ADVERTISEMENT

ಆನಂದ್‌ ಸಿಂಗ್‌ ಮಗನ ಮದುವೆಯಲ್ಲಿ ಕಾಂಗ್ರೆಸ್‌ ಮುಖಂಡರು

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2019, 13:53 IST
Last Updated 1 ಡಿಸೆಂಬರ್ 2019, 13:53 IST
ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಆನಂದ್‌ ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್‌ ಕೊಟ್ಟಿರುವುದಕ್ಕೆ ಮುನಿಸಿಕೊಂಡು ಪ್ರಚಾರದಿಂದ ದೂರ ಉಳಿದಿರುವ ಪಕ್ಷದ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಅವರು ಭಾನುವಾರ ಹೊಸಪೇಟೆಯಲ್ಲಿ ನಡೆದ ಮದುವೆಯಲ್ಲಿ ಪತಿ ಶ್ರೀನಿವಾಸ ರೆಡ್ಡಿ ಹಾಗೂ ಕುಟುಂಬ ಸದಸ್ಯರೊಂದಿಗೆ ಪಾಲ್ಗೊಂಡಿದ್ದರು
ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ಆನಂದ್‌ ಸಿಂಗ್‌ ಅವರಿಗೆ ಬಿಜೆಪಿ ಟಿಕೆಟ್‌ ಕೊಟ್ಟಿರುವುದಕ್ಕೆ ಮುನಿಸಿಕೊಂಡು ಪ್ರಚಾರದಿಂದ ದೂರ ಉಳಿದಿರುವ ಪಕ್ಷದ ಮಹಿಳಾ ಮೋರ್ಚಾ ರಾಜ್ಯ ಘಟಕದ ಉಪಾಧ್ಯಕ್ಷೆ ರಾಣಿ ಸಂಯುಕ್ತಾ ಅವರು ಭಾನುವಾರ ಹೊಸಪೇಟೆಯಲ್ಲಿ ನಡೆದ ಮದುವೆಯಲ್ಲಿ ಪತಿ ಶ್ರೀನಿವಾಸ ರೆಡ್ಡಿ ಹಾಗೂ ಕುಟುಂಬ ಸದಸ್ಯರೊಂದಿಗೆ ಪಾಲ್ಗೊಂಡಿದ್ದರು   

ಹೊಸಪೇಟೆ: ಭಾನುವಾರ ನಗರದಲ್ಲಿ ನಡೆದ ಬಿಜೆಪಿ ಅಭ್ಯರ್ಥಿ ಆನಂದ್‌ ಸಿಂಗ್‌ ಅವರ ಮಗನ ಮದುವೆಯಲ್ಲಿ ಕಾಂಗ್ರೆಸ್‌ ಮುಖಂಡರು ಸಹ ಕಾಣಿಸಿಕೊಂಡರು.

ಒಂದೆಡೆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಮುಖಂಡರು ಆನಂದ್‌ ಸಿಂಗ್‌ ವಿರುದ್ಧ ಟೀಕಾ ಪ್ರಹಾರಗಳನ್ನು ಮಾಡುತ್ತಿದ್ದರೆ, ಇನ್ನೊಂದೆಡೆ ಆ ಪಕ್ಷದ ವಿಧಾನ ಪರಿಷತ್‌ ಸದಸ್ಯರಾದ ಅಲ್ಲಂ ವೀರಭದ್ರಪ್ಪ, ಕೆ.ಸಿ. ಕೊಂಡಯ್ಯ, ಅದೇ ಪಕ್ಷದ ಸಿಂಗ್‌ ಸಹೋದರರಾದ ಜಿಲ್ಲಾ ಪಂಚಾಯಿತಿ ಸದಸ್ಯ ಪ್ರವೀಣ್‌ ಸಿಂಗ್‌, ದೀಪಕ್‌ ಸಿಂಗ್‌ ಮದುವೆಯಲ್ಲಿ ಭಾಗವಹಿಸಿ, ಕೆಲಹೊತ್ತು ಅಲ್ಲಿ ಕಾಲ ಕಳೆದರು.

ಪ್ರವೀಣ್‌ ಸಿಂಗ್‌ ಕೊನೆಯವರೆಗೂ ಅಲ್ಲೇ ಇದ್ದರು. ದೀಪಕ್‌ ಸಿಂಗ್‌ ಕೆಲಹೊತ್ತು ಇದ್ದು ಅಲ್ಲಿಂದ ನಿರ್ಗಮಿಸಿದರು. ಆನಂದ್‌ ಸಿಂಗ್‌ ಸೋದರ ಅಳಿಯ ಸಂದೀಪ್‌ ಸಿಂಗ್‌ ಪ್ರವೇಶ ದ್ವಾರದಲ್ಲಿ ನಿಂತು, ಎಲ್ಲರನ್ನೂ ಬರಮಾಡಿಕೊಂಡರು. ವಿಜಯನಗರ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಆನಂದ್‌ ಸಿಂಗ್‌ ಅವರು ಇತ್ತೀಚೆಗೆ ಬೆಂಗಳೂರಿಗೆ ಕರೆದೊಯ್ದ ನಿಯೋಗದ ಜತೆ ಕೊಂಡಯ್ಯ ಹೋಗಿದ್ದರು.

ADVERTISEMENT

ಇದಕ್ಕೂ ಮುನ್ನ ಮದುವೆಗೆ ಕೊಟ್ಟೂರು ಸ್ವಾಮಿ ಸಂಸ್ಥಾನ ಮಠದ ಸಂಗನಬಸವ ಸ್ವಾಮೀಜಿ ವಧು–ವರನನ್ನು ಆಶೀರ್ವದಿಸಿದರು. ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಸಂಸದೀಯ ವ್ಯವಹಾರ ಖಾತೆ ಸಚಿವ ಜೆ.ಸಿ. ಮಾಧುಸ್ವಾಮಿ, ಶಾಸಕ ರಾಜುಗೌಡ, ಸಂಸದ ವೈ.ದೇವೇಂದ್ರಪ್ಪ, ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಎನ್‌. ರವಿಕುಮಾರ, ಆರ್‌.ಎಸ್‌.ಎಸ್‌. ಮುಖಂಡ ಕಲ್ಲಡ್ಕ ಪ್ರಭಾಕರ್‌ ಭಟ್‌, ಮುಖಂಡರಾದ ನೇಮರಾಜ ನಾಯ್ಕ, ಸುರೇಶಬಾಬು ಮದುವೆಯಲ್ಲಿ ಭಾಗವಹಿಸಿದ್ದರು.ಆನಂದ್‌ ಸಿಂಗ್‌ಗೆ ಟಿಕೆಟ್‌ ಕೊಟ್ಟಿರುವುದಕ್ಕೆ ಮುನಿಸಿಕೊಂಡಿರುವ ಬಿಜೆಪಿ ಮುಖಂಡ ಎಚ್‌.ಆರ್‌.ಗವಿಯಪ್ಪ ಆ ಕಡೆ ಸುಳಿಯಲಿಲ್ಲ.

ಭದ್ರತೆಗೆ ಬೌನ್ಸರ್‌:ಮದುವೆಯಲ್ಲಿ ಭದ್ರತೆಗೆ, ಜನರನ್ನು ನಿಯಂತ್ರಿಸುವುದಕ್ಕಾಗಿ ಬೌನ್ಸರ್‌ಗಳನ್ನು ನಿಯೋಜಿಸಲಾಗಿತ್ತು. ವೇದಿಕೆಯ ಮೇಲೆ, ಅದರ ಸುತ್ತಮುತ್ತ ಅವರು ನಿಂತು, ಜನರನ್ನು ನಿಯಂತ್ರಿಸುತ್ತಿದ್ದರು. ಪ್ರವೇಶ ದ್ವಾರ, ಶಾಮಿಯಾನದ ಪ್ರವೇಶ ದ್ವಾರದಲ್ಲಿ ನಿಂತುಕೊಂಡಿದ್ದ ಅವರು, ಪರಸ್ಪರ ವಾಕಿಟಾಕಿಯಲ್ಲಿ ಮಾತನಾಡುತ್ತ ವ್ಯವಸ್ಥೆ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.