ADVERTISEMENT

ಸಿ.ಎಂ. ಹೇಳಿಕೆ ತಪ್ಪಾಗಿ ಅರ್ಥೈಸುವುದು ಬೇಡ: ದೀಪಕ್‌ ಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2018, 12:02 IST
Last Updated 1 ನವೆಂಬರ್ 2018, 12:02 IST
ದೀಪಕ್ ಕುಮಾರ್ ಸಿಂಗ್‌
ದೀಪಕ್ ಕುಮಾರ್ ಸಿಂಗ್‌   

ಹೊಸಪೇಟೆ: ‘ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಯಾವುದೋ ಸಂದರ್ಭವನ್ನು ನೆನೆದು ಸಾಯುವ ಮಾತುಗಳನ್ನು ಆಡಿದ್ದಾರೆ ಹೊರತು ಬೇರೆ ಯಾವ ಕಾರಣಕ್ಕೂ ಅಲ್ಲ. ಅದನ್ನು ತಪ್ಪಾಗಿ ಅರ್ಥೈಸುವುದು ಬೇಡ’ ಎಂದು ಜೆ.ಡಿ.ಎಸ್‌. ಮುಖಂಡ ದೀಪಕ್‌ ಕುಮಾರ್‌ ಸಿಂಗ್‌ ಹೇಳಿದರು.

ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಯಾವುದೋ ಸಂದರ್ಭದಲ್ಲಿ ಮಾತನಾಡಿದ ವಿಷಯವನ್ನು ಬೆಳೆಸುವುದು ಸರಿಯಲ್ಲ. ಈಗ ಅದು ಮುಗಿದ ಅಧ್ಯಾಯವಾಗಿದೆ’ ಎಂದರು.

‘ಕಾಂಗ್ರೆಸ್ ಹಾಗೂ ಜೆ.ಡಿ.ಎಸ್‌. ಪಕ್ಷದ ಒಮ್ಮತದ ಅಭ್ಯರ್ಥಿಯಾಗಿ ವಿ.ಎಸ್‌.ಉಗ್ರಪ್ಪನವರು ಕಣಕ್ಕಿಳಿಸಲಾಗಿದೆ. ನಮ್ಮ ಪಕ್ಷದಿಂದ ಈಗಾಗಲೇ ಜಿಲ್ಲೆಯಾದ್ಯಂತ ಪ್ರಚಾರ ನಡೆಸಲಾಗಿದೆ. ವಿವಿಧ ಸಮಾಜದವರ ಜತೆ ಸಭೆ ನಡೆಸಿ, ಚುನಾವಣೆಯಲ್ಲಿ ಬೆಂಬಲಿಸುವಂತೆ ಕೇಳಿದ್ದೇವೆ. ವಾಲ್ಮೀಕಿ ಜನಾಂಗಕ್ಕೆ ಉಗ್ರಪ್ಪನವರು ಉತ್ತಮ ಕೆಲಸ ಮಾಡಿದ್ದಾರೆ. ಜನ ಅವರನ್ನು ಗೆಲ್ಲಿಸುತ್ತಾರೆ ಎಂಬ ಭರವಸೆ ಇದೆ’ ಎಂದು ಹೇಳಿದರು.

ADVERTISEMENT

‘ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ಸಮಾವೇಶದಲ್ಲಿ ನಾನು ಸೇರಿದಂತೆ ನಮ್ಮ ಪಕ್ಷದ ಮುಖಂಡರು ಭಾಗವಹಿಸಿದ್ದೆವು. ಸ್ಥಳೀಯ ಶಾಸಕ ಆನಂದ್‌ ಸಿಂಗ್‌ ಅವರು ಅವರದೇ ದಾರಿಯಲ್ಲಿ ಅವರು ಹೋಗುತ್ತಿದ್ದಾರೆ. ಅದಕ್ಕೆ ನಮ್ಮ ಅಭ್ಯಂತರವಿಲ್ಲ’ ಎಂದು ಪ್ರಶ್ನೆಗೆ ಪ್ರತಿಕ್ರಿಯಿಸಿದರು.

‘1990ರಿಂದ ರಾಜಕೀಯದಲ್ಲಿ ಇದ್ದೇನೆ. ಒಳಗೆ ಹೊರಗೆ ಒಂದೇ ತೆರನಾಗಿ ಇದ್ದೇನೆ. ಕುಟುಂಬ ಹಾಗೂ ರಾಜಕೀಯವನ್ನು ಪ್ರತ್ಯೇಕವಾಗಿ ನೋಡುತ್ತೇನೆ. ನನ್ನ ಸಹೋದರ ಪ್ರವೀಣ್‌ ಸಿಂಗ್‌ ಅವರು ಶಾಸಕ ಆನಂದ್‌ ಸಿಂಗ್‌ ಜತೆಗಿರುವುದು ಅವರ ವೈಯಕ್ತಿಕ ತೀರ್ಮಾನ. ಅವರು ಯಾರೊಂದಿಗೆ ಇರಬೇಕೆಂಬುದು ಅವರಿಗೆ ಬಿಟ್ಟದ್ದು. ನನ್ನ ನಿಲುವು ಸ್ಪಷ್ಟವಾದುದು. ಮೊದಲಿನಿಂದಲೂ ನನ್ನದೇ ಕಾರ್ಯಕರ್ತರ ಪಡೆಯೊಂದಿಗೆ ಕೆಲಸ ಮಾಡುತ್ತಿದ್ದೇನೆ. ಮುಂದೆಯೂ ಮಾಡಿಕೊಂಡು ಹೋಗುತ್ತೇನೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.