ಮರಿಯಮ್ಮನಹಳ್ಳಿ: ಸಮೀಪದ 114-ಡಣಾಪುರ ಗ್ರಾಮದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಬಿಎಂಎಂ ಇಸ್ಪಾತ್ ಕಂಪನಿಯ ವಿರುದ್ಧ ಹಲವು ಆರೋಪ ಮಾಡಿ ಕಾನೂನು ಕ್ರಮಕ್ಕೆ ಒತ್ತಾಯಿಸಿ ಅಧ್ಯಕ್ಷೆ ಎಚ್.ದುರುಗಮ್ಮ ಹಾಗೂ ಪಿಡಿಒ ಸೈಯದ್ ಮನ್ಸೂರ್ ಹುಸೇನ್ ಅವರಿಗೆ ಮನವಿ ಸಲ್ಲಿಸಿದರು.
ಬಿಎಂಎಂ ಇಸ್ಪಾತ್ ಕಂಪನಿಯು ಕಾನೂನು ಬಾಹಿರವಾಗಿ ಅತಿ ಹೆಚ್ಚಿನ 3500 ಎಕರೆ ಭೂಮಿಯನ್ನು ಕೆಐಎಡಿಬಿ ವತಿಯಿಂದ ಹಾಗೂ ಬೇನಾಮಿ ವ್ಯಕ್ತಿಗಳ ಹೆಸರಲ್ಲಿ 150 ಎಕರೆ ನೇರವಾಗಿ ಖರೀದಿ ಮಾಡಿದೆ. ನಂತರ ಭೂ ಪರಿವರ್ತನೆ ಮಾಡಿಕೊಂಡು, ಭೂ ಪರಿವರ್ತನೆ ಆದೇಶ ಉಲ್ಲಂಘಿಸಿ ಕಾರ್ಖಾನೆ ನಡೆಸುತ್ತಿದೆ. ಅಲ್ಲದೆ, ಸಿಎಸ್‍ಆರ್ ನಿಧಿಯನ್ನು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸರಿಯಾಗಿ ಅನುಷ್ಠಾನಗೊಳಿಸುತ್ತಿಲ್ಲ ಎಂದು ಆರೋಪಿಸಿದರು.
ಕಾರ್ಯದರ್ಶಿ ಎಂ.ಕನಕಪ್ಪ ಅವರು, 2018ರ ಸರ್ವೆ ಪಟ್ಟಿಯಲ್ಲಿನ ಕೆಎಂಆರ್‌ಸಿ ವಸತಿ ಯೋಜನೆಯ ಅರ್ಹ 234 ಹಾಗೂ ಅನರ್ಹ 123 ಜನ ಸೇರಿದಂತೆ ಒಟ್ಟು 357 ಫಲಾನುಭವಿಗಳ ಪಟ್ಟಿಯನ್ನು ಓದಿ ಅನುಮೋದನೆ ಪಡೆದರು. ನಂತರ 2026-27ನೇ ಸಾಲಿನ ಉದ್ಯೋಗ ಖಾತ್ರಿ ಯೋಜನೆಯ ಕಾಮಗಾರಿಗಳ ಕ್ರಿಯಾಯೋಜನೆ ತಯಾರಿಸುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು.
ನೋಡಲ್ ಅಧಿಕಾರಿ ಸುಧಾಕರ್, ಮುಖ್ಯಶಿಕ್ಷಕ ತಿಂದಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಪದ್ಮಾವತಿ ನಾಗರಾಜ್, ಸದಸ್ಯರಾದ ರವಿರಾಜ್, ಎಚ್.ಮಲ್ಲೇಶ್, ಗಾಳೇಶ್, ಮಂಜುನಾಥ, ಹನುಮಂತ, ತಂಗರಾಜ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.