ADVERTISEMENT

ಕೆಡಿಪಿ ಸಭೆಯಲ್ಲಿ ಸೂಕ್ತ ಮಾಹಿತಿ ನೀಡಿ: ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಸೂಚನೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 4:49 IST
Last Updated 24 ಸೆಪ್ಟೆಂಬರ್ 2025, 4:49 IST
ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ್‌ ಪಾಲ್ಗೊಂಡಿದ್ದರು
ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್‌ ಕೆ., ಜಿಲ್ಲಾ ಪಂಚಾಯಿತಿ ಸಿಇಒ ಮೊಹಮದ್‌ ಹ್ಯಾರಿಸ್‌ ಸುಮೇರ್‌ ಪಾಲ್ಗೊಂಡಿದ್ದರು   

ಬಳ್ಳಾರಿ: ‘ಸೆಪ್ಟೆಂಬರ್‌ 29ರಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಖಾನ್ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಕೆಡಿಪಿ ಸಭೆ ನಡೆಯಲಿದ್ದು, ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಮಾಹಿತಿ ಸಿದ್ಧಪಡಿಸಿಟ್ಟುಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ನಿರ್ದೇಶನ ನೀಡಿದರು.

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.‌ 

‘ವರ್ಷಗಳ ಬಳಿಕ ಪೂರ್ಣ ಪ್ರಮಾಣದ ಕೆಡಿಪಿ ಸಭೆ ನಡೆಯುತ್ತಿದೆ. ಜಿಲ್ಲೆಯ ಎಲ್ಲಾ ಶಾಸಕರು ಭಾಗವಹಿಸಲಿದ್ದಾರೆ. ಮಾಹಿತಿ ಕೊರತೆಯಾಗದಂತೆ ಎಚ್ಚರ ವಹಿಸಬೇಕು’ ಎಂದು ತಿಳಿಸಿದರು.

ADVERTISEMENT

‘ಗ್ಯಾರಂಟಿ ಯೋಜನೆಗಳ ಪ್ರಗತಿ, ಪುರ್ವಸತಿಕಲ್ಪಿತ ದೇವದಾಸಿಯರ ಮರು ಸಮೀಕ್ಷೆ, ಲಿಂಗತ್ವ ಅಲ್ಪಸಂಖ್ಯಾತರ ಸಮೀಕ್ಷೆ ಮತ್ತು ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯ ಪೂರಕ ಮಾಹಿತಿ ಇರಬೇಕು’ ಎಂದು ತಿಳಿಸಿದರು.

‘ಅಂಕಿ–ಸಂಖ್ಯೆ ಮಂಡಿಸುವ ಬದಲು, ಯೋಜನೆ, ಸೌಲಭ್ಯ, ಕಟ್ಟಡ ನಿರ್ಮಾಣ, ಸ್ಥಳದ ಬೇಡಿಕೆ, ಬೇಕಾದ ಸಾಮಗ್ರಿ-ಸಲಕರಣೆ, ಕುಡಿಯುವ ನೀರಿನ ವ್ಯವಸ್ಥೆ, ಎಸ್‌ಎಸ್‌ಎಲ್‌ಸಿಯಲ್ಲಿ ಜಿಲ್ಲೆಯ ಸಾಧನೆ, ವಸತಿ ನಿಲಯಗಳ ಸ್ಥಿತಿ, ಕೈಗಾರಿಕೆಗಳ ಅಭಿವೃದ್ಧಿ ಸೇರಿದಂತೆ ಅಗತ್ಯ ಮಾಹಿತಿ ನೀಡಬೇಕು’ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಹಮ್ಮದ್ ಹ್ಯಾರಿಸ್ ಸುಮೈರ್, ಬಳ್ಳಾರಿ ವಲಯ ಉಪಅರಣ್ಯ ಸಂರಕ್ಷಣಾಧಿಕಾರಿ ಕೆ.ಎನ್.ಬಸವರಾಜ, ಹೆಚ್ಚುವರಿ ಜಿಲ್ಲಾಧಿಕಾರಿ ಮಹಮ್ಮದ್ ಝುಬೇರ್, ಜಿ.ಪಂ. ಉಪಕಾರ್ಯದರ್ಶಿ ಶಶಿಕಾಂತ್ ಶಿವಪೂರೆ, ಮುಖ್ಯ ಯೋಜನಾಧಿಕಾರಿ ವಾಗೀಶ್ ಶಿವಾಚಾರ್ಯ, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ  ಇದ್ದರು.

ಆರೋಗ್ಯ ಸೌಲಭ್ಯ ಆಸ್ಪತ್ರೆಗಳ ನಿರ್ವಹಣೆ ಔಷಧಗಳ ದಾಸ್ತಾನಿಗೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯಾಧಿಕಾರಿ ಬಿಎಂಸಿಆರ್‌ಸಿ ನಿರ್ದೇಶಕರು ಮಾಹಿತಿ ನೀಡಲು ಸಿದ್ಧರಿರಬೇಕು.
– ನಾಗೇಂದ್ರ ಪ್ರಸಾದ್‌ ಕೆ., ಜಿಲ್ಲಾಧಿಕಾರಿ ಬಳ್ಳಾರಿ

‘ವರದಿ ಕೈಪಿಡಿ ತಯಾರಿಸಿ’

‘ಇಲಾಖೆಗಳಿಂದ ಅನುಷ್ಠಾನಗೊಳಿಸಿದ ಯೋಜನೆಗಳು ಪ್ರಗತಿ ಶೇಕಡಾವಾರು ಗುರಿ ಸಾಧನೆ ಸೇರಿದಂತೆ ಎಲ್ಲಾ ವಿಧದ ಮಾಹಿತಿ ಒಳಗೊಂಡ ಕೈಪಿಡಿ ತಯಾರಿಸಬೇಕು. ರಸಗೊಬ್ಬರ ಪೂರೈಕೆ ಬೇಡಿಕೆ ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಮೆಣಸಿನಕಾಯಿ ಬದಲು ರೈತರು ಮುಸುಕಿನ ಜೋಳ ತೊಗರಿ ಬೆಳೆ ಬೆಳೆಯಲು ಕಾರಣವೇನು? ವಿಮೆ ನೋಂದಣಿ ಕ್ರಮ ಕುರಿತು ಚರ್ಚೆಯಾಗಬಹುದು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.