ಸಂಡೂರು: ತಾಲ್ಲೂಕಿನ ಸುಶೀಲನಗರದಲ್ಲಿ ಶುಕ್ರವಾರ ತಡರಾತ್ರಿ ಚಿರತೆಯೊಂದು ಕಾಣಿಸಿಕೊಂಡಿದ್ದು, ಖಾಸಿಂಪೀರಾ ಎಂಬುವರ ದನದ ಕೊಟ್ಟಿಗೆಗೆ ನುಗ್ಗಿ ಎರಡು ಕರು ಹಾಗೂ ಹಸುವಿಗೆ ಗಾಯ ಮಾಡಿದೆ.
ಚಿರತೆ ಕಂಡು ದನ–ಕರುಗಳು ಬೆಚ್ಚಿ, ಕೂಗಿದ್ದರಿಂದ ಜನರು ಎಚ್ಚರಗೊಂಡು ಶೆಡ್ ಬಳಿ ಬಂದಾಗ ಚಿರತೆ ಇರುವುದು ಗೊತ್ತಾಗಿದೆ. ಗದ್ದಲ ಮಾಡಿ ಓಡಿಸಿ, ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಇಲಾಖೆ ಸಿಬ್ಬಂದಿ ಬಂದು ಪಟಾಕಿ ಸಿಡಿಸಿದರು.
ಸುಶೀಲನಗರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಜೈಸಿಂಗ್ ಪುರ ಮತ್ತು ವೆಂಕಟಗಿರಿ ಮಧ್ಯೆ ಇರುವ ಗಾಳೆಮ್ಮನ ಗುಡಿಯಲ್ಲಿ ಶುಕ್ರವಾರ ಕರಡಿ ಕಾಣಿಸಿಕೊಂಡಿತ್ತು. ಸ್ಥಳೀಯರು ಅದನ್ನು ಓಡಿಸಿದ್ದಾರೆ.
ಉತ್ತರ ವಲಯ ಅರಣ್ಯಾಧಿಕಾರಿ ಸಯ್ಯದ್ ದಾದಾ ಖಲಂದರ್ ಈ ಕುರಿತು ಪ್ರತಿಕ್ರಿಯಿಸಿ,‘ಚಿರತೆ ಸೆರೆಗೆ ಬೋನ್ ಅಳವಡಿಸಲಾಗಿದೆ. ಶೆಡ್ ಬಳಿ ಸ್ವಚ್ಛಗೊಳಿಸಲಾಗಿದೆ. ಗಾಳೆಮ್ಮನ ಗುಡಿ ಬಳಿ ಕರಡಿ ಮತ್ತೊಮ್ಮೆ ಕಂಡು ಬಂದರೆ, ಹಿಡಿದು ಬೇರೆಡೆ ಸಾಗಿಸಲಾಗುವುದು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.