ADVERTISEMENT

ಬಳ್ಳಾರಿ | BTPSನ 3ನೇ ಘಟಕದಲ್ಲಿ ತಾಂತ್ರಿಕ ದೋಷ: ವಿದ್ಯುತ್ ಉತ್ಪಾದನೆ ಸ್ಥಗಿತ

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2025, 13:40 IST
Last Updated 13 ಏಪ್ರಿಲ್ 2025, 13:40 IST
ಕುಡತಿನಿ ಸಮೀಪದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಹೊರ ನೋಟ  
ಕುಡತಿನಿ ಸಮೀಪದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಹೊರ ನೋಟ     

ಕುಡತಿನಿ (ಸಂಡೂರು): ಸಮೀಪದ ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ ಮೂರನೇ ಘಟಕದಲ್ಲಿ ಬಾಯ್ಲರ್ ಟ್ಯೂಬ್ ನ ಸೋರಿಕೆ, ಇತರೆ ತಾಂತ್ರಿಕ ಸಮಸ್ಯೆಯಿಂದ ಘಟಕವು ಸುಮಾರು ಮೂರು ದಿನಗಳಿಂದ ಕಾರ್ಯ ನಿರ್ವಹಿಸದೇ ಸಂಪೂರ್ಣವಾಗಿ ಸ್ಥಗಿತಗೊಂಡಿದೆ.

ಕೇಂದ್ರದಲ್ಲಿ 500 ಮೇ.ವ್ಯಾಟ್‌ ನ ಎರಡು ಘಟಕಗಳು, 750 ಮೇ.ವ್ಯಾ. ಒಂದು ಘಟಕವಿದ್ದು, ಕೇಂದ್ರದ ಮೂರು ಘಟಕಗಳಿಂದ ನಿತ್ಯ 1,750 ಮೇ.ವ್ಯಾ. ವಿದ್ಯುತ್ ಉತ್ಪಾದನೆಯಾಗುತ್ತಿದೆ. ಮೂರು ದಿನಗಳಿಂದ 3ನೇ ಘಟಕವು ಸ್ಥಗಿತಗೊಂಡಿರುವುದರಿಂದ ಪ್ರಸ್ತುತ 1,000 ಮೇ.ವ್ಯಾ. ವಿದ್ಯುತ್ ಮಾತ್ರ ಉತ್ಪಾದನೆ ಮಾಡಲಾಗುತ್ತಿದೆ.

ಪ್ರಸ್ತುತ ದಿನಗಳಲ್ಲಿ ರಾಜ್ಯದಲ್ಲಿ ವಿದ್ಯುತ್‍ಗೆ ಭಾರಿ ಬೇಡಿಕೆಯಿದ್ದು, ಇಂತಹ ಸನ್ನಿವೇಶದಲ್ಲಿ ಬಿಟಿಪಿಎಸ್ ನಲ್ಲಿ ವಾರದಲ್ಲಿ ಎರಡು ಬಾರಿ 3ನೇ ಘಟಕದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ವಿದ್ಯುತ್ ಉತ್ಪಾದನೆಯಲ್ಲಿ ನಿರಂತರ ತೊಡಕಾಗಿದೆ.

ADVERTISEMENT

ನದಿಗಳಲ್ಲಿ ನೀರಿನ ಹರಿವಿನ ಪ್ರಮಾಣ ಕಡಿಮೆಯಾಗಿ ಜಲ ವಿದ್ಯುತ್ ಉತ್ಪಾದನೆಯು ಕುಸಿತವಾಗಿದೆ. ವಿದ್ಯುತ್‍ಗಾಗಿ ಶಾಖೋತ್ಪನ್ನ ಕೇಂದ್ರಗಳನ್ನೇ ಅವಲಂಬಿಸಲಾಗಿದ್ದು, ನಿಗಮವು ವಿದ್ಯುತ್ ಬೇಡಿಕೆ ಪೂರೈಸಲಾಗದೇ ಒತ್ತಡದಲ್ಲಿ ಸಿಲುಕಿದೆ.

 ಬಿಟಿಪಿಎಸ್ ನ 3ನೇ ಘಟಕದಲ್ಲಿ ತಾಂತ್ರಿಕ ಸಮಸ್ಯೆಯಿಂದ ಘಟಕವು 3 ದಿನಗಳಿಂದ ಸ್ಥಗಿತಗೊಂಡ ಹಿನ್ನೆಲೆಯಲ್ಲಿ  ಘಟಕದ ಪ್ರಭಾರಿ ಕಾರ್ಯನಿರ್ವಾಹಕ ನಿರ್ದೇಶಕಿ ಜ್ಯೋತಿಲಕ್ಷ್ಮಿಯವರನ್ನು ದೂರವಾಣಿ ಮೂಲಕ ಸಂಪರ್ಕಿಸಿದರೂ ಅವರಿಂದ ಸೂಕ್ತ ಉತ್ತರ ಬರಲಿಲ್ಲ. 

‘ಬಿಟಿಪಿಎಸ್ ನ 3ನೇ ಘಟಕದಲ್ಲಿ ಬಾಯ್ಲರ್ ಟ್ಯೂಬ್ ನ ಸೋರಿಕೆ, ಇತರೆ ತಾಂತ್ರಿಕ ಸಮಸ್ಯೆಯಿಂದ ವಿದ್ಯುತ್ ಉತ್ಪಾದನೆಯು ತಾತ್ಕಲಿಕವಾಗಿ ಸ್ಥಗಿತಗೊಂಡಿದ್ದು ಘಟಕವನ್ನು ದುರಸ್ತಿಗೊಳಿಸಿ ಶೀಘ್ರವಾಗಿ ಘಟಕವನ್ನು ಆರಂಭಿಸಲಾಗುವುದು’ ಎಂದು ಬಿಟಿಪಿಎಸ್ ತಾಂತ್ರಿಕ ನಿರ್ದೇಶಕ ಕೃಷ್ಣಮೂರ್ತಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.