ADVERTISEMENT

ಬಳ್ಳಾರಿ: ಪೊಲೀಸ್‌ ‘ಬದಲಾವಣೆಗೇ’ ಅಡ್ಡಿ

ಉಪ ವಿಭಾಗಕ್ಕೆ ಐಪಿಎಸ್‌ ಅಧಿಕಾರಿಯನ್ನು ಹಾಕಿದ್ದ ಸರ್ಕಾರ, ಕರ್ತವ್ಯ ವರದಿಗೆ ‘ಪ್ರಭಾವಿ’ಗಳ ಅಡ್ಡಿ

ಆರ್. ಹರಿಶಂಕರ್
Published 30 ಜನವರಿ 2026, 3:05 IST
Last Updated 30 ಜನವರಿ 2026, 3:05 IST
ಯಶ್‌ ಕುಮಾರ್ ಶರ್ಮ
ಯಶ್‌ ಕುಮಾರ್ ಶರ್ಮ   

ಬಳ್ಳಾರಿ: ಬಳ್ಳಾರಿ ನಗರ ಉಪ ವಿಭಾಗಕ್ಕೆ ಮಂಗಳವಾರವಷ್ಟೇ ನಿಯೋಜನೆಗೊಂಡಿದ್ದ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ, ಐಪಿಎಸ್‌ ಅಧಿಕಾರಿ ಯಶ್‌ ಕುಮಾರ್‌ ಶರ್ಮ ಅವರು ಅಧಿಕಾರ ವಹಿಸಿಕೊಳ್ಳದಂತೆ ತಡೆಯಲಾಗಿದೆ. 

ವರ್ಗಾವಣೆ ಆದೇಶದಂತೆ ಶರ್ಮ ಬುಧವಾರ ಕರ್ತವ್ಯಕ್ಕೆ ವರದಿಮಾಡಿಕೊಳ್ಳಬೇಕಾಗಿತ್ತು. ಅದಕ್ಕಾಗಿ ಅವರು ಬಳ್ಳಾರಿ ನಗರಕ್ಕೂ ಬಂದಿದ್ದರು. ಆದರೆ, ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಸಾಧ್ಯವಾಗದೇ ಹಿಂದಿರುಗಿದರು ಎಂದು ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಹಿಂದಿನ ಡಿವೈಎಸ್‌ಪಿ ಚಂದ್ರಕಾಂತ ನಂದಾ ರೆಡ್ಡಿ ಅವರನ್ನೇ ನಗರ ಉಪ ವಿಭಾಗದಲ್ಲಿ ಮುಂದುವರಿಸಲಾಗಿದೆ.  

‘ಸರ್ಕಾರದ ಮೇಲೆ ಒತ್ತಡ ಹೇರಿ ರಾಜಕೀಯ ನಾಯಕರು ಯಶ್‌ ಕುಮಾರ್‌ ಶರ್ಮ ಅವರ ಆಗಮನವನ್ನು ತಡೆದಿದ್ದಾರೆ’ ಎಂಬ ಮಾತುಗಳು ವ್ಯಾಪಕವಾಗಿ ಕೇಳಿ ಬಂದಿದೆ. 

ADVERTISEMENT

ಬಳ್ಳಾರಿ ಗಲಭೆ ಹಿನ್ನೆಲೆಯಲ್ಲಿ ಸರ್ಕಾರವು ಪೊಲೀಸ್‌ ಇಲಾಖೆಗೆ ಕಾಯಕಲ್ಪ ನೀಡಲು ಮುಂದಾಗಿತ್ತು. ಅದರಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯನ್ನು ಘಟನೆ ಮರು ದಿನವೇ ಅಮಾನತು ಮಾಡಲಾಗಿತ್ತು. ಅವರ ಜಾಗಕ್ಕೆ ಸುಮನ್‌ ಡಿ.ಪಿ ಅವರನ್ನು ನೇಮಿಸಲಾಗಿತ್ತು. ಬಳ್ಳಾರಿ ವಲಯ ಪೊಲೀಸ್‌ ಉಪ ಮಹಾ ನಿರೀಕ್ಷಕಿಯಾಗಿದ್ದ ವರ್ತಿಕಾ ಕಟಿಯಾರ್‌ ಅವರನ್ನು  ವರ್ಗಾವಣೆಗೊಳಿಸಿತ್ತು. ಡಾ. ಪಿ.ಎಸ್‌. ಹರ್ಷ ಅವರನ್ನು ವಲಯ ಐಜಿಪಿಯಾಗಿ ನಿಯೋಜಿಸಲಾಗಿತ್ತು. ಕಾಯಕಲ್ಪದ ಮುಂದುವರಿದ ಭಾಗವಾಗಿ ನಗರ ಡಿಎಸ್‌ಪಿ ಚಂದ್ರಕಾಂತ ನಂದಾ ರೆಡ್ಡಿ ಎಂಬುವವರ ಜಾಗಕ್ಕೆ, ತಿಪಟೂರಿನ ಉಪ ವಿಭಾಗ ಎಎಸ್‌ಪಿಯಾಗಿದ್ದ ಯಶ್‌ ಕುಮಾರ್‌ ಶರ್ಮ ಅವರನ್ನು ಸರ್ಕಾರ ನಿಯೋಜನೆ ಮಾಡಿತ್ತು. 

ಇನ್ನು ಬೆಳವಣಿಗೆ ಕುರಿತು ಮಾತನಾಡಿರುವ ರಾಜಕೀಯ ನಾಯಕರೊಬ್ಬರು, ‘ಐಪಿಎಸ್‌ ಶ್ರೇಣಿಯ ಅಧಿಕಾರಿಯೊಬ್ಬರನ್ನು ಉಪ ವಿಭಾಗಕ್ಕೆ ಹಾಕಿ ಸರ್ಕಾರ ನಿರ್ಧಾರ ಕೈಗೊಂಡರೆ ಅದನ್ನು ತಡೆಯಲಾಗಿದೆ. ಒಂದೆಡೆ ಅಕ್ರಮಗಳನ್ನು ತಡೆಯಬೇಕು ಎಂದು ಜನ ಒತ್ತಾಯಿಸುತ್ತಾರೆ. ಇನ್ನೊಂದೆಡೆ, ಅರ್ಹರನ್ನು ಸರ್ಕಾರ ನಿಯೋಜನೆ ಮಾಡಿದರೆ, ಆರೋಪಗಳಿರುವವರನ್ನೇ ಉಳಿಸಿಕೊಳ್ಳಲಾಗುತ್ತದೆ. ಬದಲಾವಣೆ ಆಗಬಾರದು ಎಂದು ಬಯಸುತ್ತಿರುವವರ ಉದ್ದೇಶವಾದರೂ ಏನು’ ಎಂದು ಪ್ರಶ್ನೆ ಮಾಡಿದ್ದಾರೆ.

ಅಮಾನತಿಗೆ ಆಗ್ರಹಿಸಿದ ಬಿಜೆಪಿ: ಬಳ್ಳಾರಿ ಗಲಭೆ ನಡೆದ ದಿನ ಜನಾರ್ದನ ರೆಡ್ಡಿ ಅವರ ನಿವಾಸದ ಬಳಿಗೆ ಶಾಸಕ ಭರತ್‌ ರೆಡ್ಡಿ ಅವರನ್ನು ಇದೇ ಚಂದ್ರಕಾಂತ ನಂದಾ ರೆಡ್ಡಿ ಭದ್ರತೆ ಕೊಟ್ಟು ಕರೆದುಕೊಂಡು ಬಂದಿದ್ದರು. ಈ ದಾಳಿಯಲ್ಲಿ ಚಂದ್ರಕಾಂತ ನಂದಾ ರೆಡ್ಡಿ ಪಾತ್ರವೂ ಇದೆ ಎಂದು ಬಿಜೆಪಿ ಆರೋಪಿಸುತ್ತಲೇ ಬಂದಿದೆ. ಅಲ್ಲದೇ, ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿದೆ.  

ಗಲಭೆಗೆ ಸಂಬಂಧಿಸಿ ಪೊಲೀಸ್‌ ಇಲಾಖೆ ಸ್ವಯಂ ಪ್ರೇರಿತ ಪ್ರಕರಣವೊಂದನ್ನು ದಾಖಲಿಸಿಕೊಂಡಿತ್ತು. ‘ಶಾಸಕ ಭರತ್‌ ರೆಡ್ಡಿ ಸಾವಿರ ಜನರ ಗುಂಪು ಕಟ್ಟಿಕೊಂಡು ಜನಾರ್ದನ ರೆಡ್ಡಿ ಅವರ ನಿವಾಸದ ಬಳಿಗೆ ಬಂದಿದ್ದರು’ ಎಂದು ಆ ಎಫ್‌ಐಆರ್‌ನಲ್ಲಿ ದಾಖಲಿಸಲಾಗಿತ್ತು. ಆದರೆ, ಭರತ್‌ ರೆಡ್ಡಿ ಅವರನ್ನು ಆರೋಪಿಯಾಗಿಸಿರಲಿಲ್ಲ. ಈ ಪ್ರಕರಣದಲ್ಲಿ ದೂರು ನೀಡಿದ್ದವರು ಇದೇ ನಂದಾರೆಡ್ಡಿ. ಭರತ್‌ ರೆಡ್ಡಿ ಅವರನ್ನು ರಕ್ಷಿಸಲೆಂದೇ ಅವರನ್ನು ಆರೋಪಿಯಾಗಿಸಿರಲಿಲ್ಲ ಎಂದು ಬಿಜೆಪಿ ದೂರಿತ್ತು.  

ಇದೇ ಮೊದಲೇನಲ್ಲ  ಜಿಲ್ಲೆಗೆ ಬರುವ ಅಧಿಕಾರಿಗಳು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದಂತೆ ಮಾಡುವುದು ಹಿಂದಕ್ಕೆ ಅಟ್ಟುವುದು ಇದೇ ಮೊದಲ ಬಾರಿಗೆ ನಡೆದ ಘಟನೆಯೇನಲ್ಲ. ಇದಕ್ಕೂ ಹಿಂದೆ  ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತೆಯಾಗಿ ವರ್ಗಾವಣೆಯಾಗಿ ಬಂದಿದ್ದ ಬೆಳಗಾವಿಯ ಸ್ಮಾರ್ಟ್‌ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕಿ ಕೆಎಎಸ್‌ ಹಿರಿಯ ಶ್ರೇಣಿಯ ಅಧಿಕಾರಿ ಸಯೀದಾ ಆಫ್ರೀನ್‌ ಬಾನು ಬಳ್ಳಾರಿ ಅವರನ್ನೂ ಹೀಗೇ ನಡೆಸಿಕೊಳ್ಳಲಾಗಿತ್ತು. ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲು ಬಂದಿದ್ದ ಅವರಿಗೆ ತಡೆಯೊಡ್ಡಲಾಗಿತ್ತು. ಹೀಗಾಗಿ ಅವರು ಹಿಂದಕ್ಕೆ ಮರಳಿದ್ದರು. ಆ ಬಳಿಕ ಹೊಸ ಆಯುಕ್ತರನ್ನು ನೇಮಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.