ಬಳ್ಳಾರಿ: ‘ಎಷ್ಟೇ ಒತ್ತಡ ಹಾಕಿದರೂ, ಕಾಮಗಾರಿ ಪೂರ್ಣಗೊಳ್ಳದೇ ಗಡಿಗಿ ಚೆನ್ನಪ್ಪ ವೃತ್ತದ ಗಡಿಯಾರ ಗೋಪುರ (ಕ್ಲಾಕ್ ಟವರ್) ಉದ್ಘಾಟಿಸಲು ಸಾಧ್ಯವಿಲ್ಲ’ ಎಂದು ಶಾಸಕ ನಾರಾ ಭರತ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಕ್ಲಾಕ್ ಟವರ್ ಉದ್ಘಾಟಿಸಬೇಕಿದ್ದರೆ ಕೆಲಸ ಪೂರ್ಣಗೊಳ್ಳಬೇಕು. ಕೆಲಸ ಸರಿಯಾಗಿ ಆಗಿಲ್ಲ ಎಂದರೆ ಭವಿಷ್ಯದಲ್ಲಿ ನನ್ನನ್ನೇ ದೂರಲಾಗುತ್ತದೆ. ಆದ್ದರಿಂದ ಕೆಲಸ ಪೂರ್ಣಗೊಳಿಸಿ ಉದ್ಘಾಟಿಸಲಾಗುವುದು’ ಎಂದರು.
‘ಎರಡು ಮೂರು ತಿಂಗಳು ನಾಗರಿಕರಿಗೆ ಕಷ್ಟ ಆಗಬಹುದು. ಆದರೆ, 50 ವರ್ಷಗಳವರೆಗೆ ಉಳಿಯುವ ನಿರ್ಮಿತಿ ಅದು. ಎಲ್ಲವನ್ನೂ ಪರಿಶೀಲಿಸಿ, ಸುಂದರವಾಗಿ ಕಾಣುವಂತೆ ಮಾಡಿ ಉದ್ಘಾಟಿಸುತ್ತೇವೆ’ ಎಂದು ಹೇಳಿದರು.
‘ಜನ ಎಷ್ಟೇ ಒತ್ತಡ ಹಾಕಿದರೂ ಉದ್ಘಾಟಿಸಲು ಸಾಧ್ಯವಿಲ್ಲ. ಕಾಮಗಾರಿಯಲ್ಲಿ ಗುಣಮಟ್ಟ ಬೇಕು. ಸಣ್ಣ ಪುಟ್ಟ ಸಮಸ್ಯೆಗಳಿಗೆ ಮತ್ತೆ ರಿಪೇರಿ ಮಾಡುವಂತೆ ಆಗಬಾರದು. ಕ್ಲಾಕ್ ಟವರ್ ಉದ್ಘಾಟನೆಗೆ ಸಮಯ ಮಿತಿ ಹಾಕಿಕೊಳ್ಳಲಾಗದು. ನಿರ್ಮಾಣ ಕಾರ್ಯ ಪೂರ್ಣವಾಗಬೇಕು. ಕೆಲವು ಕಟ್ಟಡಗಳನ್ನು ತೆರವು ಮಾಡಬೇಕು. ಕೆಲವು ಕಟ್ಟಡಗಳ ತೆರವಿಗೆ ಕೋರ್ಟ್ ತಡೆ ಇತ್ತು. ಅದನ್ನು ತೆಗೆಸಬೇಕು, ತಾಂತ್ರಿಕ ಸಮಸ್ಯೆ ನಿವಾರಿಸಬೇಕು’ ಎಂದು ಅವರು ಹೇಳಿದರು.
ಅಡಿಗಲ್ಲು: ₹8.05 ಕೋಟಿ ವೆಚ್ಚದ, ಪೊಲೀಸ್ ಸಿಬ್ಬಂದಿಯ 36 ವಸತಿ ಗೃಹಗಳ ನಿರ್ಮಾಣಕ್ಕೆ ಶಾಸಕ ಭರತ್ ರೆಡ್ಡಿ ಗುರುವಾರ ನಗರದ ಡಿ.ಎ.ಆರ್. ಆವರಣದಲ್ಲಿ ಅಡಿಗಲ್ಲು ಹಾಕಿದರು.
ಈ ವೇಳೆ ಬಳ್ಳಾರಿ ವಲಯ ಪೊಲೀಸ್ ಉಪ ಮಹಾನಿರ್ದೇಶಕಿ ವರ್ತಿಕಾ ಕಟಿಯಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರವಿಕುಮಾರ್ ಮತ್ತಿತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.