ಕುಡತಿನಿ: ‘ರೈತರ ಸಮಸ್ಯೆ ಪರಿಹಾರಕ್ಕೆ ಆಗಸ್ಟ್ 25, 26ರಂದು ಮುಖ್ಯಮಂತ್ರಿ ಹಾಗೂ ಕೈಗಾರಿಕಾ ಸಚಿವರೊಂದಿಗೆ ಸಭೆ ನಡೆಸಲಾಗುವುದು. ರೈತರಿಗೆ ಭೂ ಪರಿಹಾರ ಕಲ್ಪಿಸಲು ಶ್ರಮಿಸಲಾಗುವುದು’ ಎಂದು ಸಂಸದ ಇ. ತುಕಾರಾಂ ಭರವಸೆ ನೀಡಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಲ್ಲಿನ ನೂತನ ಬಸ್‌ನಿಲ್ದಾಣದ ಬಳಿ ಕುಡತಿನಿ ಹಾಗೂ ಸುತ್ತಲಿನ ಗ್ರಾಮಗಳ ಜನರು ಹಮ್ಮಿಕೊಂಡಿರುವ ಧರಣಿ ಸ್ಥಳಕ್ಕೆ ಶನಿವಾರ ಭೇಟಿ ನೀಡಿ, ಮಾತನಾಡಿದರು.
‘ರೈತರ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಕ್ರಮ ವಹಿಸಲಾಗುವುದು’ ಎಂದರು.
‘ವಿವಿಧ ಕೈಗಾರಿಕೆಗಳ ಸ್ಥಾಪನೆ ಉದ್ದೇಶಕ್ಕೆ ಕಡಿಮೆ ಬೆಲೆಗೆ 13,000 ಎಕರೆ ಜಮೀನು ವಶಪಡಿಸಿಕೊಂಡು 15 ವರ್ಷಗಳಾದರೂ ಕೈಗಾರಿಕೆಗಳನ್ನು ಸ್ಥಾಪಿಸಿಲ್ಲ. ರೈತ ಕುಟುಂಬಗಳಿಗೆ ಉದ್ಯೊಗ ಭದ್ರತೆ ಒದಗಿಸಿಲ್ಲ. ಮುಖ್ಯಮಂತ್ರಿ ಜತೆಗೆ ನಡೆದ ಮೂರು ಸಭೆಗಳಿಂದ ಯಾವುದೇ ಪ್ರಯೋಜನವಾಗಿಲ್ಲ. ರೈತರಿಗೆ ಭೂ ಪರಿಹಾರ ನೀಡಲಾಗದಿದ್ದರೆ, ಜಮೀನು ಮರಳಿಸಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಅಧ್ಯಕ್ಷ ಯು. ಬಸವರಾಜ ಒತ್ತಾಯಿಸಿದರು.
ಮುಖಂಡರಾದ ಸತ್ಯಬಾಬು, ವಿ.ಎಸ್. ಶಿವಶಂಕರ್, ಜಂಗ್ಲಿಸಾಬ್, ತಿಪ್ಪೇಸ್ವಾಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.