ADVERTISEMENT

ಡಿಸಿಸಿ ಬ್ಯಾಂಕ್‌ ನಿರ್ದೇಶಕ ಸ್ಥಾನಕ್ಕೆಸಚಿವ ಆನಂದ್‌ ಸಿಂಗ್‌ ನಾಮಪತ್ರ

ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ ಅಧ್ಯಕ್ಷ ಗಾದಿ ಮೇಲೆ ಕಣ್ಣಿಟ್ಟಿರುವ ಸಿಂಗ್‌

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2020, 11:18 IST
Last Updated 24 ಡಿಸೆಂಬರ್ 2020, 11:18 IST
ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನದ ಚುನಾವಣೆಗೆ ಸಚಿವ ಆನಂದ್‌ ಸಿಂಗ್‌ ಅವರು ಗುರುವಾರ  ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು
ಡಿಸಿಸಿ ಬ್ಯಾಂಕಿನ ನಿರ್ದೇಶಕ ಸ್ಥಾನದ ಚುನಾವಣೆಗೆ ಸಚಿವ ಆನಂದ್‌ ಸಿಂಗ್‌ ಅವರು ಗುರುವಾರ  ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು   

ಹೊಸಪೇಟೆ: ಇಲ್ಲಿನ ಬಳ್ಳಾರಿ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಬಿಡಿಸಿಸಿ) ಆಡಳಿತ ಮಂಡಳಿಯಲ್ಲಿ ಖಾಲಿ ಇರುವ ನಿರ್ದೇಶಕ ಸ್ಥಾನದ ಚುನಾವಣೆಗೆ ಅರಣ್ಯ ಸಚಿವ ಆನಂದ್‌ ಸಿಂಗ್‌ ಗುರುವಾರ (ಡಿ.24) ನಾಮಪತ್ರ ಸಲ್ಲಿಸಿದರು.

ಆನಂದ್‌ ಸಿಂಗ್‌ ಅವರು ತಾಲ್ಲೂಕು ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘ ಹಾಗೂ ಇತರೆ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಗಳ ಕ್ಷೇತ್ರದ ಮೂಲಕ ಚುನಾವಣಾಧಿಕಾರಿ ಮಹಾಂತೇಶ್‌ ಮಠದ ಅವರಿಗೆ ನಾಮಪತ್ರ ಸಲ್ಲಿಸಿದರು.

ನವೆಂಬರ್‌ನಲ್ಲಿ ಆನಂದ್‌ ಸಿಂಗ್‌ ಅವರು ಹೊಸಪೇಟೆ ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘದ (ಟಿಎಪಿಸಿಎಂಎಸ್‌) ಮೂಲಕ ಸಹಕಾರ ರಂಗಕ್ಕೆ ಕಾಲಿರಿಸಿದ್ದಾರೆ. ಈಗ ಅವರ ದೃಷ್ಟಿ ಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಗಾದಿಯ ಮೇಲೆ ನೆಟ್ಟಿದೆ. ಬರುವ ದಿನಗಳಲ್ಲಿ ಡಿಸಿಸಿ ಬ್ಯಾಂಕ್‌ ತನ್ನ ತೆಕ್ಕೆಗೆ ತೆಗೆದುಕೊಳ್ಳಲಿದ್ದಾರೆ ಎಂಬ ಗುಸುಗುಸು ಚರ್ಚೆ ಸಹಕಾರ ಕ್ಷೇತ್ರದಲ್ಲಿ ನಡೆಯುತ್ತಿದೆ. ‘ಸಹಕಾರ ಕ್ಷೇತ್ರಕ್ಕೂ ಆನಂದ್‌ ಸಿಂಗ್‌’ ಶೀರ್ಷಿಕೆ ಅಡಿ ನ. 23ರಂದು ‘ಪ್ರಜಾವಾಣಿ’ ವರದಿ ಕೂಡ ಪ್ರಕಟಿಸಿತ್ತು.

ADVERTISEMENT

ತಾಲ್ಲೂಕು ವ್ಯವಸಾಯ ಉತ್ಪನ್ನ ಮಾರಾಟ ಸಹಕಾರ ಸಂಘ, ಹಾಲು ಉತ್ಪಾದಕರ ಸಹಕಾರ ಸಂಘ ಹಾಗೂ ಸೌಹಾರ್ದ ಸಹಕಾರ ಬ್ಯಾಂಕ್‌ಗಳ ತಲಾ ಒಬ್ಬ ಮತ್ತು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಏಳು ಜನ ನಿರ್ದೇಶಕರು ಅಥವಾ ಅಧ್ಯಕ್ಷ, ಡಿಸಿಸಿ ಬ್ಯಾಂಕಿನ ನಿರ್ದೇಶಕರಾಗುತ್ತಾರೆ. ಮೊದಲಿನಿಂದಲೂ ಡಿಸಿಸಿ ಬ್ಯಾಂಕಿನ ಮೇಲೆ ಕಾಂಗ್ರೆಸ್‌ ಹಿಡಿತ ಇದೆ. ಬ್ಯಾಂಕಿನ ಹಾಲಿ ಅಧ್ಯಕ್ಷ ಟಿ.ಎಂ. ಚಂದ್ರಶೇಖರಯ್ಯ ಕೂಡ ಕಾಂಗ್ರೆಸ್‌ ಮಾಜಿ ಶಾಸಕರು.

ನಿರ್ದೇಶಕ ಸ್ಥಾನಕ್ಕೆ ನಾಮಪತ್ರ ಸಲ್ಲಿಸಲು ಡಿ. 31 ಕೊನೆಯ ದಿನ. ಜ. 1ರಂದು ಬೆಳಿಗ್ಗೆ 10ಕ್ಕೆ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜ. 2 ನಾಮಪತ್ರ ಹಿಂಪಡೆಯಲು ಕೊನೆಯ ದಿನ. ಜ. 8ರಂದು ಮತದಾನ, ಬಳಿಕ ಅದೇ ದಿನ ಮತ ಎಣಿಕೆ ನಡೆದು ಫಲಿತಾಂಶ ಹೊರಬೀಳಲಿದೆ. ಅಂದಹಾಗೆ, ನಿರ್ದೇಶಕರ ಆಯ್ಕೆಗೆ ಆರು ಜನ ಸದಸ್ಯರು ಮತದಾನದ ಹಕ್ಕು ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.