ತೆಕ್ಕಲಕೋಟೆ: 'ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅಡಿ 2023-24ನೇ ಸಾಲಿನಲ್ಲಿ ತಾಲ್ಲೂಕಿನ 1297 ಫಲಾನುಭವಿ ರೈತರು ಒಟ್ಟು ₹22.24 ಕೋಟಿ ವಿಮೆ ಪರಿಹಾರ ಪಡೆದಿದ್ದಾರೆ' ಎಂದು ತಾಲ್ಲೂಕು ಕೃಷಿ ಉಪನಿರ್ದೇಶಕ ಮಂಜುನಾಥ ರೆಡ್ಡಿ ತಿಳಿಸಿದರು.
ಪಟ್ಟಣದ ಕೃಷಿ ಸಂಪರ್ಕ ಕೇಂದ್ರದಲ್ಲಿ ಬುಧವಾರ ನಡೆದ ಫಸಲ್ ಭೀಮಾ ಯೋಜನೆ ಅಭಿಯಾನ ಕುರಿತು ರೈತರಿಗೆ ಕರಪತ್ರ ಹಂಚುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಬಲಕುಂದಿ, ಕರೂರು, ಬೀರಹಳ್ಳಿ, ಕೆ.ಬೆಳಗಲ್ಲು, ಕೊಂಚಗೇರಿ, ಕುರುವಳ್ಳಿ, ರಾವಿಹಾಳ್, ಶಾನವಾಸಪುರ, ಸಿರಿಗೇರಿ ತೆಕ್ಕಲಕೋಟೆ ಸೇರಿದಂತೆ ತಾಲ್ಲೂಕಿನ ವಿವಿಧ ಗ್ರಾಮಗಳ ರೈತರು ಬೆಳೆವಿಮೆ ಲಾಭ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು.
'ಸಿರುಗುಪ್ಪ ತಾಲ್ಲೂಕಿನ ರೈತರು ಮುಂಗಾರು ಬೆಳೆಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ವಿಮಾ ಯೋಜನೆ ಅಡಿಯಲ್ಲಿ ಬೆಳೆವಿಮೆ ಮಾಡಿಸಿ ಯೋಜನೆಯ ಲಾಭ ಪಡೆಯಿರಿ' ಎಂದು ಸಲಹೆ ನೀಡಿದರು.
2025-26 ಸಾಲಿನ ಮುಂಗಾರು ಮಳೆ ಆಶ್ರಿತ ಭತ್ತಕ್ಕೆ ₹516, ನೀರಾವರಿ ಭತ್ತ ಪ್ರತಿ ಎಕರೆಗೆ ₹755 ಹಾಗೂ ನೀರಾವರಿ ಜೋಳ ಪ್ರತಿ ಎಕರೆಗೆ ₹367 ಪಾವತಿಸಿ ಬೆಳೆ ವಿಮೆಯನ್ನು ಮಾಡಿಸಬೇಕು. ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಗ್ರಾಮ ಒನ್ ಅಥವಾ ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಸಂಪರ್ಕಿಸಬಹುದು ಎಂದು ತಿಳಿಸಿದರು.
ಮಳೆಯಾಶ್ರಿತ ಹಾಗೂ ನೀರಾವರಿ ಪ್ರದೇಶಕ್ಕೆ ಆಗಸ್ಟ್ 16 ಒಳಗಾಗಿ ವಿಮಾ ಕಂತು ಪಾವತಿಸಿ ನೋಂದಾಯಿಸಿ ಕೊಳ್ಳುವಂತೆ ಸಲಹೆ ನೀಡಿದರು.
ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಪುರುಷೋತ್ತಮ, ಪರಮೇಶ್ವರರೆಡ್ಡಿ, ರಾಜಶೇಖರ, ಸಿಬ್ಬಂದಿ ನಾಗೇಶ ಹಾಗೂ ರೈತರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.