ADVERTISEMENT

ಹಂಪಿ ನಿರ್ಬಂಧಿತ ಪ್ರದೇಶದಲ್ಲಿ ಭಾರಿ ವಾಹನಗಳ ಸಂಚಾರ

ಸಿನಿಮಾ ಚಿತ್ರೀಕರಣದ ಹೆಸರಿನಲ್ಲಿ ಬೇಕಾಬಿಟ್ಟಿ ವಾಹನಗಳ ಓಡಾಟ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 13 ಜುಲೈ 2022, 15:25 IST
Last Updated 13 ಜುಲೈ 2022, 15:25 IST
ಹಂಪಿ ವಿಜಯ ವಿಠಲ ದೇವಸ್ಥಾನದ ಬಳಿ ಮಂಗಳವಾರ ತಮಿಳು ಸಿನಿಮಾ ಚಿತ್ರೀಕರಣ ನಡೆಯಿತು. ಸ್ಥಳದಲ್ಲಿ ಕಾರವಾನ್‌ ಸೇರಿದಂತೆ ಭಾರಿ  ವಾಹನಗಳು ಬೀಡು ಬಿಟ್ಟಿದ್ದವು
ಹಂಪಿ ವಿಜಯ ವಿಠಲ ದೇವಸ್ಥಾನದ ಬಳಿ ಮಂಗಳವಾರ ತಮಿಳು ಸಿನಿಮಾ ಚಿತ್ರೀಕರಣ ನಡೆಯಿತು. ಸ್ಥಳದಲ್ಲಿ ಕಾರವಾನ್‌ ಸೇರಿದಂತೆ ಭಾರಿ  ವಾಹನಗಳು ಬೀಡು ಬಿಟ್ಟಿದ್ದವು   

ಹೊಸಪೇಟೆ (ವಿಜಯನಗರ): ಹಂಪಿಯ ವಿಜಯ ವಿಠಲ ದೇವಸ್ಥಾನಕ್ಕೆ ತೆರಳುವ ಮಾರ್ಗದಲ್ಲಿ ಪೆಟ್ರೋಲ್‌, ಡೀಸೆಲ್‌ ಚಾಲಿತ ವಾಹನಗಳ ಸಂಚಾರವನ್ನು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆ ನಿರ್ಬಂಧಿಸಿದೆ. ಆದರೆ, ಈ ನಿಯಮದ ಹೊರತಾಗಿಯೂ ಮಂಗಳವಾರ ದಿನವಿಡೀ ಆ ಭಾಗದಲ್ಲಿ ಭಾರಿ ವಾಹನಗಳು ಬೇಕಾಬಿಟ್ಟಿ ಸಂಚರಿಸಿದವು.

ಮಂಗಳವಾರ ವಿಜಯ ವಿಠಲ ದೇವಸ್ಥಾನದ ಪರಿಸರದಲ್ಲಿ ತಮಿಳು ಸಿನಿಮಾದ ಚಿತ್ರೀಕರಣ ನಡೆಯಿತು. ಕಾರವಾನ್‌, ಜನರೇಟರ್‌ ಹೊಂದಿದ ನಾಲ್ಕು ಭಾರಿ ವಾಹನಗಳ ಸಮೇತ ಸುಮಾರು 16 ರಿಂದ 18 ವಾಹನಗಳು ಯಾವುದೇ ಅಡೆತಡೆಯಿಲ್ಲದೇ ಸಂಚರಿಸಿದವು.

ವಿಜಯ ವಿಠಲ ದೇವಸ್ಥಾನವೂ ಸಂರಕ್ಷಿತ ಸ್ಮಾರಕವಾಗಿದೆ. ಅದರ ಸೌಂದರ್ಯಕ್ಕೆ ಕುಂದು ಬಾರದಿರಲಿ ಎಂದು ಪುರಾತತ್ವ ಸರ್ವೇಕ್ಷಣ ಇಲಾಖೆಯು ಇಂಧನಚಾಲಿತ ವಾಹನಗಳ ಸಂಚಾರ ನಿರ್ಬಂಧಿಸಿದೆ. ಅಲ್ಲಿಗೆ ಹೋಗಿ ಬರಲು ಬ್ಯಾಟರಿಚಾಲಿತ ವಾಹನಗಳಿಗೆ ವ್ಯವಸ್ಥೆ ಮಾಡಿದೆ. ವಿಶೇಷ ಭದ್ರತೆ ಹೊಂದಿದವರಿಗೆ ಅವರ ಕೆಲವು ವಾಹನಗಳಿಗೆ ಅವಕಾಶ ಕಲ್ಪಿಸುತ್ತದೆ. ಆದರೆ, ಸಿನಿಮಾ ಚಿತ್ರೀಕರಣದ ಹೆಸರಿನಲ್ಲಿ ಮಂಗಳವಾರ ಅನೇಕ ವಾಹನಗಳು ನಿಯಮ ತೂರಿ ಎಲ್ಲೆಡೆ ಬೇಕಾಬಿಟ್ಟಿ ಸಂಚರಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ‘ಬೇಲಿಯೇ ಎದ್ದು ಹೊಲ ಮೇಯ್ದರೆ ಹೇಗೆ?’, ತಾನೇ ರೂಪಿಸಿದ ನಿಯಮಗಳನ್ನು ಉಲ್ಲಂಘಿಸಲು ಅನುಮತಿ ಕೊಟ್ಟರೆ ಹೇಗೆ? ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.

ADVERTISEMENT

‘ಸಿನಿಮಾ ಚಿತ್ರೀಕರಣ ಮಾಡುವುದಾದರೆ ಮಾಡಲಿ, ಆದರೆ, ಎಲ್ಲ ನಿಯಮಗಳನ್ನು ಪಾಲಿಸಬೇಕು. ತೀರ ಅಗತ್ಯವಿದ್ದರೆ ಕಾರವಾನ್‌ ತೆಗೆದುಕೊಂಡು ಹೋಗಬಹುದಿತ್ತು. 15ಕ್ಕೂ ಹೆಚ್ಚು ವಾಹನಗಳನ್ನು ಸಂಚರಿಸಲು ಅವಕಾಶ ಕೊಡಬಾರದಿತ್ತು. ಎಷ್ಟೋ ಜನ ಅಂಗವಿಕಲರು ದೂರದಿಂದ ಬಂದರೂ ಅವರ ವಾಹನಗಳಿಗೆ ಬಿಡುವುದಿಲ್ಲ. ಅಂತಹದ್ದರಲ್ಲಿ ಸಿನಿಮಾ ಮಂದಿಗೆ ಬಿಡುವ ಅಗತ್ಯವೇನಾದರೂ ಏನಿತ್ತು? ಹಣ ಪಡೆದು ವಾಹನಗಳನ್ನು ಬಿಟ್ಟಿರುವ ಆರೋಪಗಳು ಕೇಳಿ ಬಂದಿದೆ. ಸಂಬಂಧಿಸಿದವರು ಅದನ್ನು ಪರಿಶೀಲಿಸಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ತಮ್ಮನ್ನು ಯಾರೂ ಕೇಳುವವರು ಇಲ್ಲ. ತಾವಾಡಿದ್ದೇ ಆಟ ಎಂಬಂತಾಗಿದೆ‘ ಎಂದು ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ಅಧ್ಯಕ್ಷ ವಿಶ್ವನಾಥ ಮಾಳಗಿ ಹೇಳಿದರು.

ಈ ಕುರಿತು ಪುರಾತತ್ವ ಸರ್ವೇಕ್ಷಣ ಇಲಾಖೆ ಹಂಪಿ ವೃತ್ತದ ಸೂಪರಿಟೆಂಡೆಂಟ್‌ ನಿಹಿಲ್‌ದಾಸ್‌ ಅವರನ್ನು ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಎರಡು ದಿನಗಳ ವರೆಗೆ ಅನುಮತಿ ಪಡೆದು ಚಿತ್ರೀಕರಣ ಮಾಡುತ್ತಿದ್ದಾರೆ. ಎಲ್ಲ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಎಷ್ಟು ವಾಹನಗಳ ಸಂಚಾರಕ್ಕೆ ಅನುಮತಿ ಕೊಡಬೇಕು ಅಥವಾ ಕೊಡಬಾರದು ಎನ್ನುವುದು ನನ್ನ ವಿವೇಚನೆಗೆ ಬಿಟ್ಟದ್ದು’ ಎಂದು ಜೋರು ದನಿಯಲ್ಲಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.