ADVERTISEMENT

ಬಳ್ಳಾರಿ | ಜಿಲ್ಲೆಯಲ್ಲಿ 1,891 ಕಡೆ ಗಣೇಶ ಪ್ರತಿಷ್ಠಾಪನೆ

ಎರಡನೇ ದಿನ 160 ಮೂರ್ತಿಗಳ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 4:22 IST
Last Updated 29 ಆಗಸ್ಟ್ 2025, 4:22 IST
ಬಳ್ಳಾರಿ ನಗರದ ಸಿರುಗಪ್ಪ ರಸ್ತೆಯಲ್ಲಿ ಗಣೇಶ ಮೂರ್ತಿಯೊಂದಿಗೆ ಪುರಿ ಜಗನ್ನಾಥ ದೇಗುಲದ ರಥದ ಮಾದರಿಯನ್ನು ನಿರ್ಮಿಸಲಾಗಿದ್ದು, ಪಾರ ಭಕ್ತರು ಇದರ ದರ್ಶನ ಪಡೆದರು
ಬಳ್ಳಾರಿ ನಗರದ ಸಿರುಗಪ್ಪ ರಸ್ತೆಯಲ್ಲಿ ಗಣೇಶ ಮೂರ್ತಿಯೊಂದಿಗೆ ಪುರಿ ಜಗನ್ನಾಥ ದೇಗುಲದ ರಥದ ಮಾದರಿಯನ್ನು ನಿರ್ಮಿಸಲಾಗಿದ್ದು, ಪಾರ ಭಕ್ತರು ಇದರ ದರ್ಶನ ಪಡೆದರು   

ಬಳ್ಳಾರಿ: ಜಿಲ್ಲೆಯ ಐದು ತಾಲ್ಲೂಕುಗಳನ್ನು ಒಳಗೊಂಡ ಪೊಲೀಸ್‌ ಇಲಾಖೆಯ ಮೂರು ವಿಭಾಗಗಳಲ್ಲಿ ಗಣೇಶ ಮೂರ್ತಿಯ ಪ್ರತಿಷ್ಠಾಪನೆಗೆ ಒಟ್ಟು 1,891 ಅನುಮತಿಗಳನ್ನು ಮಂಜೂರು ಮಾಡಿರುವುದಾಗಿ ಜಿಲ್ಲಾ ಪೊಲೀಸ್‌ ಇಲಾಖೆ ತಿಳಿಸಿದೆ. 

ಬಳ್ಳಾರಿ ವಿಭಾಗದಲ್ಲಿ 580, ತೋರಣಗಲ್ಲು ವಿಭಾಗದಲ್ಲಿ 645, ಸಿರುಗುಪ್ಪ ವಿಭಾಗದಲ್ಲಿ 666 ಗಣಪತಿಗಳನ್ನು ಪ್ರತಿಷ್ಠಾಪಿಸಲಾಗಿದೆ ಎಂದು ವಿವರಗಳಿಂದ ಗೊತ್ತಾಗಿದೆ. 

ಈ ಪೈಕಿ ಮೂರು ವಿಭಾಗಗಳಲ್ಲಿ ಮೊದಲ ದಿನವೇ 114 ಗಣಪನ ಮೂರ್ತಿಗಳನ್ನು ವಿಸರ್ಜನೆ ಮಾಡಲಾಗಿದೆ. ಮೂರನೇ ದಿನ (ಆ.29) 873, ಐದನೇ ದಿನ (ಆ. 31) 706, ಏಳನೇ ದಿನ (ಸೆ.2) 102 ಗಣೇಶನ ಮೂರ್ತಿಗಳು ವಿಸರ್ಜನೆಗೊಳ್ಳಲಿವೆ ಎಂದು ಪೊಲೀಸ್‌ ಇಲಾಖೆ ಹೇಳಿದೆ. 

ADVERTISEMENT

ಗಣೇಶ ಉತ್ಸವದ ವೇಳೆ ಜಿಲ್ಲೆಯಲ್ಲಿ ಎಲ್ಲಿಯೂ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರಿಕೆ ವಹಿಸಲಾಗಿದೆ  ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದರು.  

ಹಿಂದೂ-ಮುಸ್ಲಿಮರಿಂದ ಭಾವೈಕ್ಯದ ಗಣೇಶೋತ್ಸವ: ಬಳ್ಳಾರಿಯಲ್ಲಿ ಗಣೇಶೋತ್ಸವದ ವೇಳೆ ಹಿಂದೂ-ಮುಸ್ಲಿಂ ಸಮುದಾಯ ಭಾವೈಕ್ಯ ಮೆರೆದಿವೆ. ನಗರದ ವಡ್ಡರಬಂಡೆ ಪ್ರದೇಶದಲ್ಲಿ ಶ್ರೀವಿನಾಯಕ ಮಿತ್ರ ಬಳಗದಿಂದ ಗಣಪತಿ ಪ್ರತಿಷ್ಠಾಪನೆ ಮಾಡಲಾಗಿದ್ದು ಮುಸ್ಲಿಮರು ಭಾಗಿಯಾಗಿದ್ದಾರೆ. ಪೂಜೆಯ ಬಳಿಕ ಪ್ರಸಾದ ಹಾಗೂ ನೈವೇದ್ಯವನ್ನು ಪರಸ್ಪರ ಹಂಚಿ ಖುಷಿ ಹಂಚಿಕೊಂಡಿದ್ದಾರೆ. ಪರಸ್ಪರ ಶುಭ ಕೋರಿ ಮಾನವೀಯತೆ ಮೆರೆದಿದ್ದಾರೆ.

ಗಣೇಶನ ಪೆಂಡಾಲ್‌ಗಳಿಗೆ ಜನವೋ ಜನ: ಇನ್ನು ನಗರದ ಆಕರ್ಷಣೆಯಾಗಿರುವ ರಾಜ್‌ಕುಮಾರ್ ರಸ್ತೆಯ ವರಸಿದ್ಧಿ ವಿನಾಯಕ ಮಿತ್ರ ಮಂಡಳಿಯ ಬ್ರಹ್ಮ ಗಣಪತಿ ಮತ್ತು ಸಿರುಗುಪ್ಪ ರಸ್ತೆಯ ಪುರಿ ಜಗನ್ನಾಥ ಮಂದಿರದ ರಥದ ಮಾದರಿಯ ಪೆಂಡಾಲ್‌ ಜನರ ಕಣ್ಮನ ಸೆಳೆಯುತ್ತಿದೆ. ನಿತ್ಯ ನೂರಾರು ಭಕ್ತರು ಪೆಂಡಾಲ್‌ಗಳಿಗೆ ಭೇಟಿ ನೀಡುತ್ತಿದ್ದಾರೆ. ಈ ಪೆಂಡಾಲ್‌ಗಳ ಸುತ್ತಲ ಪ್ರದೇಶದಲ್ಲಿ ಟ್ರಾಫಿಕ್‌ ಸಮಸ್ಯೆಯುಂಟಾಗುತ್ತಿದ್ದರೂ, ಭಕ್ತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ‌

ಶಾಸಕ ಸಂದೇಶ: ವಿಘ್ನ ವಿನಾಶಕ ಗಣೇಶ ಎಲ್ಲರ ಕಷ್ಟ ಕೋಟಲೆಗಳನ್ನು ನಿವಾರಿಸಲಿ. ದೇವರ ಕೃಪೆಯಿಂದ ಈ ಸಲ ಮಳೆ ಚೆನ್ನಾಗಿ ಸುರಿದಿದ್ದು, ತುಂಗಭದ್ರಾ ಜಲಾಶಯದಲ್ಲೂ ಕೂಡ ಸಾಕಷ್ಟು ನೀರಿದೆ. ಕೃಷಿ - ಜನ ಜಾನುವಾರಿಗೆ ಅನುಕೂಲ ಆಗಿದೆ ಎಂದು ಬಳ್ಳಾರಿ ನಗರ ಶಾಸಕ ನಾರಾ ಭರತ್‌ ರೆಡ್ಡಿ ನಾಗರಿಕರಿಗೆ ಹಬ್ಬದ ಶುಭಾಶಯ ಕೋರಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.