ADVERTISEMENT

ಕಮಲಾಪುರ ಪಟ್ಟಣ ಪಂಚಾಯಿತಿ: ಕಾಂಗ್ರೆಸ್‌ ಭದ್ರಕೋಟೆ ಬೇಧಿಸುವುದೇ ಬಿಜೆಪಿ?

ಬಿಜೆಪಿ–ಕಾಂಗ್ರೆಸ್‌ನ ಪ್ರಮುಖ ಮುಖಂಡರಿಂದ ಪಕ್ಷ ಅದಲು–ಬದಲು

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಮೇ 2019, 19:30 IST
Last Updated 24 ಮೇ 2019, 19:30 IST
   

ಹೊಸಪೇಟೆ: ತಾಲ್ಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿ ಕಾಂಗ್ರೆಸ್‌ನ ಭದ್ರಕೋಟೆ. ಆ ಕೋಟೆಯನ್ನು ಈ ಸಲದ ಚುನಾವಣೆಯಲ್ಲಿ ಬಿಜೆಪಿ ಬೇಧಿಸುವುದೇ?

ಹೀಗೊಂದು ಪ್ರಶ್ನೆ ಈ ಚುನಾವಣೆಯಲ್ಲಿ ಕೇಳಿ ಬರುತ್ತಿದೆ. ಈ ಹಿಂದಿನ ಎರಡು ಚುನಾವಣೆಗಳಲ್ಲಿ ಸತತವಾಗಿ ಕಾಂಗ್ರೆಸ್‌ ಗೆಲುವಿನ ನಗೆ ಬೀರಿದ್ದು, ಆ ಕೋಟೆಯನ್ನು ಒಡೆದು ಬಿಜೆಪಿ ಅಧಿಕಾರಕ್ಕೆ ಬರುತ್ತದೆಯೇ ಎಂಬ ಪ್ರಶ್ನೆ ಮೂಡಲು ಬದಲಾದ ರಾಜಕೀಯ ಸನ್ನಿವೇಶವೇ ಕಾರಣ.

ಈ ಹಿಂದಿನ ಪಟ್ಟಣ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್‌ ಗೆಲುವಿನ ದಡ ಸೇರಿಸುವಲ್ಲಿ ಮಾಜಿಶಾಸಕ ಎಚ್‌.ಆರ್‌. ಗವಿಯಪ್ಪ ಪ್ರಮುಖ ಪಾತ್ರ ವಹಿಸಿದ್ದರು. ಮುಖಂಡ ದೀಪಕ್‌ ಕುಮಾರ್‌ ಸಿಂಗ್‌, ಹಂಪಿ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌ ಕೂಡ ಶ್ರಮಿಸಿದ್ದರು.

ADVERTISEMENT

ಆರಂಭದಿಂದಲೂ ಗವಿಯಪ್ಪನವರಿಗೆ ಕಮಲಾಪುರ ಪಟ್ಟಣದ ಮೇಲೆ ಹಿಡಿತವಿದೆ. ಅದು ಈ ಹಿಂದಿನ ಎಲ್ಲ ಚುನಾವಣೆಯಲ್ಲಿ ಸಾಬೀತಾಗಿದೆ. ಅದಕ್ಕೆ ಇತ್ತೀಚಿನ ತಾಜಾ ನಿದರ್ಶನ. ಹೋದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಿಂತ ಅಧಿಕ ಮತಗಳನ್ನು ಪಡೆದಿರುವುದು. ಬದಲಾಗಿರುವ ರಾಜಕೀಯ ಪರಿಸ್ಥಿತಿಯಲ್ಲಿ ಗವಿಯಪ್ಪನವರು ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಸೇರಿ ಆ ಪಕ್ಷದಿಂದ ಸ್ಪರ್ಧಿಸಿದ್ದರು. ಕಾಂಗ್ರೆಸ್‌ ತೊರೆದು ಬಿಜೆಪಿಯಿಂದ ಗವಿಯಪ್ಪನವರು ಸ್ಪರ್ಧಿಸಿದರೂ ಕಮಲಾಪುರ ಪಟ್ಟಣದ ಮತದಾರ ಮಾತ್ರ ಅವರ ಕೈಬಿಡಲಿಲ್ಲ.

ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ನೀಡಲಿಲ್ಲ ಎಂಬ ಕಾರಣಕ್ಕೆ ಮುನಿಸಿಕೊಂಡು ದೀಪಕ್‌ ಸಿಂಗ್‌ ಪಕ್ಷ ತೊರೆದು ಜೆ.ಡಿ.ಎಸ್‌. ಸೇರಿದರು. ಅವರ ಸಹೋದರ ಪ್ರವೀಣ್‌ ಸಿಂಗ್‌ ಕೂಡ ಅದೇ ಕಾರಣಕ್ಕೆ ಅಸಮಾಧಾನಗೊಂಡು ಪಕ್ಷದ ಎಲ್ಲ ಚಟುವಟಿಕೆಗಳಿಂದ ದೂರ ಉಳಿದಿದ್ದಾರೆ.

ಹೋದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಶಾಸಕ ಆನಂದ್‌ ಸಿಂಗ್‌ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದರು. ಲೋಕಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲೀಡ್‌ ತಂದುಕೊಟ್ಟಿದ್ದರು. ಆದರೆ, ಕಂಪ್ಲಿ ಶಾಸಕ ಜೆ.ಎನ್‌. ಗಣೇಶ್‌ ಅವರೊಂದಿಗೆ ನಡೆದ ಹೊಡೆದಾಟ ಪ್ರಕರಣದ ಬಳಿಕ ಪಕ್ಷದ ಚಟುವಟಿಕೆಗಳಿಂದ ಸಂಪೂರ್ಣ ದೂರ ಉಳಿದಿದ್ದಾರೆ. ಲೋಕಸಭೆ ಚುನಾವಣೆಯಲ್ಲೂ ಪಕ್ಷದ ಅಭ್ಯರ್ಥಿ ಪರ ಪ್ರಚಾರ ಕೈಗೊಳ್ಳಲಿಲ್ಲ. ಪಟ್ಟಣ ಪಂಚಾಯಿತಿ ಚುನಾವಣೆಯಿಂದಲೂ ದೂರ ಉಳಿದಿದ್ದಾರೆ. ಸೇನಾಧಿಪತಿ ಇಲ್ಲದೆ ಸೈನಿಕರು ಯುದ್ಧರಂಗಕ್ಕೆ ಇಳಿದಂತಹ ಸ್ಥಿತಿ ಕಾಂಗ್ರೆಸ್‌ ಕಾರ್ಯಕರ್ತರದ್ದಾಗಿದೆ. ಅಭ್ಯರ್ಥಿಗಳನ್ನು ಗೆಲ್ಲಿಸುವ ಹೊಣೆಗಾರಿಕೆ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರ ಮೇಲಿದೆ.

‘ಚುನಾವಣೆಯಲ್ಲಿ ಸುಲಭವಾಗಿ ಗೆಲ್ಲಬಹುದು. ಆದರೆ, ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಅದು ಸಾಬೀತಾಗಿದೆ’ ಎಂದು ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಟಿಂಕರ್‌ ರಫೀಕ್‌ ಪ್ರತಿಕ್ರಿಯಿಸಿದರು.

ಬಿಜೆಪಿ ಗವಿಯಪ್ಪನವರ ಮೇಲೆ ಭರವಸೆ ಇಟ್ಟು, ಚುನಾವಣೆಯ ಜವಾಬ್ದಾರಿ ವಹಿಸಿದೆ. ಗವಿಯಪ್ಪನವರೇ ಅಳೆದು–ತೂಗಿ, ಜಾತಿ ಸಮೀಕರಣದೊಂದಿಗೆ ಟಿಕೆಟ್‌ ಹಂಚಿಕೆ ಮಾಡಿದ್ದಾರೆ. ಪ್ರಚಾರದ ನೇತೃತ್ವ ಕೂಡ ವಹಿಸಿಕೊಂಡಿದ್ದಾರೆ. ಸ್ವತಃ ಅವರೇ ಮುಂಚೂಣಿಯಲ್ಲಿ ನಿಂತು ಚುನಾವಣೆ ಮಾಡುತ್ತಿರುವುದರಿಂದ ಪಕ್ಷ ಹುಮ್ಮಸ್ಸಿನಲ್ಲಿದೆ. ಕಾಂಗ್ರೆಸ್‌ ಭದ್ರಕೋಟೆ ಒಡೆಯುವ ಹುರುಪಿನಲ್ಲಿದೆ. ಆದರೆ, ಮತದಾರ ಪ್ರಭು ಅಂತಿಮವಾಗಿ ಯಾರಿಗೆ ಅಧಿಕಾರದ ಗದ್ದುಗೆ ಕೊಡುವರು ಎಂಬುದನ್ನು ಕಾದು ನೋಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.