ADVERTISEMENT

ದಾಖಲೆ ಪ್ರಮಾಣದಲ್ಲಿ ಪುಸ್ತಕ ಮಾರಾಟ

ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ಪ್ರಕಟಿಸಿರುವ ಪುಸ್ತಕಗಳು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 5 ನವೆಂಬರ್ 2019, 19:30 IST
Last Updated 5 ನವೆಂಬರ್ 2019, 19:30 IST
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಪುಸ್ತಕ ಖರೀದಿಸುತ್ತಿರುವ ಓದುಗರು
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗದಲ್ಲಿ ಪುಸ್ತಕ ಖರೀದಿಸುತ್ತಿರುವ ಓದುಗರು   

ಹೊಸಪೇಟೆ: ಇಲ್ಲಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಮೂರೇ ದಿನಗಳಲ್ಲಿ ದಾಖಲೆ ಪ್ರಮಾಣದಲ್ಲಿ ಕನ್ನಡ ಪುಸ್ತಕಗಳು ಮಾರಾಟವಾಗಿವೆ.

ಕನ್ನಡ ರಾಜ್ಯೋತ್ಸವದ ಪ್ರಯುಕ್ತ ನ. 1ರಿಂದ 3ರ ವರೆಗೆ ಪ್ರಸಾರಾಂಗ ಪ್ರಕಟಿಸಿದ ಎಲ್ಲಾ ಪುಸ್ತಕಗಳ ಮೇಲೆ ಶೇ 50ರಷ್ಟು ರಿಯಾಯಿತಿ ಘೋಷಿಸಲಾಗಿತ್ತು. ಓದುಗರು ಅದರ ಸಂಪೂರ್ಣ ಪ್ರಯೋಜನ ಪಡೆದುಕೊಂಡಿದ್ದಾರೆ.

ಒಟ್ಟು ಆರು ಲಕ್ಷ ಮುಖಬೆಲೆಯ ಪುಸ್ತಕಗಳು ಮಾರಾಟವಾಗಿದ್ದು, ಪ್ರಸಾರಾಂಗ ₹3 ಲಕ್ಷ ನಗದು ಆದಾಯ ಗಳಿಸಿದೆ.

ADVERTISEMENT

ಕರ್ನಾಟಕ ಚರಿತ್ರೆ ಸಂಪುಟಗಳು, ಕರ್ನಾಟಕ ಜಾನಪದ ಕಲೆಗಳು, ಶಾಕ್ತ ಪಂಥ, ಸಂಶೋಧನೆ, ಇತ್ತೀಚೆಗೆ ಬಂದಿರುವ ಸುವರ್ಣ ಕಥನ, ಹಂಪಿ ಮರುವು, ಜೈನ ಸಾಹಿತ್ಯ ಸಂಪುಟಗಳು,ಸಮಾಜ ವಿಜ್ಞಾನದ ಪುಸ್ತಕಗಳು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗಿವೆ.

ಮೊಬೈಲ್‌ ಉಪಯೋಗಿಸುವುದು ಹೆಚ್ಚಾದ ನಂತರ ಓದುಗರ ಸಂಖ್ಯೆ ಕುಸಿಯುತ್ತಿದೆ ಎಂದು ಕಳವಳ ವ್ಯಕ್ತವಾಗುತ್ತಿರುವ ಮಧ್ಯೆ ದಾಖಲೆ ಮಟ್ಟದಲ್ಲಿ ಪುಸ್ತಕಗಳು ಮಾರಾಟವಾಗಿವೆ. ಈಗಲೂ ಸಹ ಓದುಗರದ್ದೇ ದೊಡ್ಡ ವರ್ಗ ಇದೆ ಎಂಬುದಕ್ಕೆ ಇದೇ ಸಾಕ್ಷಿ. ಉತ್ಕೃಷ್ಟ ಪುಸ್ತಕಗಳು ಬಂದರೆ ಜನ ಖಂಡಿತವಾಗಿ ಕೊಂಡುಕೊಂಡು ಖರೀದಿಸುತ್ತಾರೆ ಎನ್ನುವುದು ಋಜುವಾತಾಗಿದೆ.

ಬೆಳಗಾವಿ, ಹುಬ್ಬಳ್ಳಿ, ಧಾರವಾಡ, ಕಲಬುರ್ಗಿ, ರಾಯಚೂರು, ಚಿಂಚೋಳಿ ಸೇರಿದಂತೆ ಹಲವು ಕಡೆಗಳಿಂದ ಜನ ನೇರವಾಗಿ ವಿಶ್ವವಿದ್ಯಾಲಯಕ್ಕೆ ಬಂದು ಪುಸ್ತಕಗಳನ್ನು ಖರೀದಿಸಿರುವುದು ವಿಶೇಷ.

ಹೊಸ ಪುಸ್ತಕಗಳ ಪ್ರಕಟಣೆಗೆ ಯೋಜನೆ: ಬರುವ ದಿನಗಳಲ್ಲಿ ಹೊಸ ಪುಸ್ತಕಗಳನ್ನು ಪ್ರಕಟಿಸಲು ಪ್ರಸಾರಾಂಗ ಯೋಜನೆ ರೂಪಿಸಿದೆ. ‘ವಿಶ್ವವಿದ್ಯಾಲಯದ ಪ್ರಾಧ್ಯಾಪಕರೇ ಸಂಶೋಧನೆ ಕೈಗೊಂಡು ಬರೆದಿರುವ 50ರಿಂದ 60 ಪುಸ್ತಕಗಳು ಶೀಘ್ರದಲ್ಲೇ ಹೊರ ತರಲಾಗುವುದು. ಅಷ್ಟೇ ಅಲ್ಲ, ಕೆಲವು ಪುಸ್ತಕಗಳಿಗೆ ಭಾರಿ ಬೇಡಿಕೆ ಇದ್ದು, ಅವುಗಳನ್ನು ಮರು ಮುದ್ರಣ ಮಾಡಲಾಗುವುದು’ ಎಂದು ಪ್ರಸಾರಾಂಗದ ನಿರ್ದೇಶಕ ಎಚ್‌.ಡಿ. ಪ್ರಶಾಂತ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಆಯುರ್ವೇದ ಚಿಕಿತ್ಸಾ ಪದ್ಧತಿ, ಕರ್ನಾಟಕದ ಭೂಗೋಳ, ಸಮಾಜ ವಿಜ್ಞಾನ, ಅಭಿವೃದ್ಧಿಯ ವಿಭಿನ್ನ ಪರಿಕಲ್ಪನೆಗಳನ್ನು ಒಳಗೊಂಡ ಪುಸ್ತಕಗಳನ್ನು ಪ್ರಕಟಿಸಲು ಉದ್ದೇಶಿಸಲಾಗಿದೆ. ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸ.ಚಿ. ರಮೇಶ ಅವರು ಹೊಸ ಹೊಸ ಪುಸ್ತಕಗಳ ಪ್ರಕಟಣೆಗೆ ಸೂಚಿಸಿದ್ದಾರೆ. ಅವರ ಮಾರ್ಗದರ್ಶನದಲ್ಲಿ ಆ ನಿಟ್ಟಿನಲ್ಲಿ ಎಲ್ಲಾ ಸಿಬ್ಬಂದಿ ಕೂಡಿಕೊಂಡು ಕೆಲಸ ನಿರ್ವಹಿಸುತ್ತಿದ್ದೇವೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.