ಬಳ್ಳಾರಿ: ಬಳ್ಳಾರಿಯ 157ನೇ ಜಿಲ್ಲಾಧಿಕಾರಿಯಾಗಿ ಐಎಎಸ್ ಅಧಿಕಾರಿ ನಾಗೇಂದ್ರ ಪ್ರಸಾದ್ ಕೆ ಅವರು ಈಚೆಗಷ್ಟೇ ಅಧಿಕಾರ ವಹಿಸಿಕೊಂಡಿದ್ದಾರೆ. ಜಿಲ್ಲೆ ಬಗೆಗಿನ ತಮ್ಮ ಕಲ್ಪನೆ, ಮುನ್ನೋಟಗಳ ಬಗ್ಗೆ ಅವರು ಪ್ರಜಾವಾಣಿಯೊಂದಿಗೆ ಮಾತನಾಡಿದ್ದಾರೆ.
ಉತ್ತರ: ನಾನು ಕೊಡುಗಿನವನು. ಈಗಿನ ಕುಶಾಲನಗರ ತಾಲೂಕಿನ ಹೆಬ್ಬಾಲೆ ನನ್ನ ಊರು. ಎಸ್ಸೆಸ್ಸೆಲ್ಸಿವರೆಗೆ ಸರ್ಕಾರಿ ಕನ್ನಡ ಶಾಲೆಯಲ್ಲಿ ಕೊಡಗಿನಲ್ಲೇ ಓದಿದೆ. ಶಾರದಾ ವಿಲಾಸ ಕಾಲೇಜಿಲ್ಲಿ ಪಿಯುಸಿ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ತೋಟಗಾರಿಕೆಯಲ್ಲಿ ಎಂ.ಎಸ್ಸಿ ಮಾಡಿದೆ.
ಬಳ್ಳಾರಿ ಜಿಲ್ಲಾಧಿಕಾರಿಯಾಗಿ ನಿರ್ಮಲ ಮನಸ್ಸಿನಿಂದ ಬಂದಿದ್ದೇನೆ. ಇಲ್ಲಿನ ಪರಿಸ್ಥಿತಿಗಳನ್ನು ನೋಡಿ ನಂತರ ಯೋಜನೆ ಹಾಕಿಕೊಳ್ಳಲು ನಿರ್ಧರಿಸಿದ್ದೇನೆ.ಈ ಜಿಲ್ಲೆಗೆ ಏನು ಮಾಡಬೇಕು ಎಂಬುದರ ರೂಪರೇಷೆ ಸಿದ್ಧಪಡಿಸುತ್ತಿದ್ದೇನೆ.
ವೃತ್ತಿ ಅನುಭವ ಸದ್ಬಳಕೆ...
ಕಲ್ಯಾಣ, ಅಭಿವೃದ್ಧಿ, ಮೂಲಸೌಕರ್ಯಗಳಿಗೆ ಸಂಬಂಧಿಸಿದ ಇಲಾಖೆಯಲ್ಲಿ ನಾನು ಕೆಲಸ ಮಾಡಿದ್ದೇನೆ. ಹಲವಾರು ಇಲಾಖೆಗಳಲ್ಲಿ ಕೆಲಸ ಮಾಡಿದ ನನ್ನ ಅನುಭವ ಇಲ್ಲಿ ಸದ್ಬಳಕೆ ಮಾಡುವೆ. ಕೆಎಂಇಆರ್‌ಸಿ, ಡಿಎಂಎಫ್, ಕೆಕೆಆರ್‌ಡಿಬಿ ಅನುದಾನವಿದೆ. ಅದನ್ನು ಬಳಸಿಕೊಂಡು, ಜನರು, ಜನಪ್ರತಿನಿಧಿಗಳು, ಸರ್ಕಾರ ರೂಪಿಸುವ ಯೋಜನೆಗಳನ್ನು ಜಾರಿಗೆ ತರಲು ಆದ್ಯತೆ ನೀಡುವೆ.
ಡಿಎಂಎಫ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯೊಂದಿಗೆ ಈಗಾಗಲೇ ಒಂದು ಪ್ರಾಥಮಿಕ ಸಭೆ ಮಾಡಿದ್ದೇನೆ. ಇದಕ್ಕೆ ಪೂರಕವಾಗಿ ಶಿಕ್ಷಣ, ಆರೋಗ್ಯ ಇಲಾಖೆಯೊಂದಿಗೂ ಮಾತಕತೆ ನಡೆಸಿದ್ದೇನೆ. ಈ ಎರಡೂ ಕ್ಷೇತ್ರಗಳಲ್ಲಿ ಜಿಲ್ಲೆ ಬೆಳವಣಿಗೆ ಹೊಂದಬೇಕು. ಇದಕ್ಕೆ ಸೂಕ್ತವಾದ ಕ್ರಿಯಾಯೋಜನೆಗಳನ್ನು ರೂಪಿಸಲು ಪ್ರಯತ್ನಿಸುತ್ತೇನೆ.
ವೈಜ್ಞಾನಿಕವಾಗಿ ಯೋಜನೆ ರೂಪಿಸಿದರೆ, ವೇಗವಾಗಿ ಯೋಜನೆಗಳು ಜಾರಿಯಾಗುತ್ತವೆ. ಯೋಜನೆ ರೂಪಿಸುವಲ್ಲಿ ಸ್ಥಳೀಯ ಪರಿಣತರ ಕೊರತೆ ಎದ್ದುಕಾಣುತ್ತಿದೆ. ಡಿಪಿಆರ್ ಸಿದ್ಧಪಡಿಸುವಲ್ಲಿ ತಾಂತ್ರಿಕ ಪರಿಣತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ. ಈ ವಿಚಾರವನ್ನು ಕೆಎಂಇಆರ್‌ಸಿ ಎಂಡಿ ಜತೆಗೆ ಚರ್ಚಿಸಿದ್ದೇನೆ. ಯೋಜನೆ ಜಾರಿಗೊಳಿಸಲು ಪ್ರಯತ್ನಿಸುತ್ತೇನೆ.
ಕಬ್ಬಿಣದ ಅದಿರಿನ ವಿಷಯದಲ್ಲಿ ಕಾನೂನು ಕಟ್ಟಳೆಗಳಿವೆ. ಸುಪ್ರೀಂ ಕೋರ್ಟ್, ಸಿಇಸಿಯ ಮಾರ್ಗಸೂಚಿಗಳಿವೆ. ಎಲ್ಲವೂ ಪರಿಶೀಲನೆಗೆ ಒಳಪಟ್ಟಿದೆ. ಇದನ್ನು ಮೀರಿ ಯಾರೂ ಏನೂ ಮಾಡಲು ಆಗದು. ಸುಸ್ಥಿರ, ಸಮತೋಲಿತವಾದ ಗಣಿ ಚಟುವಟಿಕೆ ಆದ್ಯತೆಯಾಗಬೇಕು ಎಂಬುದು ನನ್ನ ನಿಲುವು.
ಕನ್ನಡ ಸಾಹಿತ್ಯ ಪರಿಷತ್‌ನ ಪ್ರಮುಖರು ಭೇಟಿಯಾಗಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಶೀಘ್ರವೇ ಚರ್ಚಿಸುವೆ. ಬಳ್ಳಾರಿಯಲ್ಲಿ ಸಮ್ಮೇಳನ ಅಚ್ಚುಕಟ್ಟಾಗಿ ನಡೆಯಬೇಕು. ಪೂರ್ವತಯಾರಿ ಸೂಕ್ತ ರೀತಿಯಲ್ಲಿ ನಡೆಯಬೇಕು.
Quote - – ನಾಗೇಂದ್ರ ಪ್ರಸಾದ್ ಕೆ. ಜಿಲ್ಲಾಧಿಕಾರಿ
ಮೂಲಸೌಕರ್ಯಕ್ಕೆ ಆದ್ಯತೆ
ಬಳ್ಳಾರಿಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯದ ಸಮಸ್ಯೆ ಇರುವ ಬಗ್ಗೆ ನನಗೆ ಮೊದಲಿನಿಂದಲೂ ಮಾಹಿತಿ ಇತ್ತು. ಇದೇ ಕ್ಷೇತ್ರದಲ್ಲೇ ಕೆಲಸ ಮಾಡಿದ ಅನುಭವವಿದೆ. ಈ ಕ್ಷೇತ್ರದಲ್ಲಿ ಬದಲಾವಣೆ ತರುವೆ. ನಗರದ ಸಮಸ್ಯೆಗಳ ಕುರಿತು ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತರೊಂದಿಗೆ ಚರ್ಚಿಸಿದ್ದೇನೆ. ಕಾಮಗಾರಿಗಳಲ್ಲಿ ಗುಣಮಪಟ್ಟ ಮತ್ತು ವೇಗ ಮುಖ್ಯ. ಕಾಲಮಿತಿಯಲ್ಲಿ ಗಾಮಗಾರಿ ನಡೆಯಲು ಕ್ರಮ ವಹಿಸಲಾಗುವುದು. ನಗರದಲ್ಲಿ ನಡೆಯುತ್ತಿರುವ ಕಾಮಗಾರಿಗಳ ಪರಿಶೀಲನೆ ಆರಂಭಿಸಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.