ADVERTISEMENT

ಮಕ್ಕಳ ದಿನಾಚರಣೆ: ಭರವಸೆಯ ಚಿತ್ರ ಕಲಾವಿದೆ ‘ನಿಧಿ’

‘ನಿಧಿ’ ಕನಸಿಗೆ ಬಣ್ಣ ತುಂಬಿದ ಪೋಷಕರು

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 14 ನವೆಂಬರ್ 2021, 7:30 IST
Last Updated 14 ನವೆಂಬರ್ 2021, 7:30 IST
ಕಂಪ್ಲಿಯ ಬಿ. ನಿಧಿ ಕುಂಚದಲ್ಲಿ ಅರಳಿದ ಚಿತ್ರಗಳು
ಕಂಪ್ಲಿಯ ಬಿ. ನಿಧಿ ಕುಂಚದಲ್ಲಿ ಅರಳಿದ ಚಿತ್ರಗಳು   

ಕಂಪ್ಲಿ: ಸ್ಥಳೀಯ ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆಯ 6ನೇ ತರಗತಿ ವಿದ್ಯಾರ್ಥಿನಿ ಬಿ. ನಿಧಿ ಚಿತ್ರಕಲೆ ಮೂಲಕ ಎಲ್ಲರ ಗಮನಸೆಳೆಯುತ್ತಿದ್ದಾಳೆ.

ನಿಧಿಗೆ ಬಾಲ್ಯದಿಂದಲೇ ಚಿತ್ರಕಲೆ ಎಂದರೆ ಪಂಚಪ್ರಾಣ. ಅಪ್ಪ ತಂದುಕೊಡುತ್ತಿದ್ದ ಬಣ್ಣದ ಪೆನ್ಸಿಲ್‌ಗಳಲ್ಲಿ ಪುಸ್ತಕ ತುಂಬಾ ಗೀಚುತ್ತಿದ್ದಳು. ಆಕೆಯಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಇರುವುದನ್ನು ಗಮನಿಸಿದ ಪೋಷಕರು ಪ್ರೋತ್ಸಾಹ ನೀಡಿದರು. ಈಗ ಆಕೆ ಉತ್ತಮ ಕಲಾವಿದೆಯಾಗಿ ಹೊರಹೊಮ್ಮಿದ್ದಾಳೆ.

ವಾಟರ್ ಪೇಂಟಿಂಗ್ (ಜಲ ವರ್ಣ), ಪೆನ್ಸಿಲ್ ಸ್ಕೆಚ್, ಮಂಡಲ ಆರ್ಟ್ (ಕಲ್ಪನೆ ಚಿತ್ರ), ಆಯಿಲ್ ಮತ್ತು ವಾಲ್ ಪೇಂಟಿಂಗ್‍ಗಳನ್ನು ಸುಂದರವಾಗಿ ಚಿತ್ರಿಸುವುದನ್ನು ಕರಗತ ಮಾಡಿಕೊಂಡಿದ್ದಾಳೆ.ಜಲಪಾತ, ಸುಂದರ ಪರಿಸರ, ಗ್ರಾಮೀಣ ಸೊಗಡು, ಬಣ್ಣದ ಚಿಟ್ಟೆ, ನಾಡಿನ ದಾರ್ಶನಿಕರ ಚಿತ್ರಗಳು, ಮಣ್ಣಿನ ಕಲಾಕೃತಿಗಳು ಸೇರಿದಂತೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳು ನಿಧಿ ಕಲಾ ಕುಂಚದಲ್ಲಿ ಅರಳಿವೆ.

ADVERTISEMENT

ಸ್ಥಳೀಯ ವಿವಿಧ ಶಾಲೆಗಳು ಸೇರಿದಂತೆ ಸಂಘ, ಸಂಸ್ಥೆಗಳು ಏರ್ಪಡಿಸುವ ಸಮಾರಂಭದಲ್ಲಿ ನಿಧಿಯ ಚಿತ್ರ ಪ್ರದರ್ಶನ ನಡೆದಿವೆ. ಪಟ್ಟಣದ ಜೆಸಿಐ ಸೋನಾ ಸಂಸ್ಥೆ ಕಳೆದ ಜುಲೈನಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಚಿತ್ರ ಕಲಾ ಸ್ಪರ್ಧೆಯಲ್ಲಿ 7ನೇ ಸ್ಥಾನ ಪಡೆದಿದ್ದಾಳೆ.‘ಚಿತ್ರಗಳ ಮೂಲಕ ನನ್ನ ಭಾವನೆಗಳನ್ನು ಅಭಿವ್ಯಕ್ತಪಡಿಸಿದ್ದೇನೆ. ವಿದ್ಯಾಭ್ಯಾಸದ ಜೊತೆಗೆ ಚಿತ್ರಕಲೆಯನ್ನು ಮುಂದುವರಿಸುತ್ತೇನೆ’ ಎಂದು ವಿದ್ಯಾರ್ಥಿನಿ ಬಿ. ನಿಧಿ ಮನದಾಳ ವ್ಯಕ್ತಪಡಿಸಿದಳು.

ನಿಧಿಯನ್ನು ಗುರುತಿಸುವ ಕಣ್ಣುಗಳು, ಚಪ್ಪಾಳೆ ತಟ್ಟುವ ಕೈಗಳು ಹೆಚ್ಚಾದಾಗ ಮುಂದೊಂದು ದಿನ ನಾಡು ಗುರುತಿಸುವ ಚಿತ್ರಕಲಾವಿದೆಯಾಗಿ ಹೊರಹೊಮ್ಮುವ ಎಲ್ಲ ಶಕ್ತಿ ಇದೆ. ಜೊತೆಗೆ ನಮ್ಮ ಉತ್ತೇಜನವು ಇದೆ ಎಂದು ತಂದೆ ಬಿ. ಮಲ್ಲಿಕಾರ್ಜುನ, ತಾಯಿ ಬಿ. ದುರ್ಗಾ ಲಕ್ಷ್ಮಿ ತಿಳಿಸಿದರು.

‘ಬೆಳೆಯುವ ಸಿರಿ ಮೊಳಕೆಯಲ್ಲಿ ಎನ್ನುವಂತೆ ನಮ್ಮ ಶಾಲೆಯ ವಿದ್ಯಾರ್ಥಿನಿ ನಿಧಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಾದ ಚಿತ್ರಕಲೆಯಲ್ಲಿಯೂ ಮಿಂಚುತ್ತಿದ್ದಾಳೆ’ ಎಂದು ವಿದ್ಯಾಸಾಗರ ಆಂಗ್ಲ ಮಾಧ್ಯಮ ವಸತಿ ಶಾಲೆ ಪ್ರಾಚಾರ್ಯ ಪಿ. ನಾಗೇಶ್ವರರಾವ್ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.