ಕುರುಗೋಡು: ವಿಶ್ವಗುರು ಬಸವಣ್ಣನವರು ತಮ್ಮ ವಚನಗಳ ಮೂಲಕ 12ನೇ ಶತಮಾನದಲ್ಲಿಯೇ ವಿಶ್ವಕ್ಕೆ ಸಮಾನತೆಯ ಸಂದೇಶ ಸಾರಿದ್ದಾರೆ ಎಂದು ಅಖಿಲ ಭಾತರ ಶರಣ ಸಾಹಿತ್ಯ ಪರಿಷತ್ ರಾಜ್ಯ ಘಟಕದ ಅಧ್ಯಕ್ಷ ಸಿ.ಸೋಮಶೇಖರ್ ಹೇಳಿದರು.
ಇಲ್ಲಿಗೆ ಸಮೀಪದ ಸಿರಿಗೇರಿ ಗ್ರಾಮದಲ್ಲಿ ಅನ್ನಪೂರ್ಣ ಪ್ರಕಾಶನ ಸಂಸ್ಥೆ ಈಚೆಗೆ ಆಯೋಜಿಸಿದ್ದ ಅನುಭವ ಮಂಟಪ ಒಂದು ಚಿಂತನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವರ್ಣಬೇಧ ಪದ್ಧತಿ ಆಚರಣೆಯಲ್ಲಿದ್ದ ಕಾಲಘಟ್ಟದಲ್ಲಿ ಬಸವಣ್ಣನವರು ಅನುಭವ ಮಂಟಪ ಸ್ಥಾಪಿಸಿ ಸರ್ಮರ್ಧಮಿಯರಿಗೂ ವಿಷಯ ಹಂಚಿಕೊಳ್ಳಲು ಅವಕಾಶ ನೀಡಿದ್ದರು. ಲಿಂಗತಾರತಮ್ಯವಿಲ್ಲದೆ ಮಹಿಳೆಯರೂ ಭಾಗವಹಿಸಿದ್ದು ಸಮಾನತೆಗೆ ಮತ್ತೊಂದು ನಿರ್ದಶನ ಎಂದರು.
ಅಸ್ಪೃಶ್ಯತೆ ಹೋಗಲಾಡಿಸಿ ಸಮಸಮಾಜ ನಿರ್ಮಾಣ ಮಾಡಿದ ಬಸವಣ್ಣನವರ ಚಿಂತನೆಗಳನ್ನು ಎಲ್ಲರೂ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಅನ್ನಪೂರ್ಣ ಪ್ರಕಾಶನದ ಸಿರಿಗೇರಿ ಯರಿಸ್ವಾಮಿ ಕಾರ್ಯಕ್ರಮ ಕುರಿತು ಪ್ರಸ್ತಾವಿಕ ಮಾತನಾಡಿದರು. ಕಗ್ಗಲ್ಲು ಗ್ರಾಮದ ದೊಡ್ಡಬಸವ ಗವಾಯಿ ಮತ್ತು ತಂಡದಿಂದ ಬಸವಣ್ಣನವರ ವಚನಗಳನ್ನು ಸುಶ್ರಾವ್ಯವಾಗಿ ಹಾಡಿ ಜನಮನ ರಂಜಿಸಿದರು.
ಶಂಭುಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷ ಹೂಗಾರ ಬಸವರಾಜ್, ಮುಖ್ಯಶಿಕ್ಷಕ ಎನ್.ಪಂಪಾಪತಿ ಮತ್ತು ಎಚ್.ಎಂ.ಶಶಿಧರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.