ADVERTISEMENT

ಬಳ್ಳಾರಿ: ಎಸ್ಸೆಸ್ಸೆಲ್ಸಿ ಮಕ್ಕಳಿಗೆ ಸಿಟಿ ಚಾನೆಲ್‌ನಲ್ಲಿ ಪಾಠ

ರೋಟರಿ ಕ್ಲಬ್‌ ಅಧ್ಯಕ್ಷ ಗೊಗ್ಗ ವಿಶ್ವನಾಥ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 8:26 IST
Last Updated 4 ಜೂನ್ 2020, 8:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೊಸಪೇಟೆ: ‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲಿರುವ ವಿದ್ಯಾರ್ಥಿಗಳಿಗೆ ಇಲ್ಲಿನ ವಿಜಯನಗರ ಸಿಟಿ ಚಾನೆಲ್‌ ಮೂಲಕ ಪಾಠ ಹೇಳಿಕೊಡಲು ನಿರ್ಧರಿಸಲಾಗಿದ್ದು, ಈ ಪಾಠಗಳು ಶುಕ್ರವಾರದಿಂದ (ಜೂ.5) ಪ್ರತಿದಿನ ಬೆಳಿಗ್ಗೆ 6.30ರಿಂದ 7.30 ಹಾಗೂ ಸಂಜೆ 6ರಿಂದ 7ರ ವರೆಗೆ ನಡೆಯಲಿವೆ’ ಎಂದು ರೋಟರಿ ಕ್ಲಬ್‌ ಅಧ್ಯಕ್ಷ ಗೊಗ್ಗ ವಿಶ್ವನಾಥ್‌ ತಿಳಿಸಿದರು.

‘ಗಣಿತ, ವಿಜ್ಞಾನ ಹಾಗೂ ಇಂಗ್ಲಿಷ್‌ ವಿಷಯಗಳಿಗೆ ಸಂಬಂಧಿಸಿದಂತೆ 12 ಜನ ನುರಿತ ಶಿಕ್ಷಕರು ಪಾಠ ಮಾಡುವರು. ಬೆಳಿಗ್ಗೆ ನಡೆದ ಪಾಠ ಸಂಜೆ ಪುನಃ ಪುನರಾವರ್ತನೆ ಆಗಲಿದೆ. ಮೂರೂ ವಿಷಯಗಳಲ್ಲಿ ಕಠಿಣವಾದ ಪಾಠಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಸಿಟಿ ಚಾನೆಲ್‌ ವೀಕ್ಷಿಸಲು ಆಗದವರು ಯೂಟ್ಯೂಬ್‌ನಲ್ಲಿ ನೋಡಬಹುದು’ ಎಂದು ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ರೋಟರಿ ಶಿಕ್ಷಣ ಅಭಿಯಾನ’ ಯೋಜನೆಯಡಿ ಈ ಕಾರ್ಯಕ್ರಮ ಸಂಘಟಿಸಲಾಗಿದೆ. 2016ರಿಂದ ಸತತವಾಗಿ ಈ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ಕೊರೊನಾ ಲಾಕ್‌ಡೌನ್‌ನಿಂದ ಈ ವರ್ಷ ವಿಳಂಬವಾಗಿದೆ. ತಾಲ್ಲೂಕಿನ ಏಳು ಸಾವಿರ ವಿದ್ಯಾರ್ಥಿಗಳಿಗೆ ಇದರಿಂದ ಪ್ರಯೋಜನವಾಗಲಿದೆ. ಇದರ ಸಂಪೂರ್ಣ ವೆಚ್ಚವನ್ನು ರೋಟರಿ ಸದಸ್ಯ ಕೆ. ರವಿಶಂಕರ್‌ ಭರಿಸಿದ್ದಾರೆ ಎಂದು ತಿಳಿಸಿದರು.
ಲಾಕ್‌ಡೌನ್‌ನಿಂದಾಗಿ ಅನೇಕ ವಿದ್ಯಾರ್ಥಿಗಳು ಓದುವುದು ಬಿಟ್ಟು ಗದ್ದೆ ಕೆಲಸಕ್ಕೆ ಹೋಗುತ್ತಿದ್ದಾರೆ. ಅಂತಹವರ ಪೋಷಕರ ಮೊಬೈಲ್‌ ಸಂಖ್ಯೆ ಕಲೆ ಹಾಕಿ ವಾಟ್ಸ್ಯಾಪ್‌ ಗ್ರುಪ್‌ ರಚಿಸಲಾಗಿದೆ. ಅದರ ಮೂಲಕ ಪಾಠಗಳ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ ಎಂದು ವಿವರಿಸಿದರು.

ADVERTISEMENT

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಯ ಪ್ರಭುಲಿಂಗ ಪಾಟೀಲ ಮಾತನಾಡಿ, ‘ಎರಡು ತಿಂಗಳಿಂದ ಮಕ್ಕಳಿಗೆ ಪುನರ್‌ ಮನನ ಆಗಿಲ್ಲ. ಶೇ 50ಕ್ಕಿಂತ ಕಡಿಮೆ ಅಂಕ ಗಳಿಸುವ ವಿದ್ಯಾರ್ಥಿಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಪಾಠ ಹೇಳಿಕೊಡಲಾಗುತ್ತಿದ್ದು, ಮಕ್ಕಳು ಇದರ ಲಾಭ ಪಡೆಯಬೇಕು’ ಎಂದರು.

‘ತಾಲ್ಲೂಕು ವ್ಯಾಪ್ತಿ ಶಾಲೆಯ 91 ವಿದ್ಯಾರ್ಥಿಗಳು ಅನ್ಯ ತಾಲ್ಲೂಕುಗಳಲ್ಲಿ ಪರೀಕ್ಷಾ ಕೇಂದ್ರ ಆಯ್ಕೆ ಮಾಡಿಕೊಂಡರೆ, ಅನ್ಯ ತಾಲ್ಲೂಕುಗಳ 63 ವಿದ್ಯಾರ್ಥಿಗಳು ಹೊಸಪೇಟೆ ತಾಲ್ಲೂಕು ಕೇಂದ್ರಗಳಲ್ಲಿ ಪರೀಕ್ಷೆ ಬರೆಯುವರು. ಪರೀಕ್ಷೆಗೆ ಈಗಾಗಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಸ್ಯಾನಿಟೈಸರ್‌, ಮಾಸ್ಕ್‌ ವ್ಯವಸ್ಥೆ ಮಾಡಲಾಗಿದೆ’ ಎಂದು ಮಾಹಿತಿ ಹಂಚಿಕೊಂಡರು.
ರೋಟರಿ ಕಾರ್ಯದರ್ಶಿ ಬಿ.ಜಿ. ಶ್ರೀಕಾಂತ್‌, ಅಸಿಸ್ಟೆಂಟ್‌ ಗವರ್ನರ್‌ ವಿಜಯ್‌ ಸಿಂಧಗಿ, ಸದಸ್ಯರಾದ ರಮೇಶಬಾಬು, ವೇದಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.