ಹರಪನಹಳ್ಳಿ : ದಾವಣಗೆರೆ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದ ಬಾಣಂತಿ ಸಾವಿನಲ್ಲಿ ಹರಪನಹಳ್ಳಿ ವೈದ್ಯರ ನಿರ್ಲಕ್ಷ್ವಿದ್ದು ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಪ್ರತಿಭಟನಾ ಮೆರವಣಿಗೆ ತೆರಳಿದ ಕಾರ್ಯಕರ್ತರು, ಸಾರ್ವಜನಿಕ ಆಸ್ಪತ್ರೆ ಆವರಣ ತಲುಪಿ ಬಹಿರಂಗ ಸಭೆಯ ಮೂಲಕ ತಹಶೀಲ್ದಾರ್ ಬಿ.ವಿ.ಗಿರೀಶ್ ಬಾಬು, ತಾಲ್ಲೂಕು ವೈದ್ಯಾಧಿಕಾರಿ ಡಾ.ಪೃಥ್ವಿ, ಅವರಿಗೆ ಮನವಿ ಸಲ್ಲಿಸಿದರು.
ಕರವೇ ತಾಲ್ಲೂಕು ಅಧ್ಯಕ್ಷ ಗಿರಜ್ಜಿ ನಾಗರಾಜ್ ಮಾತನಾಡಿ, ಬಾಣಂತಿ ಸಾವು ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಸಾರ್ವಜನಿಕ ಆಸ್ಪತ್ರೆಯಲ್ಲಿ ಅವ್ಯವಸ್ಥೆ ಸರಿಪಡಿಸಬೇಕು. ರಾಮಘಟ್ಟದ ಬಾಣಂತಿ ಸಾವನ್ನಪ್ಪಿದ್ದು, ಕುಟುಂಬಕ್ಕೆ ಪರಿಹಾರ ನೀಡಬೇಕು. ತಪ್ಪಿತಸ್ಥರ ವೈದ್ಯರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.
ಹಲವು ವರ್ಷಗಳಿಂದ ಕಾರ್ಯನಿರ್ವಹಿಸುವ ಸ್ಟಾಫ್ ನರ್ಸ್, ದಾದಿಯರನ್ನು ಬದಲಾಯಿಸಬೇಕು. ಆಸ್ಪತ್ರೆಯಲ್ಲಿ ಔಷಧಿ ವಿತರಿಸಬೇಕು. ರಕ್ತ ಪರೀಕ್ಷೆ, ಸ್ಕ್ಯಾನಿಂಗ್ ಹೊರಗಡೆ ಕಳಿಸುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ಸಂಘಟನೆಗಳ ಮುಖಂಡರಾದ ಗುಡಿಹಳ್ಳಿ ಹಾಲೇಶ್, ಎಚ್.ಕೆ.ವೆಂಕಟೇಶ್, ಪ್ರಕಾಶ್, ಶಿವಕುಮಾರ, ಕೆ.ಸುಭಾಷ, ಛತ್ರಪತಿ, ಅಭಿಲಾಷ್, ನಂದೀಶ್ ತಲವಾಗಲು, ದರ್ಶನ್, ಅಶೋಕ, ಮಾಗಳ ಹಾಲೇಶ್, ಮಜ್ಜಿಗೆರೆ ಹನುಮಂತ, ಮೈದೂರು ಸಿದ್ದೇಶ, ಕೊಟ್ರೇಶ್ ಚಿರಸ್ತಹಳ್ಳಿ, ಹನುಮಂತ, ದಾದಾಪುರ, ದೇವರಾಜ್, ಮೆಹಬೂಬ್ ಸಾಬ್, ಅಂಜಿನಪ್ಪ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.