ಕೂಡ್ಲಿಗಿ ಪಟ್ಟಣದ ಉಡುಸಲಮ್ಮನ ಕಟ್ಟೆಯನ್ನು ತಹಶೀಲ್ದಾರ್ ವಿ.ಕೆ. ನೇತ್ರಾವತಿ ನೇತೃತ್ವದಲ್ಲಿ ಅಧಿಕಾರಿಗಳು ಮಂಗಳವಾರ ಪರಿಶೀಲನೆ ನಡೆಸಿದರು
ಕೂಡ್ಲಿಗಿ: ‘ಪಟ್ಟಣದ ಉಡಸಲಮ್ಮನ ಕಟ್ಟೆ ಏರಿಮೇಲಿನ ಜಾಗ ಒತ್ತುವರಿ ಮಾಡಿ ಅನಧಿಕೃತವಾಗಿ ನಿರ್ಮಿಸಿಕೊಂಡಿರುವ ಮನೆಗಳನ್ನು ತೆರವುಗಳಿಸಬೇಕು’ ಎಂದು ತಹಶೀಲ್ದಾರ್ ವಿ.ಕೆ. ನೇತ್ರಾವತಿ ಸೂಚನೆ ನೀಡಿದರು.
ಕೆರೆಯ ಭೂ ಸರ್ವೆ ನಡೆಸಿ ಮಾತನಾಡಿದ ಅವರು, ‘ಕಂದಾಯ ಇಲಾಖೆ ಅಧಿಕಾರಿಗಳು ಸೂಚನೆ ನೀಡಿದರೂ, ಅದನ್ನು ಉಲ್ಲಂಘಿಸಿ ಇಲ್ಲಿ ಅನೇಕ ಕುಟುಂಬಗಳು ವಾಸವಿವೆ. ಮನೆ ಇಲ್ಲದ 35 ಕುಟುಂಬಗಳ ಪಟ್ಟಿ ಮಾಡಲಾಗಿದೆ. ಬೇರೆಡೆ ಮನೆ ಇರುವವರೂ ಇಲ್ಲಿ ಅನಧಿಕೃತವಾಗಿ ಮನೆ ವಾಸವಿದ್ದಾರೆ. ಅಂತಹವರು 15 ದಿನಗಳಲ್ಲಿ ಇಲ್ಲಿನ ಮನೆ ಖಾಲಿ ಮಾಡಬೇಕು’ ಎಂದು ಹೇಳಿದರು.
‘ಮನೆ ಇಲ್ಲದವರಿಗಾಗಿ ಪಟ್ಟಣದ ಹೊರವಲಯದ ಕರೇಕಲ್ಲು ಬಗಡಿ ಮೇಲಿನ ಸರ್ಕಾರಿ ಜಾಗ ಗುರುತಿಸಲಾಗಿದೆ. ಉಡುಸಲ್ಲಮ್ಮನ ಕೆರೆ 27 ಎಕರೆಯಷ್ಟು ವ್ಯಾಪ್ತಿಯಿದ್ದು, ಕೆರೆ ಅಂಗಳ ಒತ್ತುವರಿ ಮಾಡಿದ್ದನ್ನೂ ತೆರವು ಮಾಡಲಾಗುತ್ತದೆ’ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಮುಖ್ಯಾಧಿಕಾರಿ ಎಚ್. ದಾದಪೀರ್, ಸದಸ್ಯ ಟಿ. ವೆಂಕಟೇಶ, ಮುಖಂಡರಾದ ಬಿ. ಭೀಮೇಶ್, ಗ್ಯಾಸ್ ವೆಂಕಟೇಶ, ಬಿ.ಕೆ. ರಾಘವೇಂದ್ರ, ತಾಲ್ಲೂಕು ಭೂ ಮಾಪನಾಧಿಕಾರಿ ಮಂಜುನಾಥ, ಕಂದಾಯ ನಿರೀಕ್ಷಕ ಪ್ರಭು ತಳವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.