ಬಳ್ಳಾರಿ: ‘ಸ್ವಚ್ಛ, ಸುಂದರ ದೇಶ ನಿರ್ಮಾಣ ಮಾಡುವ ಪೌರಕಾರ್ಮಿಕರು ನೈಜ ಕಾಯಕಯೋಗಿಗಳು’ ಎಂದು ಶಾಸಕ ನಾರಾ ಭರತ್ ರೆಡ್ಡಿ ಹೇಳಿದರು.
ನಗರದ ವಾಲ್ಮೀಕಿ ಭವನದಲ್ಲಿ ನಗರಾಭಿವೃದ್ಧಿ ಇಲಾಖೆ, ಪೌರಾಡಳಿತ ನಿರ್ದೇಶನಾಲಯ ಹಾಗೂ ಮಹಾನಗರ ಪಾಲಿಕೆ ಸಹಯೋಗದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೌರಕಾರ್ಮಿಕರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
‘ನಗರದಲ್ಲಿ 130 ಪೌರಕಾರ್ಮಿಕರ ಹುದ್ದೆ ಕಾಯಂ ಆಗಿದ್ದು, ಇನ್ನೂ 121 ಪೌರಕಾರ್ಮಿಕರನ್ನು ಕಾಯಂ ನೇಮಕ ಮಾಡಲಾಗುವುದು’ ಎಂದರು.
ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ. ಮಾತನಾಡಿ, ‘ನಿವೃತ್ತ ಪೌರಕಾರ್ಮಿಕರಿಗೆ ಪಿಂಚಣಿ, ಇನ್ನಿತರೆ ಸೌಲಭ್ಯಗಳ ಚೆಕ್ ನೀಡುವುದರಿಂದ ಅವರು ಕಚೇರಿಗೆ ಅಲೆದಾಡುವುದು ತಪ್ಪುತ್ತದೆ. ಈ ನಿಯಮವನ್ನು ಇಲ್ಲಿಯೂ ಜಾರಿಗೊಳಿಸಲು ಆಯುಕ್ತರ ಜೊತೆ ಚರ್ಚಿಸಿದ್ದೇನೆ’ ಎಂದು ತಿಳಿಸಿದರು.
ಪಾಲಿಕೆ ಮೇಯರ್ ಮುಲ್ಲಂಗಿ ನಂದೀಶ್ ಮಾತನಾಡಿದರು. ಉಪಮೇಯರ್ ಡಿ.ಸುಕುಂ, ಸಫಾಯಿ ಕರ್ಮಚಾರಿ ನಿಗಮದ ಸದಸ್ಯ ಕಂದಕೂರು ರಾಮುಡು, ಮಾಜಿ ಮೇಯರ್ ರಾಜೇಶ್ವರಿ, ಉಪ ಆಯುಕ್ತ ನಂದೀಶ್, ಸ್ಥಾಯಿ ಸಮಿತಿಯ ಅಧ್ಯಕ್ಷೆ ಪದ್ಮರೋಜ ಇದ್ದರು.
‘ಕಾಯಂಗೊಳಿಸಲು ಆಯ್ಕೆ ಪ್ರಕ್ರಿಯೆ’
‘ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 452 ಕಾಯಂ ಪೌರಕಾರ್ಮಿಕರಿದ್ದು 183 ಪೌರಕಾರ್ಮಿಕರು ನೇರಗುತ್ತಿಗೆಯಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಯಂ ಮತ್ತು ನೇರಗುತ್ತಿಗೆಯಡಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ಪ್ರತಿ ತಿಂಗಳು ₹2000 ಸಂಕಷ್ಟ ಭತ್ಯೆ ಹಾಗೂ ₹7000 ವಿಶೇಷ ಭತ್ಯೆ ನೀಡಲಾಗುತ್ತದೆ’ ಎಂದು ಪಾಲಿಕೆ ಆಯುಕ್ತ ಪಿ.ಎಸ್. ಮಂಜುನಾಥ ಹೇಳಿದರು.
‘ಸಾರ್ವಜನಿಕ ರಜಾ ದಿನಗಳಲ್ಲಿ ಕಾರ್ಯನಿರ್ವಹಿಸುವ ಪೌರ ಕಾರ್ಮಿಕರಿಗೆ ಪ್ರತಿ ವರ್ಷ 21 ದಿನಗಳ ರಜಾ ವೇತನ ಹಾಗೂ 10 ವರ್ಷಗಳಿಗೊಮ್ಮೆ ವೇತನ ಮುಂಬಡ್ತಿ ಸಹ ನೀಡಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.