ADVERTISEMENT

ನವೆಂಬರ್ 26ರಂದು ಅಖಂಡ ಬಳ್ಳಾರಿಗಾಗಿ ಬಂದ್

ನಿರಂತರ ಹೋರಾಟಕ್ಕೆ ಚಿಂತನೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 13:15 IST
Last Updated 24 ನವೆಂಬರ್ 2020, 13:15 IST
ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮುಖಂಡರು ಬಳ್ಳಾರಿಯಲ್ಲಿ ಮಂಗಳವಾರ ಹೋರಾಟದ ರೂಪರೇಷೆ ಕುರಿತು ಸಭೆ ನಡೆಸಿದರು.
ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ಮುಖಂಡರು ಬಳ್ಳಾರಿಯಲ್ಲಿ ಮಂಗಳವಾರ ಹೋರಾಟದ ರೂಪರೇಷೆ ಕುರಿತು ಸಭೆ ನಡೆಸಿದರು.   

ಬಳ್ಳಾರಿ: ಜಿಲ್ಲೆಯ ವಿಭಜನೆಯನ್ನು ವಿರೋಧಿಸಿ 26ರಂದು ಜಿಲ್ಲೆಯ ಬಂದ್‌ಗೆ ಕರೆ ಕೊಟ್ಟಿರುವ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿಯು ಬಂದ್‌ ಬಳಿಕ ಹೋರಾಟವನ್ನು ನಿರಂತರವಾಗಿ ಮುಂದುವರಿಸಲು ಚಿಂತನೆ ನಡೆಸಿದೆ. ಆದರೆ ಈ ಬಗ್ಗೆ ಬಂದ್‌ ಬಳಿಕವಷ್ಟೇ ಖಚಿತ ಸ್ವರೂಪ ದೊರಕಲಿದೆ.

ಸಮಿತಿಯು ನಗರದ ಗಾಂಧಿ ಭವನದಲ್ಲಿ ಮಂಗಳವಾರ ನಡೆಸಿದ ಸಭೆಯಲ್ಲಿ ಮುಖಂಡರು ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು.
‘ವಿಭಜನೆ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿಯೇ ಬಂದ್‌ ಹಮ್ಮಿಕೊಳ್ಳಲಾಗಿದ್ದು, ಅಷ್ಟಕ್ಕೇ ಹೋರಾಟ ನಿಲ್ಲಬಾರದು. ಕನಿಷ್ಠ 50 ದಿನ ಕಾಲ ನಿರಂತರ 50 ಸಂಘ–ಸಂಸ್ಥೆಗಳು ಸರದಿ ಪ್ರಕಾರ ಧರಣಿ ನಡೆಸಬೇಕು. ಆಗ ಮಾತ್ರ ಸರ್ಕಾರಕ್ಕೆ ಚುರುಕು ನೀಡಲು ಸಾಧ್ಯವಾಗುತ್ತದೆ’ ಎಂದು ಕಲ್ಯಾಣ ಕರ್ನಾಟಕ ಹೋರಾಟ ಸಮಿತಿಯ ಸಂಚಾಲಕ ಸಿರಿಗೇರಿ ಪನ್ನರಾಜ್‌ ಸಲಹೆ ನೀಡಿದರು.

‘ವಿಭಜನೆಯ ವಿರುದ್ಧ ಹೋರಾಟವು ಪಕ್ಷಾತೀತವಾಗಿ ನಡೆಯಬೇಕು. ವಿಭಜನೆಯ ವಿರುದ್ಧವಿರುವ ವಿವಿಧ ರಾಜಕೀಯ ಪಕ್ಷಗಳು ಈ ಬಗ್ಗೆ ಹೆಚ್ಚಿನ ಉತ್ಸಾಹ ತೋರಬೇಕು’ ಎಂದು ಹೇಳಿದರು.

ADVERTISEMENT

‘ಈಗಾಗಲೇ ವಿಭಜನೆಯಾಗಿರುವ ಜಿಲ್ಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡೇ ಹೋರಾಟವನ್ನು ನಡೆಸಬೇಕು. ರಾಯಚೂರು ಜಿಲ್ಲೆಯನ್ನು ವಿಭಜಿಸಿ ಕೊಪ್ಪಳವನ್ನು ರಚಿಸಿದ ಬಳಿಕ ತುಂಗಭದ್ರಾ ಜಲಾಶಯದ ನೀರನ್ನು ಸಮರ್ಪಕವಾಗಿ ಬಳಸಲು ಆಗುತ್ತಲೇ ಇಲ್ಲ. ಈ ಪರಿಸ್ಥಿತಿ ಬಳ್ಳಾರಿ ಜಿಲ್ಲೆಗೂ ಬರಬಹುದು’ ಎಂದು ತುಂಗಭದ್ರಾ ರೈತ ಸಂಘದ ಅಧ್ಯಕ್ಷ ದರೂರು ಪುರುಷೋತ್ತಮಗೌಡ ಆತಂಕ ವ್ಯಕ್ತಪಡಿಸಿದರು.

‘ಜಿಲ್ಲೆಗಳನ್ನು ವಿಭಜಿಸಿದ ಬಳಿಕ ಹಳೆಯ ಮತ್ತು ಹೊಸ ಜಿಲ್ಲೆಗಳ ಅಭಿವೃದ್ಧಿ ನಿಟ್ಟಿನಲ್ಲಿ ಸಮಗ್ರ ದೃಷ್ಟಿಕೋನವಿಲ್ಲದೇ ಜಿಲ್ಲೆಗಳು ಸೊರಗುತ್ತಿವೆ. ಬಳ್ಳಾರಿ ಜಿಲ್ಲೆಯ ವಿಭಜನೆಯ ಬಳಿಕವೂ ಅಭಿವೃದ್ಧಿಯ ವಿಷಯದಲ್ಲಿ ತಾರತಮ್ಯ ಏರ್ಪಟ್ಟು ಜನ ಸೊರಗಬೇಕಾಗುತ್ತದೆ’ ಎಂದು ಹೇಳಿದರು.

50 ದಿನ ಸರದಿ ಧರಣಿ: ಕನಿಷ್ಠ 50 ದಿನದ ಸರಣಿ ಧರಣಿ ನಡೆಸಲು ದಿನವಾರು ಸಂಘ–ಸಂಸ್ಥೆಗಳ ಪಟ್ಟಿಯನ್ನು ಸಿದ್ಧಪಡಿಸಬೇಕು ಎಂದು ಸಭೆ ನಿರ್ಧರಿಸಿತು. ಅದನ್ನು ತಾವು ನಿರ್ವಹಿಸುವುದಾಗಿ ಪುರುಷೋತ್ತಮಗೌಡ ಒಪ್ಪಿಕೊಂಡರು.

ಮುಖಂಡರಾದ ಟಿ.ಜಿ.ವಿಠಲ್‌, ಜೆ,ಸತ್ಯಬಾಬು, ಟಿ.ಜಿ.ವಿಠಲ್‌, ಮಾಧವರೆಡ್ಡಿ, ಮಲ್ಲಿಕಾರ್ಜುನ ರೆಡ್ಡಿ. ಕುಡುತಿನಿ ಶ್ರೀನಿವಾಸ್‌, ಸಿದ್ಮಲ್‌ ಮಂಜುನಾಥ್, ವಿಜಯಕುಮಾರ್ ಪಾಲ್ಗೊಂಡಿದ್ದರು.

ಇಂದು ಸಂಜೆ ಸಭೆ: ಬಂದ್‌ ಪ್ರಯುಕ್ತ ಬುಧವಾರ ಸಂಜೆ ಗಾಂಧಿ ಭವನದಲ್ಲಿ ಮತ್ತೆ ಸಭೆ ನಡೆಸಲು ಮುಖಂಡರು ನಿರ್ಧರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.