ADVERTISEMENT

ಬಳ್ಳಾರಿ: ಈ ರಸ್ತೆಯಲ್ಲಿ ಅಡಿಗಡಿಗೂ ಗುಂಡಿ

ಮಳೆಗೆ ಬದಲಾದ ರಸ್ತೆಯ ಚಹರೆ; ಗದ್ದೆಯಂತಾದ ದಾರಿ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 14 ಸೆಪ್ಟೆಂಬರ್ 2020, 19:30 IST
Last Updated 14 ಸೆಪ್ಟೆಂಬರ್ 2020, 19:30 IST
ಹೊಸಪೇಟೆಯ ಶಾದಿಮಹಲ್‌ ರಸ್ತೆಯಲ್ಲಿ ಗುಂಡಿ ಬಿದ್ದು ಸಂಪೂರ್ಣ ಕೊಚ್ಚೆಯಾಗಿರುವುದು
ಹೊಸಪೇಟೆಯ ಶಾದಿಮಹಲ್‌ ರಸ್ತೆಯಲ್ಲಿ ಗುಂಡಿ ಬಿದ್ದು ಸಂಪೂರ್ಣ ಕೊಚ್ಚೆಯಾಗಿರುವುದು   

ಹೊಸಪೇಟೆ: ಇದು ನಗರದ ಹೃದಯ ಭಾಗದ ರಸ್ತೆ. ಆದರೆ, ಈ ರಸ್ತೆಯಲ್ಲಿ ಅಡಿಗಡಿಗೂ ಗುಂಡಿಗಳು ಬಿದ್ದು ಸಂಪೂರ್ಣ ಹಾಳಾಗಿ ಅದರ ಮೂಲ ಚಹರೆಯೇ ಬದಲಾಗಿದೆ.

ಒಮ್ಮೆ ಈ ರಸ್ತೆಯಲ್ಲಿ ಓಡಾಡಿದರೆ ಇದು ನಗರದ ರಸ್ತೆಯೋ ಅಥವಾ ಯಾವುದಾದರೂ ಗದ್ದೆಯ ಕಿರುದಾರಿಯೋ ಎಂಬ ಭಾವನೆ ಮೂಡದೆ ಇರದು. ನಗರದ ಪೊಲೀಸ್‌ ಕ್ವಾಟರ್ಸ್‌ನಿಂದ ಎಂ.ಪಿ. ಪ್ರಕಾಶ್‌ ನಗರ ಬಳಿಯ ವರ್ತುಲ ರಸ್ತೆಗೆ ಸೇರುವ ಈ ರಸ್ತೆ ಅಷ್ಟರಮಟ್ಟಿಗೆ ಹಾಳಾಗಿ ಹೋಗಿದೆ.

ಅಂದಹಾಗೆ, ಈ ರಸ್ತೆ ಹಳ್ಳದಂತಾಗಿದ್ದು ಅನೇಕ ತಿಂಗಳುಗಳ ಹಿಂದೆಯೇ. ಗುಂಡಿ ಬಿದ್ದು, ಸದಾ ದೂಳಿನಿಂದ ಆವೃತವಾಗಿರುತ್ತಿದ್ದ ಈ ರಸ್ತೆಯು ಮಳೆಯಿಂದ ಇನ್ನಷ್ಟು ಹದಗೆಟ್ಟು ಹೋಗಿದೆ. ಅಡಿಗಡಿಗೂ ಆಳುದ್ದದ ಗುಂಡಿಗಳು ಬಿದ್ದಿವೆ. ಮಳೆ ಬಿದ್ದರೆ ನೀರು ಹರಿದು ಹೋಗಲು ಸೂಕ್ತ ಚರಂಡಿ ವ್ಯವಸ್ಥೆ ಇಲ್ಲ. ಹಾಗಾಗಿ ಇಡೀ ನೀರು ರಸ್ತೆಯ ಮಧ್ಯ ಬಂದು ನಿಲ್ಲುತ್ತದೆ. ವಾಹನ ಸವಾರರಿಗೆ ಗುಂಡಿಗಳು ಗೊತ್ತಾಗುವುದೇ ಇಲ್ಲ. ಇದರಿಂದಾಗಿ ನಿತ್ಯ ಅಪಘಾತಗಳು ಸಾಮಾನ್ಯವಾಗಿವೆ. ಇನ್ನು ಕಾಲ್ನಡಿಗೆಯಲ್ಲಿ ಹೋಗುವವರು ಸರ್ಕಸ್‌ ಮಾಡಬೇಕು. ಈ ಕುರಿತು ಜನಪ್ರತಿನಿಧಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು.

ADVERTISEMENT

‘ನಾವು ನಗರದ ನಿವಾಸಿಗಳೋ ಅಥವಾ ಯಾವುದೋ ಹಳ್ಳಿಯಲ್ಲಿ ಬದುಕುತ್ತಿರುವವರೋ ಎನ್ನುವ ಭಾವನೆ ಒಮ್ಮೊಮ್ಮೆ ಬರುತ್ತದೆ. ಏಕೆಂದರೆ ನಗರದ ಮಧ್ಯ ಭಾಗದಲ್ಲಿ ಇದ್ದರೂ ಉತ್ತಮವಾದ ರಸ್ತೆಯಿಲ್ಲ. ಸ್ವಲ್ಪ ಹಾಳಾದರೆ ಹೇಗೋ ಓಡಾಡಿಕೊಂಡು ಇರಬಹುದು. ಆದರೆ, ಒಂದೊಂದು ಅಡಿಗೂ ಗುಂಡಿಗಳು ಬಿದ್ದಿವೆ. ಕೆಲವೊಂದು ಕಡೆಯಂತೂ ಒಂದರಿಂದ ಎರಡು ಅಡಿ ಆಳಕ್ಕೆ ಬಿದ್ದಿವೆ. ಮಳೆ ಬಿದ್ದರೆ ಓಡಾಡಲು ಭಯವಾಗುತ್ತಿದೆ. ಆದರೆ, ದೈನಂದಿನ ಕೆಲಸಕ್ಕೆ ಹೋಗಬೇಕಿರುವುದರಿಂದ ಅನಿವಾರ್ಯವಾಗಿ ಅದರಲ್ಲೇ ಓಡಾಡಬೇಕಿದೆ’ ಎಂದು ಶಾದಿಮಹಲ್‌ ಬಳಿಯ ನಿವಾಸಿ ರಹೀಮ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಸ್ತೆ ಹಾಳಾಗಿ ಬರು ಬರುತ್ತ ಒಂದು ವರ್ಷವಾಗುತ್ತಿದೆ. ಮಳೆಗಾಲಕ್ಕೂ ಮುನ್ನ ದೂಳಿನಿಂದ ಬಹಳ ತೊಂದರೆ ಆಗುತ್ತಿತ್ತು. ಈಗ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಸದಾ ಕೊಚ್ಚೆಯಾಗಿರುತ್ತದೆ. ಕೆಸರಿನಲ್ಲೇ ಓಡಾಡಬೇಕಿದೆ. ಹಿರಿಯ ನಾಗರಿಕರು ಬಹಳ ತೊಂದರೆ ಅನುಭವಿಸುತ್ತಿದ್ದಾರೆ. ಈ ಕುರಿತು ಅನೇಕ ಸಲ ಸಂಬಂಧ ಪಟ್ಟವರ ಗಮನಕ್ಕೆ ತಂದರೂ ಯಾವುದೇ ಕ್ರಮ ಕೈಗೊಂಡಿಲ್ಲ. ರಸ್ತೆ ದುರಸ್ತಿಗೆ ತಿಂಗಳ ಹಿಂದೆ ಭೂಮಿ ಪೂಜೆ ನೆರವೇರಿಸಲಾಗಿದೆ. ಆದರೆ, ಇದುವರೆಗೆ ಕೆಲಸ ಆರಂಭಿಸಿಲ್ಲ’ ಎಂದು ರಾಜು ಗೋಳು ತೋಡಿಕೊಂಡರು.

‘ಈ ಭಾಗದಲ್ಲಿ ಪೊಲೀಸ್‌ ಕ್ವಾಟರ್ಸ್‌, ಶಾಲೆಗಳು, ಪ್ರತಿಷ್ಠಿತರ ಮನೆಗಳಿವೆ. ನಿತ್ಯ ನೂರಾರು ಜನರು ಓಡಾಡುತ್ತಾರೆ. ಹೀಗಿದ್ದರೂ ರಸ್ತೆ ದುರಸ್ತಿಗೆ ಮೀನಮೇಷ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ. ರಸ್ತೆ ಕೆಟ್ಟಿರುವುದರಿಂದ ಈ ಭಾಗದಲ್ಲಿ ವ್ಯಾಪಾರಿಗಳಿಗೂ ಹೊಡೆತ ಬಿದ್ದಿದೆ. ಮಳೆಗಾಲ ಮುಗಿದ ನಂತರ ಮತ್ತೆ ದೂಳಿನ ಕಾಟ ಶುರುವಾಗುತ್ತದೆ. ವ್ಯಾಪಾರ ಇನ್ನಷ್ಟು ಹಾಳಾಗಬಹುದು’ ಎಂದು ವ್ಯಾಪಾರಿ ರಫೀಕ್‌ ಆತಂಕ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.