
ಬಳ್ಳಾರಿ: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಗುಣಮಟ್ಟದ ತೊಗರಿ ಖರೀದಿ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ತಿಳಿಸಿದ್ದಾರೆ.
ನೂತನ ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆ ನಡೆಸಿದ ಅವರು ಮಾತನಾಡಿದರು.
‘2025-26ನೇ ಸಾಲಿನ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ತೊಗರಿ ಖರೀದಿಗೆ ರಾಜ್ಯ ಸರ್ಕಾರ ಆದೇಶಿಸಿದೆ. ಪ್ರತಿ ಕ್ವಿಂಟಲ್‌ಗೆ ₹8 ಸಾವಿರದಂತೆ ಪ್ರತಿ ಎಕರೆಗೆ 4 ಕ್ವಿಂಟಲ್‌ನಂತೆ ತೊಗರಿ ಖರೀದಿಸಲಾಗುತ್ತದೆ. ಬೆಂಬಲ ಯೋಜನೆಯಡಿ ಖರೀದಿ ಕೇಂದ್ರಗಳನ್ನು ಸ್ಥಾಪಿಸಿ, ಫ್ರೂಟ್ಸ್ ತಂತ್ರಾಂಶದ ಆಧಾರದ ಮೇಲೆ ರೈತರಿಂದ ಖರೀದಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
‘ನೋಂದಣಿ ಕಾರ್ಯ 80 ದಿನಗಳ ವರೆಗೆ ನಡೆಯಲಿದೆ. ಖರೀದಿ ಪ್ರಕ್ರಿಯೆ 90 ದಿನಗಳವರೆಗೆ ನಡೆಯಲಿದೆ. ಗೋದಾಮುಗಳನ್ನು ಶುದ್ಧವಾಗಿಟ್ಟುಕೊಳ್ಳಬೇಕು. ಮೂಲಸೌಕರ್ಯವುಳ್ಳ ಖರೀದಿ ಕೇಂದ್ರಗಳ ಸ್ಥಾಪನೆಗೆ ಅಗತ್ಯ ಸಿದ್ಧತೆ ಕೈಗೊಳ್ಳಬೇಕು. ತೂಕ ಪ್ರಮಾಣೀಕತೆ ಸೇರಿದಂತೆ ಬೇಕಾದ ಎಲ್ಲ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು’ ಎಂದು ಸೂಚನೆ ನೀಡಿದರು.
‘ನೋಂದಣಿ ವೇಳೆ ರೈತರು ಆಧಾರ್ ಕಾರ್ಡ್, ಪಹಣಿ ಪ್ರತಿ, ಆಧಾರ್ ಲಿಂಕ್ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸ್‌ಬುಕ್ ಜೆರಾಕ್ಸ್ ಪ್ರತಿ ಸಲ್ಲಿಸಬೇಕು. ಖರೀದಿ ಕೇಂದ್ರಗಳಲ್ಲಿ ಪಿ.ಒ.ಎಸ್ ಯಂತ್ರದ ಮೂಲಕ ರೈತರ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆಯಲ್ಲಿ ಆಧಾರ್ ಬಯೋ ಮೆಟ್ರಿಕ್ ಪಡೆಯುವುದು ಕಡ್ಡಾಯ. ರೈತರು ಇದಕ್ಕೆ ಸಹಕರಿಸಬೇಕು’ ಎಂದರು.
ರೈತರು ಫ್ರೂಟ್ಸ್ ಐ.ಡಿಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳುವ ಕುರಿತು ರೈತರಿಗೆ ಮಾಹಿತಿ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
‘ರೈತರ ಹೆಸರಿನ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಡಿಬಿಟಿ ಮೂಲಕ ಹಣ ಜಮೆ ಆಗಲಿದ್ದು, ರೈತರು ಕಡ್ಡಾಯವಾಗಿ ಎಫ್‌ಐಡಿ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಕೊಳ್ಳುವಂತೆ ತಿಳಿಸಬೇಕು’ ಎಂದರು.
ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕ ಓಂಕಾರಯ್ಯ, ಕೃಷಿ ಜಂಟಿ ನಿರ್ದೇಶಕ ಸೋಮಸುಂದರ್, ಸಹಕಾರ ಇಲಾಖೆಯ ಉಪನಿಬಂಧಕ ವೀರಭದ್ರಯ್ಯ, ಕಾನೂನು ಮಾಪನ ಶಾಸ್ತ್ರ ಇಲಾಖೆಯ ನಿರೀಕ್ಷಕ ಮನೋಜ್ ಕುಮಾರ್ ಸೇರಿದಂತೆ ಖರೀದಿ ಎಜೆನ್ಸಿಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.