ಸಾಂದರ್ಭಿಕ ಚಿತ್ರ
ಬಳ್ಳಾರಿ: ಬಳ್ಳಾರಿಯಿಂದ ಗುಜರಾತ್‌ಗೆ ಅಕ್ರಮವಾಗಿ ಸಾಗಣೆ ಮಾಡಲಾಗುತ್ತಿದ್ದ 523 ಚೀಲ ಅನ್ನಭಾಗ್ಯ ಅಕ್ಕಿಯನ್ನು ಜಿಲ್ಲಾಡಳಿತ ವಶಪಡಿಸಿಕೊಂಡಿದೆ.
ಗುರುವಾರ ಮಧ್ಯರಾತ್ರಿ ಕಾರ್ಯಾಚರಣೆ ನಡೆಸಿದ ಬಳ್ಳಾರಿ ಉಪ ವಿಭಾಗಾಧಿಕಾರಿ(ಎ.ಸಿ) ರಾಜೇಶ್ ಎಚ್.ಡಿ ನೇತೃತ್ವದ ತಂಡ ಅಕ್ಕಿಯ ಜತೆಗೆ ಒಂದು ಲಾರಿ, ಎರಡು ಪಿಕಪ್ ವಾಹನಗಳುನ್ನೂ ವಶಕ್ಕೆ ಪಡೆದಿದ್ದಾರೆ. ಜತೆಗೆ, ಒಬ್ಬ ಚಾಲಕ ಐವರು ಹಮಾಲಿಗಳನ್ನೂ ಬಂಧಿಸಲಾಗಿದೆ.
ನ್ಯಾಯಬೆಲೆ ಅಗಂಡಿಗಳಿಂದ ಅಕ್ರಮವಾಗಿ ಸಂಗ್ರಹಿಸಿದ್ದ ಅಕ್ಕಿಯನ್ನು ಪಿಕಪ್ ವಾಹನಗಳ ಮೂಲಕ ನಗರದ ಎಸ್‌ಎಲ್‌ಎನ್ ಮಾಲ್ ಬಳಿ ಇರುವ ಪುಲ್ಲಯ್ಯ ಕಾಂಪೌಂಡ್ ಆವರಣಕ್ಕೆ ಸಾಗಿಸಿ, ಅಲ್ಲಿ ಲಾರಿಗೆ ತುಂಬಲಾಗುತ್ತಿತ್ತು. ಈ ಕುರಿತ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ರಾತ್ರಿ 2 ಗಂಟೆಯಲ್ಲಿ ದಾಳಿ ಮಾಡಿದ್ದಾರೆ.
ಈ ವೇಳೆ 523 ಚೀಲ ಅಕ್ಕಿ ಅಧಿಕಾರಿಗಳ ತಂಡಕ್ಕೆ ಸಿಕ್ಕಿದೆ. ದಾಳಿ ವೇಳೆ ಐವರು ಹಮಾಲಿಗಳು, ಒಬ್ಬ ಚಾಲಕ ಪರಾರಿಯಾಗಿದ್ದಾನೆ ಎಂದು ಎಸಿ ರಾಜೇಶ್ ಎಚ್.ಡಿ ತಿಳಿಸಿದ್ದಾರೆ.
ಅಕ್ಕಿ ಚೀಲಗಳನ್ನು ಅಕ್ರಮವಾಗಿ ಗುಜರಾತ್‌ಗೆ ತೆಗೆದುಕೊಂಡು ಹೋಗಲು ತಯಾರಿ ನಡೆಸಲಾಗಿತ್ತು ಎಂದು ವಿಚಾರಣೆ ವೇಳೆ ಬಂಧಿತ ಗುಜರಾತ್ ಮೂಲಕ ಲಾರಿ ಚಾಲಕ ತಿಳಿಸಿದ್ದಾನೆ. ಶ್ರೀಧರ್ ಎಂಬ ವ್ಯಕ್ತಿ ಅಕ್ಕಿಯನ್ನು ಸಂಗ್ರಹಿಸಿ, ಅದನ್ನು ಸಾಗಿಸಲು ಗುಜರಾತ್‌ನಿಂದ ಲಾರಿ ಕರೆಸಿಕೊಂಡಿದ್ದ ಎಂದು ಹೇಳಲಾಗಿದೆ.
ಈ ಕುರಿತು ಬಳ್ಳಾರಿಯ ಎಪಿಎಂಸಿ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.
ವಿಡಿಯೊ ಹರಿದಾಟ: ಅಕ್ಕಿ ಅಡ್ಡೆ ಮೇಲೆ ಅಧಿಕಾರಿಗಳು ದಾಳಿ ಮಾಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು ಮೆಚ್ಚುಗೆ ವ್ಯಕ್ತವಾಗಿದೆ. ಅದರೂ, ಕೂಲಿಕಾರರನ್ನು ಬಂಧಿಸುವುದು ಬಿಟ್ಟು, ದಂಧೆಕೋರರನ್ನು ಬಂಧಿಸಿ ಎಂದು ಕೆಲವರು ತರಾಟೆಗೂ ತೆಗೆದುಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.