ್ದ ಬಣ್ಣ ತೆರವು ಮಾಡಿ, ನೈಸರ್ಗಿಕವಾಗಿ ಕಲ್ಲಿನ ಕಟ್ಟಡದಂತೆ ಕಾಣುವಂತೆ ಮಾಡಿರುವುದು    

ಬಳ್ಳಾರಿ: ಭಾರತದ ರೈಲು ನಿಲ್ದಾಣಗಳನ್ನು ಅಭಿವೃದ್ಧಿಪಡಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ ‘ಅಮೃತ ಭಾರತ್‌ ನಿಲ್ದಾಣ’ ಯೋಜನೆಯು ಬಳ್ಳಾರಿಯಲ್ಲಿ ಕುಂಟುತ್ತಾ ಸಾಗಿದೆ. ಒಂದಿಲ್ಲೊಂದು ಅಡೆತಡೆಗಳಿಂದಾಗಿ ಹಲವು ಕಾಮಗಾರಿಗಳು ನನಗೆಗುದಿಗೆ ಬಿದ್ದಿದೆ. 

ಅಮೃತ್ ಭಾರತ್ ನಿಲ್ದಾಣ ಯೋಜನೆಯಡಿ ಹುಬ್ಬಳ್ಳಿ ವಿಭಾಗೀಯ ರೈಲ್ವೆಯ ಬಳ್ಳಾರಿ ರೈಲ್ವೆ ನಿಲ್ದಾಣ ಸೇರಿದಂತೆ ಭಾರತೀಯ ರೈಲ್ವೆಯ 508 ರೈಲು ನಿಲ್ದಾಣಗಳ ಅಭಿವೃದ್ಧಿಗೆ 2023ರ ಆಗಸ್ಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ವೀಡಿಯೊ ಕಾನ್ಸರೆನ್ಸ್ ಮೂಲಕ ಪಾರಂಪರಿಕ ಕಟ್ಟಡವಾದ ಬಳ್ಳಾರಿ ರೈಲ್ವೆ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು.  

₹16.66 ಕೋಟಿ ವೆಚ್ಚದಲ್ಲಿ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸಲಾಗುವುದು ಎಂದು ಹೇಳಲಾಗಿತ್ತು. ಅದರಂತೆ, ಸದ್ಯ, ನಿಲ್ದಾಣದ ಪಾರಂಪರಿಕ ಕಟ್ಟಡದ ಕಲ್ಲಿನ ಗೋಡೆಯ ಮೇಲಿದ್ದ ಬಣ್ಣ ತೆಗೆದು, ನೈಸರ್ಗಿಕವಾಗಿ ಕಾಣುವಂತೆ ಮಾಡಲಾಗಿದೆ. ವಿಶ್ರಾಂತಿ ಕೊಠಡಿ ಮತ್ತು ನಿರೀಕ್ಷಣಾ ಕೊಠಡಿಯನ್ನು ನವೀಕರಣ ಮಾಡಲಾಗಿದೆ. ಎಸ್‌ಎಸ್ ಕಚೇರಿ, ಟಿಕೆಟ್‌ ಬುಕಿಂಗ್ ಕಚೇರಿ ಮತ್ತು ಸಿಬ್ಬಂದಿ ನಿಯಂತ್ರಕ ಕಚೇರಿಗಳನ್ನು ನವೀಕರಿಸಲಾಗಿದೆ. ಪ್ಲಾಟ್‌ ಫಾರ್ಮ್‌ 1, 2 ಮತ್ತು 3ಕ್ಕೆ ಚಾವಣಿ ಹಾಕಲಾಗಿದೆ. ಒಟ್ಟಾರೆ ಶೇ. 64ರಷ್ಟು ಕಾಮಗಾರಿ ಪ್ರಗತಿಯಾಗಿದೆ ಎಂದು ಹುಬ್ಬಳ್ಳಿ ವಿಭಾಗೀಯ ರೈಲ್ವೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮ ‘ಎಕ್ಸ್‌(ಟ್ವಿಟರ್‌)’ನಲ್ಲಿ ಅಧಿಕೃತವಾಗಿ ಪ್ರಕಟಿಸಿದೆ. 

ADVERTISEMENT

ಇಡೀ ಯೋಜನೆಯಲ್ಲಿ ಪ್ರಮುಖ ಭಾಗವಾದ 40 ಅಡಿ ಅಗಲದ ಮೇಲ್ಸೇತುವೆ ನಿರ್ಮಾಣ ಕಾರ್ಯಕ್ಕೆ ಅಡಿಪಾಯವನ್ನೇನೋ ಹಾಕಲಾಗಿದೆ. ಆದರೆ, ಕಾಮಗಾರಿಗೆ ನಿಲ್ದಾಣದಲ್ಲಿರುವ ಹೈಟೆನ್ಷನ್‌ ವಿದ್ಯುತ್‌ ತಂತಿ ಅಡ್ಡ ಬಂದಿದ್ದು, ಕೆಲಸವೇ ಸ್ಥಗಿತವಾಗಿದೆ. ರೈಲ್ವೆ ಇಲಾಖೆ ವಿದ್ಯುತ್‌ ನಿಲುಗಡೆ ಮಾಡುತ್ತಿಲ್ಲ, ಗುತ್ತಿಗೆದಾರರು ಕೆಲಸ ಮಾಡಲು ಆಗುತ್ತಿಲ್ಲ ಎಂಬ ಪರಿಸ್ಥಿತಿ ಸೃಷ್ಟಿಯಾಗಿದೆ. ಹೀಗಾಗಿ ಒಂದು ಪ್ಲಾಟ್‌ಫಾರ್ಮ್‌ನಿಂದ ಮತ್ತೊಂದು ಪ್ಲಾಟ್‌ಫಾರ್ಮ್‌ಗೆ ತೆರಳಲು ಪ್ರಯಾಣಿಕರು ಯಮಯಾಥನೆ ಅನುಭವಿಸುವಂತೆ ಆಗಿದೆ.    

ನಿಲ್ದಾಣದ ಮತ್ತೊಂದು ತುದಿಗೆ ಹೋಗಿ, ಅಲ್ಲಿರುವ ಮೇಲ್ಸೇತುವೆ ಏರಿ ಪ್ಲಾಟ್‌ಫಾರ್ಮ್‌ಗಳನ್ನು ದಾಟಬೇಕಾದ ಪರಿಸ್ಥಿತಿ ಇದೆ. ಇನ್ನೊಂದೆಡೆ, ಮೇಲ್ಸೇತುವೆ ನಿರ್ಮಾಣಕ್ಕೆಂದು ಗುತ್ತಿಗೆದಾರರು 8 ತಿಂಗಳ ಹಿಂದೆಯೇ ತಂದಿರುವ ಲಕ್ಷಾಂತರ ರೂಪಾಯಿ ಮೌಲ್ಯದ ಪರಿಕರಗಳು ನಿಲ್ದಾಣದ ಹೊರಭಾಗದಲ್ಲಿ ಗಾಳಿ, ಮಳೆಗೆ ಮೈಯೊಡ್ಡಿ ಮಲಗಿವೆ. 

ಇನ್ನಷ್ಟು ಬಾಕಿ ಕಾಮಗಾರಿಗಳು: ನಿಲ್ದಾಣದ 1, 2 ಮತ್ತು 3ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ಲಿಫ್ಟ್‌ ಅಳವಡಿಕೆ, 2 ಮತ್ತು 3ನೇ ಪ್ಲಾಟ್‌ಫಾರ್ಮ್‌ಗಳಲ್ಲಿ ಎಸ್ಕಲೇಟರ್ ಅಳವಡಿಕೆ, 2 ಮತ್ತು 3ನೇ ಫ್ಲಾಟ್‌ಫಾರ್ಮ್‌ನಲ್ಲಿ ನೆಲಹಾಸು ಕಾಮಗಾರಿ ಶೇ. 75ರಷ್ಟು ಬಾಕಿ ಇದೆ ಎಂದು ಗೊತ್ತಾಗಿದೆ. 

ಸಂಯೋಜಿತ ಅನುದಾನ: ಬಳ್ಳಾರಿಯ ರೈಲು ನಿಲ್ದಾಣ ಅಭಿವೃದ್ಧಿಗೆ ₹16.66 ಕೋಟಿ ಇಟ್ಟಿರುವುದಾಗಿ ರೈಲ್ವೆ ಇಲಾಖೆ ಹೇಳಿತ್ತು. ಈ ಮೊತ್ತ ಕಡಿಮೆ ಎಂದು ಆರಂಭದಲ್ಲೇ ಆಕ್ಷೇಪ ವ್ಯಕ್ತವಾಗಿತ್ತು. ಆದರೆ, ಈಗ ಇದು ವಿವಿಧ ರೈಲು ನಿಲ್ದಾಣಗಳನ್ನು ಒಳಗೊಂಡ ಸಂಯೋಜಿತ ಕಾಮಗಾರಿ ಎಂಬುದು ಗೊತ್ತಾಗಿದೆ. ಬಳ್ಳಾರಿ, ಗದಗ, ಕೊಪ್ಪಳ, ಮುನಿರಾವಾದ್, ಹೊಸಪೇಟೆ ನಿಲ್ದಾಣಗಳು ಇದರಲ್ಲಿ ಸೇರಿದ್ದು ಒಟ್ಟು ₹54 ಕೋಟಿ ಒದಗಿಸಲಾಗಿದೆ. 

ನಿಲ್ದಾಣದಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ಮೇಲ್ಸೇತುವೆಗೆಂದು ತಂದ ಪರಿಕರಗಳು ನಿಲ್ದಾಣದ ಹೊರಗೆ ಬಿದ್ದಿರುವುದು  
ಬಳ್ಳಾರಿಯು ರೈಲ್ವೆ ಇಲಾಖೆಗೆ ಆದಾಯದ ಪ್ರಮುಖ ಮೂಲ. ಹಾಗಾಗಿ ಬಳ್ಳಾರಿ ನಿಲ್ದಾಣಕ್ಕೆ ₹50 ಕೋಟಿ ಕೊಡಬೇಕು. ನಿಲ್ದಾಣದ ಪಶ್ಚಿಮದಲ್ಲೂ ಪ್ರವೇಶ ಕಲ್ಪಿಸಬೇಕು. ಅಲ್ಲಿಯೂ ಪ್ಲಾಟ್‌ಫಾರ್ಮ್‌ ಹಾಕಬೇಕು. 
– ಮಹೇಶ್ವರಸ್ವಾಮಿ, ರೈಲ್ವೆ ಕ್ರಿಯಾ ಸಮಿತಿಯ ಅಧ್ಯಕ್ಷ 

ಉಕ್ಕು ಕಾರ್ಖಾನೆಯೊಂದರ ಲಾಭಿ

ಬಳ್ಳಾರಿ ಮಾರ್ಗದಲ್ಲಿ ರೈಲು ವಿದ್ಯುದೀಕರಣ ಬಹಳ ಹಿಂದೆಯೇ ಆಗಿದೆ. ಇಲ್ಲಿನ ಬೃಹತ್‌ ಕಬ್ಬಿಣ ಕಾರ್ಖಾನೆಯೊಂದರ ಉತ್ಪನ್ನಗಳನ್ನು ತುಂಬಿದ 90 ರೈಲುಗಳು ಬಳ್ಳಾರಿ ಮಾರ್ಗದಲ್ಲಿ (ಎರಡು ಸುತ್ತು ಸೇರಿ) ಸಂಚರಿಸುತ್ತವೆ. ಈ ರೈಲುಗಳೆಲ್ಲವೂ ವಿದ್ಯುತ್‌ಚಾಲಿತ. ಇದು ರೈಲ್ವೆಗೆ ಅಪಾರವಾದ ಆದಾಯ ತಂದುಕೊಡುತ್ತಿದೆ.

ಪ್ಲಾಟ್‌ಫಾರ್ಮ್‌ ಮೇಲ್ಸೇತುವೆ ಕಾಮಗಾರಿಗೆಂದು ವಿದ್ಯುತ್‌ ನಿಲುಗಡೆ ಮಾಡಿದರೆ ಆ ಪ್ರಭಾವಿ ಕಾರ್ಖಾನೆಯ ರೈಲುಗಳೆಲ್ಲವೂ ನಿಲ್ಲಬೇಕಾಗುತ್ತದೆ. ಹೀಗಾಗಿಯೇ ರೈಲ್ವೆ ಇಲಾಖೆಯು ವಿದ್ಯುತ್‌ ನಿಲುಗಡೆ ಮಾಡುವ ಅಥವಾ ತಂತಿ ತೆರವು ಮಾಡುವ ಗೋಜಿಗೇ ಹೋಗುತ್ತಿಲ್ಲ. ಇತ್ತ ಕಾಮಗಾರಿ ನಡೆಯುತ್ತಿಲ್ಲ. ಅದರ ಪರಿಣಾಮ ಪ್ರಯಾಣಿಕರ ಮೇಲೆ ಎಂಬಂತೆ ಆಗಿದೆ.  

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.