ಬಳ್ಳಾರಿ: ಬಳ್ಳಾರಿ ನಗರದ ಶ್ರೀಕನಕ ದುರ್ಗಮ್ಮ ದೇವಸ್ಥಾನದ ಆವರಣದಲ್ಲಿ ಹಿಂದೂ ಧಾರ್ಮಿಕ ದತ್ತಿ ಹಾಗೂ ಮುಜರಾಯಿ ಇಲಾಖೆ ಮತ್ತು ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ದಸರಾ ಮಹೋತ್ಸವವನ್ನು ಶಾಸಕ ನಾರಾ ಭರತ್ ರೆಡ್ಡಿ ಸೋಮವಾರ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು, ಕನಕದುರ್ಗಮ್ಮ ದೇವಿಯ ಸಿಡಿ ಬಂಡಿ ಉತ್ಸವ ವೇಳೆ ನಗರದ ಎಲ್ಲ ಜಾತಿ-ಧರ್ಮದವರು ಪಾಲ್ಗೊಳ್ಳುತ್ತಾರೆ, ಜಿಲ್ಲೆಯ ಸರ್ವ ಜನಾಂಗದವರ ಮೇಲೆ ಕನಕದುರ್ಗಮ್ಮ ದೇವಿಯ ಕೃಪೆ ಇದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ಕೆ ಮಾತನಾಡಿ, ‘ಬಳ್ಳಾರಿ ಜಿಲ್ಲೆ ರಾಜ್ಯದಲ್ಲಿ ಮಹತ್ವದ ಜಿಲ್ಲೆ. ಈ ಜಿಲ್ಲೆಯಲ್ಲಿ ಸೇವೆ ಮಾಡುವುದು ನನ್ನ ಪುಣ್ಯ. ತಾಯಿ ಕನಕದುರ್ಗಮ್ಮ ನಮ್ಮ ಜಿಲ್ಲೆಯ, ನಾಡಿನ ಜನರಿಗೆ ಸುಖ ಸಮೃದ್ಧಿ ಸಂಪತ್ತು ಸಂಭ್ರಮವನ್ನು ಕರುಣಿಸಲಿ’ ಎಂದು ಹಾರೈಸಿದರು.
ಜಿಲ್ಲಾಡಳಿತದ ವತಿಯಿಂದ ಕನಕದುರ್ಗಮ್ಮ ದೇವಿಗೆ ಪೂಜೆ ಸಲ್ಲಿಸಲಾಯಿತು. ಉತ್ಸವ ಮೂರ್ತಿಯ ಪಲ್ಲಕ್ಕಿ ಮೆರವಣಿಗೆಗೆ ಚಾಲನೆ ನೀಡಲಾಯಿತು.
ಮೇಯರ್ ಮುಲ್ಲಂಗಿ ನಂದೀಶ್, ಹೆಚ್ಚುವರಿ ಜಿಲ್ಲಾಧಿಕಾರಿ ಮೊಹಮದ್ ಝುಬೇರ, ಮುಜರಾಯಿ ಇಲಾಖೆಯ ಇಒ ಹನುಮಂತಪ್ಪ, ವಿಭಾಗಾಧಿಕಾರಿ ಪ್ರಮೋದ್, ಪಾಲಿಕೆಯ ಸದಸ್ಯ ಪಿ.ಗಾದೆಪ್ಪ, ಹನುಮಂತಪ್ಪ ಹಾಗೂ ರಾಮಾಂಜನೇಯ ಸೇರಿದಂತೆ ಹಲವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.